ಬಂದೆನ್ನ ಮನಮಂದಿರದಲಿ ನಿಲ್ಲೊ | ಹೇ ಶ್ರೀನಿವಾಸ
ಬಂದೆನ್ನ ಮನಮಂದಿರದಲಿ ನಿಲ್ಲೊ ಪ.
ಇಂದಿರೇಶ ವೈಕುಂಠದಿಂದ ನೀ
ಬಂದು ಈಗ ಎನ್ನ ಹೃದಯ ಕಮಲದಿ ಅ.ಪ.
ಜಗದಂತರಾತ್ಮ ನಿರ್ಮಲಾತ್ಮ | ನಿರ್ಗತ ದುರಿತಾತ್ಮ
ನಿಗಮಾದಿಗಳೊಂದ್ಯ ನೀ ನಿತ್ಯಾತ್ಮ | ಜೀವಂತರಾತ್ಮ
ಸುಗುಣವಂತ ನಿನ್ನ ಬಗೆ ಬಗೆ ಮಹಿಮೆಯ
ಪೊಗಳಬಲ್ಲೆನೆ ನಾ ಖಗವಾಹನನೆ 1
ಅರಿಯೇನೋ ಅನ್ಯರ ಹರಿ ಸರ್ವೇಶ | ಹೃತ್ಕಮಲದಿ ವಾಸ
ಪರಿಹಾರಗೈಸೊ ಈ ಭವಕ್ಲೇಶ | ನಂಬಿದೆ ಸರ್ವೇಶ
ಅರಘಳಿಗೆ ನಿನ್ನಗಲಿರಲಾರೆನೊ
ಸಿರಿಸಹಿತದಿ ನಿನ್ನರಮನೆಯಿಂದಲಿ 2
ಅರುಹಿದರೆನಗೆ ಶ್ರೀ ಗುರುಗಳು ಇಂದು | ನೀ ರಕ್ಷಕನೆಂದು
ಕರಕರೆಗೊಳಿಪುದು ಧರ್ಮವೆ ನಿಂದು | ನೀ ಕಾಯಲಿಬೇಕಿಂದು
ಸರಿಯಲ್ಲವು ಈ ತೆರದಲಿ ತೊರೆವುದು
ಶರಣ ರಕ್ಷಕನೆಂಬೊ ಬಿರುದು ಪೊತ್ತಿಲ್ಲವೆ 3
ಎಂತೆಂತು ಸಹಿಸಲಿ ಈ ಭವಕ್ಲೇಶ | ಜೀವಾಂತರವಾಸ
ಕಂತುಪಿತ ಎಣಿಪರೆÀ ಎನ್ನಯ ದೋಷ | ಸರಿಯಲ್ಲ ಸುರೇಶ
ಇಂತು ನಿನಗೆ ಒಪ್ಪಿಸಿದರೊ ಗುರುಗಳು
ಚಿಂತಿತಾರ್ಥ ನಿನಗೆನ್ನ ತರ ತಿಳಿಯದೆ 4
ಬೆಟ್ಟದ ಒಡೆಯ ಬೇಗನೆ ಬಾರೊ | ಹೃತ್ಕಮಲದಿ ತೋರೊ
ಶ್ರೇಷ್ಠ ಶ್ರೀ ಗುರುಗಳ ಕರುಣವ ಬೀರೊ | ಸಲಹುವರಿನ್ಯಾರೊ
ಮುಟ್ಟಿ ಭಜಿಪೆ ನಿನ್ನ ಶ್ರೇಷ್ಠ ಪದಂಗಳ
ಸೃಷ್ಟೀಶ ಗೋಪಾಲಕೃಷ್ಣವಿಠ್ಠಲನೆ 5
****