ರಾಗ: ಕಾಂಬೋಜಿ ತಾಳ: ಝಂಪೆ
ರಾಘವೇಂದ್ರರ ಚರಣ ಅನುದಿನವು ಭಜಿಸೊ ಪ
ಯೋಗಿವಂದ್ಯನ ಚರಣದಲಿ ಮನವ ನಿಲಿಸೊ ಅ.ಪ
ಭಕ್ತರಘವನುಹರಿಸಿ ಸತತ ಪೊರೆಯುವ ಚರಣ
ಭಕ್ತನೋರ್ವಗೆ ಬಂದ ಅಪಮೃತ್ಯು ಹರಣ
ಭಕ್ತಿಯಿಂಪೂಜಿಸಲು ಗತಿಯತೋರುವ ಚರಣ
ಭಕ್ತಬಾಂಧವ ಗುರುವಿನೊಳು ಅತಿಶ್ರೇಷ್ಠ ಚರಣ 1
ರಾಮನಾಮವ ಬಿಡದೆ ಭಜಿಸುವಾ ಗುರುಚರಣ
ವಿಮಲಜ್ಞಾನವಿತ್ತು ಪೊರೆವ ಚರಣ
ಕಾಮಧೇನುವಿನಂತೆ ನಿರುತ ಭಕ್ತರ ಸಲಹಿ
ಕಾಮಿತಾರ್ಥವನಿತ್ತು ಕಾಯ್ವ ಗುರುಚರಣ 2
ಭುವಿಯ ಮೋಹವ ತ್ಯಜಿಸಿ ಭವ್ಯಯತಿಎಂದೆನಿಸಿ
ಭುವಿಜೆಯರಸನ ಸ್ಮರಿಪ ದಿವ್ಯಚರಣ
ಭಾವಶುದ್ಧಿಯಿಂ ಇರುತ ಕವಿಶ್ರೇಷ್ಠನೆಂದೆನಿಸಿ
ಭವದಬಂಧವನೀಗಿ ಕಾಯ್ವ ಶುಭಚರಣ 3
ಮಂತ್ರಾಲಯದೊಳು ಮುದ್ದು ಬೃಂದಾವನದಿ
ಸಂತಸದಿ ನೆಲೆಸಿರುವ ಗುರುರಾಜ ಚರಣ
ಸಂತತವು ಭಕ್ತರನು ಬಿಡದೆಪಾಲಿಪ ಚರಣ
ಚಿಂತೆಯೆಲ್ಲವನೀಗಿ ಕಾಯ್ವ ಚರಣ 4
ಕಷ್ಟವೆಲ್ಲವಹರಿಸಿ ಶಿಷ್ಠರನು ಸಲಹುತ್ತ
ಶ್ರೇಷ್ಠಮಾರ್ಗವ ತೋರಿ ಸತತಪಾಲಿಪ ಚರಣ
ಸೃಷ್ಠೀಶ ಶ್ರೀಕೃಷ್ಣವಿಠಲನನು ಭಜಿಸುತ್ತ
ಪ್ರೇಷ್ಠಜನರನು ಪೊರೆವ ಶ್ರೇಷ್ಠ ಗುರುಚರಣ 5
***