..
ಹನುಮಂತ ಪಾಹಿ ಗುರು ಮನುಮಂತ ಪ
ಹನುಮಂತ ಅನಿಮಿತ್ತ ಬಂಧು | ಶಿರ
ಮಣಿದು ನಮಿಪೆ ದಯಾ ಸಿಂಧು ಆಹಾ
ಅನುದಿನ ಎನ್ನವಗುಣ ಎಣಿಸದೆ ಕಾಯೊ
ಅನಿಮಿಷ ಪತಿ ಸುರಮುನಿಗಣ ಸೇವಿಪ ಅ.ಪ
ಸಂಜೀವನ ಗಿರಿಧಾರ | ಹೇ ಧ
ನಂಜಯ ನಾಗ್ರಜ ಧೀರ | ಖಳ
ಭಂಜನ ಕರುಣ ಸಾಗರ ಭಾವಿ
ಕಂಜಜ ಭಕ್ತ ಮಂದಾರ ಆಹಾ
ಅಂಜನೆಯಳ ತನು ಸಂಜಾತ ಸಲಹಯ್ಯ
ಸಂಜೆ ಚರಾರಿ ಪ್ರಭಂಜನ ಮೂರುತಿ 1
ಕಾಳಿವಲ್ಲಭ ಕಪಿವರನೆ | ಕರು
ಣಾಳು ನಂಬಿದೆ ಯತಿವರನೆ | ಖಳ
ಕಾಲ ಪಾಲಿಸು ವೃಕೋದರನೆ | ಛಳಿ
ಶೈಲಜೆ ಕಾಂತ ವಂದಿತನೆ | ಆಹಾ
ಕೇಳಿ ಮಡದಿ ಮೊರೆ ತಾಳಿ ಸ್ತ್ರೀವೇಷರೂಪ
ಖೂಳ ಕೀಚಕನುದರ ಸೀಳಿದ ಗುರುವೆರ 2
ಗಂಧವಾಹನ ಅಸುನಾಥ ನಿನ್ನ
ಪೊಂದಿದೆ ಪಾಲಿಸು ಸತತ | ಕುಂತಿ
ನಂದನ ದ್ವಿಜವೃಂದ ವಿನುತ | ಶಾಮ
ಸುಂದರ ವಿಠಲನ ದೂತ | ಆಹಾ
ಇಂದು ಕುಲಜವಿಲ್ಲ | ಒಂದೆಂಬವರ ಜೈಸಿ
ಇಂದಿರ ಪತಿ ಪರನೆಂದು ಸ್ಥಾಪಿಸಿದೆ 3
***