Showing posts with label ಆರಿಗೆ ಮೊರೆ ಇಡಲೋ ನಿನ್ಹೊರತಿನ್ನು shree krishna. Show all posts
Showing posts with label ಆರಿಗೆ ಮೊರೆ ಇಡಲೋ ನಿನ್ಹೊರತಿನ್ನು shree krishna. Show all posts

Thursday, 19 December 2019

ಆರಿಗೆ ಮೊರೆ ಇಡಲೋ ನಿನ್ಹೊರತಿನ್ನು ankita shree krishna

by ಗುರು ಗೋವಿಂದ ವಿಠಲದಾಸರು  
ರಾಗ :  ಕಾಂಬೋದಿ    ತಾಳ : ಝಂಪೆ

ಆರಿಗೆ ಮೊರೆ ಇಡಲೋ ನಿನ್ಹೊರತಿನ್ನು 
ಆರಿಗೆ ಮೊರೆ ಇಡಲೋ                                     ।।ಪ।।

ಆರಿಗೆ ಮೊರೆ ಇಟ್ಟು ಚೀರಿ ಕೂಗಿದರೇನು 
ಆರೂ ಕಾಯುವರಿಲ್ಲ ಮಾರಜನಕ ಹರೇ                ।।ಅ.ಪ।।

ನೀರಲಿ ಮುಳುಗಿ ನೀ ಭಾರ ಬೆನ್ನಿಲಿ ಪೊತ್ತು 
ಧಾರುಣಿಯನೆ ಚಿಮ್ಮಿ ದುರುಳನ ತರಿದೆಯೋ          ।।೧।।

ಸಾರಿ ವಿರೋಚನ ವರಪುತ್ರ ಬಲಿಯನ್ನ 
ಮೂರಡಿ ಧರಣಿಗೆ ಕರವ ಚಾಚಿದೆ ದೇವಾ               ।।೨।।

ಪರಶುವ ಪಿಡಿದು ನೀ ತರಿದೆಯೊ ತಾಯ ಕೊರಳ 
ಶರಧಿಯ ಬಂಧಿಸಿ ದುರುಳರ ತರಿದೆಯೋ               ।।೩।।

ಪೂತನಿ ಶಕಟ ಧೇನುಕ ವತ್ಸಭಂಜನ 
ಮಥಿಸಿ ಕಂಸನ ನಿನ್ನ ಮಾತಾಪಿತರ ಕಾಯ್ದೆ            ।।೪।।

ಬೆತ್ತಲೆ ತಿರುಗಿ ನೀ ಉತ್ತಮ ಹಯವೇರಿ 
ಒತ್ತಿ ದುರುಳನ ಶಿರ ಕತ್ತರಿಸಿದೆ ದೇವಾ                   ।।೫।।

ಆರತ ಜನ ನಿನ್ನ ಈ ರೀತಿ ಪೇಳ್ವರು 
ವಾರುತೆ ಕೇಳಿ ನಾ ಮೊರೆಯಿಟ್ಟು ಅರುಹುವೆ            ।।೬।।

ಮುರಹರ ಶ್ರೀಕೃಷ್ಣ ಗುರುಗೋವಿಂದ ವಿಠಲ 
ಸಾರುವ ದೇವೋತ್ತಮ ದರುಣದಿ ಸಲಹೆನ್ನ             ।।೭।।
*********