ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀವೆಂಕಟೇಶ ದೇವರ ಮಹಿಮಾ ಸುಳಾದಿ
ರಾಗ ರೀತಿಗೌಳ
ಧ್ರುವತಾಳ
ಮೀನನಾಗಿ ಕಮಠನಾಗಿ ಸೂಕರನಾಗಿ
ಮಾನವನಾಗಿ ಮತ್ತೆ ಸಿಂಗನಾಗಿ
ದಾನವ ಬೇಡುವನಾಗಿ ಇದನೆ ವೀವನಾಗಿ ಕಾ -
ನನ ವಾಸಿಯಾಗಿ ಗೊಲ್ಲನಾಗಿ ದಿಗಂಬ -
ರನಾಗಿ ರಾವುತನಾಗಿ ತಿರಿಗಿ ತಿರಿಗಿ
ನಾನಿಪ್ಪೆ ಬಲು ಜನುಮಾ ಧರಿಸಿ ಬಿಡದೆ
ಈ ನಾಗಾಗಿರಿಯಲ್ಲಿ ನಿನ್ನ ಸೇವೆಗೋಸುಗ
ಜ್ಞಾನ ಪೂರ್ವಕದಿಂದ ಸಂಚರಿಸುವೆ
ಶ್ರೀನಾಥ ಭೂನಾಥ ಸುರನಾಥ ಜಗನ್ನಾಥ
ದೀನ ಬಾಂಧವ ದಾನವಸೂದನ
ಏನೆಂಬೆನಯ್ಯಾ ಎನಗಿದೆ ಕರುಣಿಪದು
ನಿನೀದರವಿನಾ ವರವೆಗ್ಗಳ
ಧ್ಯಾನಾದಲ್ಲಿ ಬೇಡಿನೊ ನಿನ್ನ ಪಾದವೆ ಸಾಕ್ಷಿ
ಹಾನಿ ವೃದ್ಧಿಗಳಿಗೆ ಅಂಜುವದೇನೊ
ನೀನೆ ತಂದೆಯಾದರೆ ತನಗೆ ತಾನೆ ಬಾರವು
ಅನಿರ್ಜರಾದ್ಯರಿಗೆ ಒಮ್ಯಾದರೂ
ಧೇನು ಕರಿಯುವದೆ ಬಂದು ಬಾಯೊಳಗೆ ಪಾಲು
ತಾನಾಗಿ ಕರವುತಿರೆ ಗುಟಕರಿಸಾದೆ
ಓಣಿಯೊಳಗೆ ಪರಿವಾ ಕುತ್ಸಿತೋದಕ ಬಯಸಿ
ಪಾಣಿಯಲ್ಲಿ ಪಿಡಿದು ಕುಡಿವ ಮಂದ -
ಮಾನವ ನಾನಾಹೆ ನಿನ್ನ ದಾಸರ ಚರಣ
ರೇಣು ಸೋಕಿದ ಮೇಲೆ ಎಂದಾದರೂ
ಶ್ರೀನಿವಾಸಾದ್ರಿವಾಸ ವಿಜಯವಿಟ್ಠಲ ವೆಂಕಟ
ಪ್ರಾಣನಾಗಿಪ್ಪ ಪ್ರೀಯಂಗೆ ಪ್ರೀಯ ॥ 1 ॥
ಮಟ್ಟತಾಳ
ಆವಾವ ಜನುಮಗಳು ಬಂದರಾದಡೆ ನಿನ್ನ
ಸೇವೆಯೊಳಗಿಪ್ಪ ಜ್ಞಾನವೆ ಪಾಲಿಪದು
ಪೂವು ಫಲ ಮಿಕ್ಕಾ ದ್ರವ್ಯಂಗಳಿಂದಲಿ
ದೇವ ನಿನ್ನ ಪದಕೆ ಸಲ್ಲುವಂತೆ ಮಾಡಿ
ಪಾವನ ಮಾಡುವದು ಪತಿತನ ಉದ್ಧರಿಸಿ
ಶ್ರೀವರ ತಿರುವೆಂಗಳ ವಿಜಯವಿಟ್ಠಲ ಕೃಷ್ಣಾ
ಕಾವಕರುಣನಿಧಿ ನೀಲಗಿರಿಯವಾಸ ॥ 2 ॥
