..
kruti by Nidaguruki Jeevubai
ತ್ವರದಿ ಭಜಿಪೆ ನಮ್ಮ ಗುರುಪಾದಾಂಬುಜ
ಕೆರಗುತಲನುದಿನ ಭಕುತಿಯಲಿ ಪ
ನೆರೆನಂಬಿದವರ ಬಿಡದೆ ಪೊರೆವರೆಂಬ
ಉರುತರ ಕೀರ್ತಿಯ ಸ್ಮರಿಸುತಲಿ ಅ.ಪ
ನೊಂದು ಮನದಿ ಭವ ಬಂಧನದಿ ಬಳಲುವ
ಮಂದಿಗಳನು ಉದ್ಧರಿಸುವರ
ಮಂದಮತಿಗಳಾದರು ನಿಂದಿಸದಲೆ
ಮುಂದಕೆ ಕರೆದಾದರಿಸುವರ
ಬಂಧು ಬಳಗ ಸರ್ವಬಾಂಧವರಿವರೆಂದು
ಒಂದೆ ಮನದಿ ಸ್ಮರಿಸುವ ಜನರ
ಕುಂದುಗಳೆಣಿಸದೆ ಕಂದನ ತೆರದೊಳು
ಮುಂದಕೆ ಕರೆದಾದರಿಸುವರ 1
ಗುಪ್ತದಿಂದ ಶ್ರೀಹರಿನಾಮಾಮೃತ
ತೃಪ್ತಿಲಿ ಪಾನವ ಮಾಡಿಹರ
ನೃತ್ಯಗಾಯನ ಕಲಾನರ್ತನದಿಂ ಪುರು-
ಷೋತ್ತಮನನು ಮೆಚ್ಚಿಸುತಿಹರ
ಸರ್ಪಶಯನ ಸರ್ವೋತ್ತಮನನು
ಸರ್ವತ್ರದಲಿ ಧ್ಯಾನಿಸುತಿಹರ
ಮತ್ತರಾದ ಮನುಜರ ಮನವರಿತು ಉ-
ನ್ಮತ್ತತೆಯನು ಪರಿಹರಿಸುವರ2
ಕಮಲನಾಭ ವಿಠ್ಠಲನು ಪೂಜಿಸಿ
ವಿಮಲಸುಕೀರ್ತಿಯ ಪಡೆದವರ
ಶ್ರಮಜೀವಿಗಳಿಗೆ ದಣಿಸದೆ ಮುಂ-
ದಣಘನ ಸನ್ಮಾರ್ಗವ ಬೋಧಿಪರ
ನವನವ ಲೀಲೆಗಳಿಂದೊಪ್ಪುವ
ಹರಿ ಗುಣಗಳನ್ನು ಕೊಂಡಾಡುವರ
ನಮಿಸಿಬೇಡುವೆ ಉರುಗಾದ್ರಿವಾಸ ವಿ-ಠ್ಠಲದಾಸರು ಎಂದೆನಿಸುವರ 3
***