..
kruti by Nidaguruki Jeevubai
ಪತಿಮಂದಿರದಲಿ ನೀ ಸುಖವಾಗಿ ಬಾಳು ನಿನ್ನ
ಪತಿಗಹಿತಕರ ಸಂಗ ತ್ಯಜಿಸಮ್ಮ ಮಗಳೆ ಪ
ಉದಯ ಪೂರ್ವಕೆ ಎದ್ದು ಹರಿಯ ಸ್ಮರಣೆಯ ಮಾಡು
ಮುದದಿ ಗುರುಹಿರಿಯರಿಗೆ ವಂದನೆಯ ಮಾಡು
ಮದನನಯ್ಯನ ಭಜಕರನು ಕಂಡು ನಲಿದಾಡು
ಪದುಮನಾಭಗೆ ಪಟ್ಟದರಸಿಯಾಗಮ್ಮ1
ರತ್ನಾಕರನು ತಂದೆ ಎನುತ ಗರ್ವಿಸಬೇಡ
ಮತ್ತೆನಗೆ ಸರಿಯಾರು ಎಂದೆನಲು ಬೇಡ
ಚಿತ್ತಜನಯ್ಯನ ಮನವರಿತು ನಡೆಯಮ್ಮ
ಹೊತ್ತು ಹೊತ್ತಿಗೆ ಪತಿಯ ಸೇವೆ ನಿರತಳಾಗಿ2
ಬಿಟ್ಟಕಂಗಳು ಮುಚ್ಚದವನು ಎಂದೆನಬೇಡ
ಬೆಟ್ಟ ಬೆನ್ನಿಲಿ ಪೊತ್ತನೆನಲು ಬೇಡ
ಗಟ್ಟಿ ನೆಲವನು ಕೆದರಿ ಅಲಸಿದನೆನಬೇಡ
ಹೊಟ್ಟೆಯ ಕರುಳನು ಬಗೆದವ ನೆನೆಬೇಡ 3
ಕಡುಲೋಭಿದಾನ ಬೇಡಿದನು ಎಂದೆನಬೇಡ
ಪೊಡವಿಪಾಲಕರ ಕೆಡಹಿದನು ಎನಬೇಡ
ಮಡದಿಯ ತಂದ ಕಪಿವಡೆಯನು ಎನಬೇಡ
ತುಡುಗತನದಿ ಪಾಲ್ಬೆಣ್ಣೆ ಚೋರನೆಂದೆನಬೇಡ 4
ಉಡಿಗೆ ಉಡದ ಮಾನಗೇಡಿ ಇವನೆನಬೇಡ
ತುಡಗತನದಿ ರಾಹುತನಾದನೆನಬೇಡ
ಕಡಲಶಯನ ಕಮಲನಾಭ ವಿಠ್ಠಲನ ಗುಣ
ಒಡೆದು ಪೇಳದೆ ಗುಟ್ಟಾಗಡಗಿಸಿ ನಡೆಯಮ್ಮ 5
***