Showing posts with label ನಡಗುವುದ್ಯಾಕೆ ಮನವೆ vijaya vittala ankita suladi ಸಾಧನ ಸುಳಾದಿ NADAGUVUDYAKE MANAVE SADHANA SULADI. Show all posts
Showing posts with label ನಡಗುವುದ್ಯಾಕೆ ಮನವೆ vijaya vittala ankita suladi ಸಾಧನ ಸುಳಾದಿ NADAGUVUDYAKE MANAVE SADHANA SULADI. Show all posts

Saturday 12 June 2021

ನಡಗುವುದ್ಯಾಕೆ ಮನವೆ vijaya vittala ankita suladi ಸಾಧನ ಸುಳಾದಿ NADAGUVUDYAKE MANAVE SADHANA SULADI

Audio by Mrs. Nandini Sripad

 

ಶ್ರೀವಿಜಯದಾಸಾರ್ಯ ವಿರಚಿತ  ಸಾಧನ ಸುಳಾದಿ 


(ದಾಸ್ಯಭಾವದಿಂದ ಸರ್ವದಾ ಹರಿಯನ್ನೇ ಭಜಿಸು. ಹರಿಯು  ಸಂಗಡಿಗನಾಗಿ ರಕ್ಷಿಸುವನು.) 


 ರಾಗ ದರ್ಬಾರಿ ಕಾನಡ 


 ಧ್ರುವತಾಳ 


ನಡಗುವುದ್ಯಾಕೆ ಮನವೆ ನಡೆ ನುಡತಿಗೆ ನೀನು

ಒಡೆಯ ರಂಗಯ್ಯ ಬೆಂಬಿಡದಲೆ ಕಾಯುತಿಪ್ಪ

ಅಡಿಗಡಿಗೆ ಶ್ರೀಹರಿ ವೊಡನೆ ಇರುತಲಿರೆ

ದೃಢ ಸಾಲದೆಂದು ಕಂಗೆಡುವ ಬಗೆಯಾವದು

ಹಡಗ ವಾರಿಧಿ ಮಧ್ಯ ನಡಿಸುವ ಮಹ ಚತುರ

ಕೊಡಲು ಅಭಯ ಭಯ ಬಡುವದಿನ್ನಾವದು

ಅಡಿಸಿ ಪೊಕ್ಕಪಮೃತ್ಯು ಬಿಡಿಸುವನನುಗಾಲ

ಪಡಿಗಾಣೆನೀತನ ಒಡೆತನಕ್ಕಾವಲ್ಲಿ

ಮಡದಿ ಮಕ್ಕಳು ಸರ್ವ ಒಡಿವೆ ವಸ್ತಕೆ ಮೋಹ -

ವಿಡಿಯದೆ ರಂಗನ್ನ ಪಡಿತೊತ್ತುಗಳು ಎನ್ನು

ಬಿಡಿ ಬೀಸದಲೆ ಕರ ಪಿಡಿದು ನೀನುಳ್ಳನಕ

ತಡಿಯದೆ ಪಾಲಿಸುವ ಒಡಿಯ ರಂಗನ್ನ ಪಾದ ನಂಬು

ಸಡಗರ ದೈವವೆ ವಿಜಯವಿಟ್ಠಲ ನಿರುತಿರೆ

ದೃಢಗುಂದದಿರು ನಿನ್ನ ನುಡಿ ಸಲ್ಲಿಸಿ ಕಾಯ್ವಾ ॥ 1 ॥ 


 ಮಟ್ಟತಾಳ 


ನರಹರಿ ದುರಿತಾರಿ ಮುರ ನರಕ ವೈರಿ

ಸುರರಿಗೆ ಬಲು ಮೀರಿ ಇರುತಿಪ್ಪ ಮಹಾಶೌರಿ

ಪರಮ ಮಂಗಳದಾರಿ ಇರುಳು ಹಗಲು ತೋರಿ