ತ್ರಿವಿಡಿತಾಳ
ದಯಮಾಡಿದೆನ್ನೊಡಿಯಾ ದಾಸ ಗೊಲಿದು ಬಂದು
ಭಯವೆ ಬಡಿಸುತಿಪ್ಪ ಭವವೆಂಬ ಮಾರಿಯ
ಭಯಕೆ ಒಳಗಾಗಿ ಇದ್ದ ಮಾನವಂಗೆ ಅ -
ಭಯವಿತ್ತು ವಿಪತ್ತು ಪರಿಹರಿಸುವೆ
ತ್ರಯಲೋಕದೊಳು ನಿನಗೆ ಈಡಾರು ಭಕ್ತರ
ಹುಯಲಿಗೆ ಒದಗಿ ಬಂದಾಕ್ಷಣದಲ್ಲಿ
ಕ್ರಯವಾಗಗೊಡದಂತೆ ಅವನ ಪಾಲಿಸುವೆ ಅ -
ಕ್ಷಯ ಮೂರುತಿ ನಿನ್ನ ಶಕ್ತಿ ಏನು ಬಲ್ಲೆ
ಬಯಲಾಗಿ ಪೋಗೋವು ಕ್ರೂರ ಗ್ರಹಗಳೆಲ್ಲ
ಅಯುತವಾದರೆ ನಿಮಿಷಮಾತ್ರದಲ್ಲಿ
ಜಯ ಜಯ ಜಯದೇವ ನಿನ್ನವರಿಗೆ ಅಪ -
ಜಯ ಉಂಟೆನೋ ನೂರು ಕಲ್ಪವಾಗೆ
ಭಯದೂರ ವೆಂಕಟಗಿರಿವಾಸ ಸಿರಿ ವಿ -
ಜಯವಿಟ್ಠಲರೇಯಾ ಸತ್ಕೀರ್ತಿಪುರುಷ ॥ 3 ॥
ಅಟ್ಟತಾಳ
ದೇಶದೊಳಗೆ ನಿನ್ನ ದಾಸನೆಂದರು ದಾವದಾವದು ಭಯವೊ
ಲೇಶ ಬಿಡದೆ ಎನ್ನ ಪಾಲಿಸಿದರೆ ಲೇಸು
ಲೇಸು ನಿನಗೆಂಬದು
ಭೂಷಣ ಒಪ್ಪುವದು ಸಕಲ ಸುರರೊಳು
ದಾಸರ ಪೊರೆವ ಕರುಣಿ ಎಂದು
ಏಸೇಸು ಕಲ್ಪಕ್ಕೆ ಇದಕನ್ಯವಾದ
ಕೋಶ ಮತ್ತಾವದು ಕಾಣೆನೊ
ಶೇಷಾದ್ರಿವೆಂಕಟ ವಿಜಯವಿಟ್ಠಲರೇಯಾ
ಕೇಶವ ಕ್ಲೇಶವಿನಾಶನ ॥ 4 ॥
ಆದಿತಾಳ
ಇಂದೆಯಾಗಲಿ ಮುಂದೆಯಾಗಲಿ
ಎಂದೆಂದಿಗೆಯಾದರು ಒಂದೊಂದಾಗಿ ಅನೇಕ ಜನುಮ
ಬಂದು ಪ್ರಾಪುತವಾದರು
ಇಂದಿರೇಶ ನಿನ್ನವರಂಘ್ರಿ
ಪೊಂದುವ ಜ್ಞಾನ ದೃಢವಿರಲಿ
ಮಂದನಾಗಿ ದುರ್ಜನರೊಡನೆ
ಸಂದುವ ಮಾರ್ಗವ ಕೊಡದಿರು
ಸುಂದರ ಗಿರಿವಾಸ ವೆಂಕಟಾದ್ರಿ ವಿಜಯವಿಠಲ ದಾತಾರ
ವಂದಿಸುವೆ ನಿತ್ಯದಲ್ಲಿ ಸುಖ ಸಿಂಧುವಿನೊಳಗಿಡು ಎನ್ನಾ ॥ 5 ॥
ಜತೆ
ರಕ್ಷಿಯಾದರು ವೀರವೈಷ್ಣವರ ಪಾದಕಾಹೆ
ಮೋಕ್ಷಾದ್ರಿ ವೆಂಕಟ ವಿಜಯವಿಟ್ಠಲರೇಯಾ ॥
***************