ಮಲೆನಾಡ ಮನೆಗಳಲಿ ಬೆಚ್ಚನೆಯ ಮನಗಳಲಿ
MALENAADA MANEGALALI BECHCHANEYA MANAGALALI ACHCHANOTTIDA NAMMA COFFEE
ಸಾಹಿತ್ಯ - ಮಧು ಕೋಡನಾಡು
ಮಲೆನಾಡ ಮನೆಗಳಲಿ ಬೆಚ್ಚನೆಯ ಮನಗಳಲಿ
ಅಚ್ಚನೊತ್ತಿದ ಪೇಯ ನಮ್ಮ ಕಾಫಿ
ಮನೆ ಮನದ ನಡುವಿರುವ ಮುನಿಸು ಮೈಮನಸೆಲ್ಲಾ
ಕೊಂಚ ಕಾಫಿಯ ರುಚಿಗೆ ಎಲ್ಲಾ ಮಾಫಿ
ಮುಂಜಾವು ಹರಿದೊಡನೆ ಮಂಜು ಕರಗುವ ಮೊದಲು
ಕೊಂಚ ಕಾಫಿಯು ಒಡಲ ಸೇರಬೇಕು
ನಿಷ್ಠೆಯಿಂದಲಿ ಗೈವ ನಿತ್ಯ ಕರ್ಮದ ನಡುವೆ
ಇಷ್ಟಿಷ್ಟು ಕಾಫಿಯನು ಹೀರಬೇಕು
ಹಂಡೆ ಒಲೆಯುರಿ ಮುಂದೆ ಮಂಡಿಯೂರಿದ ಒಡನೆ
ಸುಡುವ ಕಾಫಿಯ ಶಾಖ ತಾಗಬೇಕು
ಮಂಡೆ ಬಿಸಿಯಾದೊಡನೆ ಔಷದದ ರೂಪದಲಿ
ಜಿಹ್ವೆಯನು ಬಿಸಿಕಾಫಿ ಸೋಕಬೇಕು ೨
ನಮ್ಮ ಕಾಫಿ ಇದುವೇ ನಮ್ಮ ಕಾಫಿ
ಎಕ್ಸ್ ಪ್ರೆಸ್ಸು ಕ್ಯಾಪಚೀನೊ ಬ್ಲಾಕ್ ಕಾಫಿ ವೈಟ್ ಕಾಫಿ
ನೂರಾರು ಬಗೆ ಇಹುದು ಕಾಫಿಯಲ್ಲಿ
ಎಲ್ಲ ಬಗೆಯನು ಹೀರಿ ಸವಿದೊಡನೆ ಅನಿಸುವುದು
ಫಿಲ್ಟರ್ ಕಾಫಿಗೆ ಸಮವು ಯಾವುದಿಲ್ಲಿ
ಸಂಕಟಕು ಕಾಫಿಯೇ ಸಂತಸಕು ಕಾಫಿಯೇ
ನೆಂಟರಿಷ್ಟರು ಬರಲು ಕಾಫಿ ಬೇಕು
ಏನಿರಲಿ ಇರದಿರಲಿ ಮಲೆನಾಡ ಮನಗಳಲಿ
ಕಾಫಿಯೊಂದಿದ್ದರೆ ಅಷ್ಟೆ ಸಾಕು
ನಮ್ಮ ಕಾಫಿ ಇದುವೇ ನಮ್ಮ ಕಾಫಿ
ಕಾಫಿಯಂದರೆ ಇಲ್ಲಿ ಬರಿಯ ಪೇಯವೇ ಅಲ್ಲ
ಮಲೆನಾಡ ಜನಮನದ ಜೀವನಾಡಿ
ತನ್ನ ಘಮಲನು ಸೂಸಿ ತನ್ನೊಡಲ ರುಚಿ ಹನಿಸಿ
ಮೈಮನಕೆ ಮಾಡುತಿದೆ ತನ್ನ ಮೋಡಿ
ಮುಂಜಾನೆಯಿಂದಲೂ ಸಂಜೆ ಮುಳುಗುವವರೆಗು
ಸಂಗಾತಿಯಾಗಿರುವೆ ನೀನು ನಮಗೆ
ನಮ್ಮ ಮನೆ ಮನದೊಳಗೆ ಹಾಸುಹೊಕ್ಕಾಗಿರುವ
ಕಾಫಿದೇವನೆ ನಮ್ಮ ಶರಣು ನಿನಗೆ
ಕಾಫಿದೇವನೆ ನಮ್ಮ ಶರಣು ನಿನಗೆ ||
****
ಕಲಿಯುಗದ ಅಮೃತದ ಬಗ್ಗೆ ವಿಶ್ಲೇಷಣೆ