ಪೊರೆವನು ಶ್ರೀನಾರಿಯರಸನಂಘ್ರಿಯ ಸಾರಿ

ಮರಿಯದೆ ಪರಿ ಪರಿ ಪುರುಷಾರ್ಥ ಕೋರಿ

ಚರಿಸು ಮಹಿಮೆಯ ಬೀರಿ ದುರಿತ ರಾಸಿಯ ಹಾರಿ

ಪರಿತೋಷವ ಸೇರಿ 

ನಿರುತರ ಉಪಕಾರಿ ವಿಜಯವಿಟ್ಠಲ ಹರಿ

ಚರಣಾಂಬುಜ ವಾರಿ ಧರಿಸೆ ಮುಟ್ಟವು ಮಾರಿ ॥ 2 ॥ 


 ತ್ರಿವಿಡಿತಾಳ 


ಪತಿಯ ತೊರೆದು ನಾರಿ ಸುತರ ಬಯಸಿ ದೇ -

ವತಿಗಳರ್ಚಿಸಿದಂತೆ ಪ್ರತಿದಿನದಲಿ ನೀನು

ಇತರ ಸಂಶಯದಲ್ಲಿ ಕ್ಷಿತಿಯೊಳು ಇದ್ದು ಶ್ರೀ -

ಪತಿಯ ಪಾದಕೆ ನಮಿತನಾಗದೆ

ಮತಿ ಮಂದದಲಿ ಕಾಲೋಚಿತ ಪೋಗಾಡುವ ತೆರದಿ

ಹಿತವೀಯದವರ ನುತಿಸಲಾಗೆ

ಗತಿಗೆ ಪಥವ ಕಾಣೆ ಶತಕಲ್ಪಕ್ಕಾದರೂ

ಅತಿಶಯವಿಲ್ಲ ಸಂತತ ಮನಸೆ

ಪತಿತಪಾವನ ಕಾಯ ವಿಜಯವಿಟ್ಠಲ ನಿತ್ಯ

ಗತಿ ಎನ್ನೆ ನಿನ್ನ ಸಂತತಿಗೆಲ್ಲ ಗತಿವಕ್ಕು ॥ 3 ॥ 


 ಅಟ್ಟತಾಳ 


ನಡಗುವದ್ಯಾತಕೊ ಎಲೊ ಮನವೆ 

ನಡಗುವದ್ಯಾತಕೊ ಕಡಲಶಯನನ ನಾಮ 

ಬಿಡದ್ವಜ್ರಪಂಜರ , ನಡುಗುವದ್ಯಾತಕೆ

ತೊಡವಿತ್ತು ನಿನ್ನ ಸಂಗಡಲೆ ತಿರುಗುತಿಪ್ಪ

ಕೊಡಗಯ್ಯ ಕಾರುಣ್ಯನಿಧಿ ವೊಲಿದಿರಲಿಕ್ಕೆ

ನಡಗುವದ್ಯಾಕೆ 

ಬಿಡುವನಲ್ಲ ನಮ್ಮ ವಿಜಯವಿಟ್ಠಲ ಧೊರೆ

ಕುಡಿ ಪಲ್ಲವಿಸಿದಂತೆ ತಡಿಯದೆ ಬೆಳೆಸುವ ॥ 4 ॥ 


 ಆದಿತಾಳ 


ಹರಿ ಇತ್ತದು ಸರ್ವ ಹರಿದಾಸರು ಎಂದು

ಅರೆಮರೆ ಇಲ್ಲದೆ ಹರಿಯಾಧೀನವೆ ಎನಲು

ಹರಿ ನಿನ್ನವರ ಪರಿಪೂರ್ಣಾಯುರ ಮಾಡಿ

ಪೊರೆವನು ಪೊಂದಲಿಟ್ಟು ಪರಿಪರಿ ವಿಧದಲ್ಲಿ

ಹರುಷವೀವುತ್ತ ತನ್ನ ಶರಣರ ಮಾಡಿ ಭಕ್ತಿ

ಪರಮ ಜ್ಞಾನದಿಂದಾದರದಲಿ ರಕ್ಷಿಸುವ

ಸರಸ ಮೂರುತಿ ದೇವಾ ವಿಜಯವಿಟ್ಠಲನಂಘ್ರಿ 

ನೆರೆ ನಂಬಿದವಗೆ ಉಗುರು ಮಾಸದು ಕಾಣೊ ॥ 5 ॥ 


 ಜತೆ 


ಫಣಿಶಾಯಿ ಸರ್ವದಾ ಹೊಣೆಯಾಗಿರಲಿಕ್ಕೆ

ಅನುಮಾನ ಬಿಡುವದು ವಿಜಯವಿಟ್ಠಲ ನೊಲಿಸು ॥

*****