Showing posts with label ರುದ್ರೇಣ ಲವಣಾಂಭಸಿ vijaya vittala ankita suladi ಕೋಟೀಶ್ವರ ಮಹಿಮೆ ಸುಳಾದಿ RUDRENA LAVANAMBASI KOTESHWARA MAHIME SULADI. Show all posts
Showing posts with label ರುದ್ರೇಣ ಲವಣಾಂಭಸಿ vijaya vittala ankita suladi ಕೋಟೀಶ್ವರ ಮಹಿಮೆ ಸುಳಾದಿ RUDRENA LAVANAMBASI KOTESHWARA MAHIME SULADI. Show all posts

Thursday 29 April 2021

ರುದ್ರೇಣ ಲವಣಾಂಭಸಿ vijaya vittala ankita suladi ಕೋಟೀಶ್ವರ ಮಹಿಮೆ ಸುಳಾದಿ RUDRENA LAVANAMBASI KOTESHWARA MAHIME SULADI

 

 Audio by Vidwan Sumukh Moudgalya


ಶ್ರೀ ವಿಜಯದಾಸಾರ್ಯ ವಿರಚಿತ 


 ಪಶ್ಚಿಮ ಸಾಗರ ತೀರಸ್ಥ - ಧರ್ಮಪುರಿಸ್ಥ ಕೋಟೀಶ್ವರ ಮಹಿಮೆ ಸುಳಾದಿ 


 ರಾಗ : ವಲಚಿ 


 ಧ್ರುವತಾಳ 


ರುದ್ರೇಣ ಲವಣಾಂಭಸಿ ಎಂಬೊ ಪ್ರಮಾಣ ಈ ಸ-

ಮುದ್ರದೊಳಗೆ ಹತ್ತು ಮಹಾಕಲ್ಪಾ 

ಇದ್ದು ಕ್ಷಾರೋದಕ ಪಾನಮಾಡಿ ಪದವಿ 

ಸಿದ್ಧ ಮಾಡಿಕೊಂಡು ನರಸಿಂಹನನ್ನು

ಹೃದಯದಲ್ಲಿ ಇಟ್ಟು ಕೈಲಾಸಪತಿ ತಾನು 

ತ್ರಿದ್ದಶರಲ್ಲಿ ಮಹಾದೇವನೆನಿಸಿ 

ಪದ್ಮಜಾ ಪ್ರಧಾನಾ ವಾಯುರಿಂದಾಲಿ ನೋಡೆ 

ವಿದ್ಯಾದಲ್ಲಿ ಕಡಿಮೆ ಮುಕ್ತಿಲಿ ಸಹ 

ನಿರ್ಧಾರಾ ತಿಳಿದು ನಿತ್ಯಾ ಸ್ಮರಿಸೀ 

ನಿರ್ದೋಷರಾಗುವರು ಸಜ್ಜನರೂ 

ಶುದ್ಧ ಮೂರುತಿ ನಮ್ಮ ವಿಜಯವಿಠಲರೇಯಾ 

ರುದ್ರನ ಪಾಲಿಪ ಪ್ರಭುವೆ ಎನ್ನಿ ॥೧॥


 ಮಟ್ಟತಾಳ 


ಗಿರಿಜಾಪತಿ ಶಿವನು ನಿರುತ ವೈರಾಗ್ಯದಲಿ 

ಇರುತಿಪ್ಪನು ತನ್ನ ಪರಿವಾರದ ಒಡನೆ 

ಸಿರಿ ರಾಮನಾಮಾ ಸ್ಮರಣೆಮಾಡಿಕೊಳುತಾ 

ಸುರರಿಗೆ ಗುರುವೆನಿಸಿ ಪರಮ 

ಪುರುಷ ನಮ್ಮ ವಿಜಯವಿಠಲನಿಂದಾ 

ಶರಣರ ಭಯ ಉತ್ತಾರ ಮಾಡುವಾ ಕರುಣಿ ॥೨॥


 ತ್ರಿವಿಡಿತಾಳ 


ಭಸ್ಮಾಸುರನು ಮಹತಪಮಾಡಿ ಉಗ್ರದಲಿ 

ಪಶುಪತಿಯಾ ಒಲಿಸಿದ ಭಕುತಿಯಿಂದ 

ಅಸಮನೇತ್ರನು ಬಂದು ನುಡಿದ ನಿನಗೇನು 

ಕುಶಲ ಬೇಕೆನಲು ವಂದಿಸಿ ತಲೆವಾಗಿ 

ವಸುಧಿಯೊಳಗೆ ಚಿತ್ರಾವರ ಒಂದು ಕೊಡು ಎಂದು 

ಬೆಸಸೀದನು ಉರಿಹಸ್ತಾ ಕರುಣಿಸೆಂದೂ 

ಎಸವ ಮಾತಿಗೆ ಸತಿಯಿಂದಾಗಲೆ ಅವನು 

ಪುಶಿಯಿಲ್ಲದಾಗೆ ಪರೀಕ್ಷಿಸುವೆನೆನಲೂ 

ದಶೆಗೆಟ್ಟು ಮುಂದಾಣ ಯೋಚನೆ ತೋರದೆ 

ದಶದಿಶಿಗೆ ಓಡಿದಾ ಭೀತಿಯಿಂದ 

ಅಸುರಾ ಬೆಂಬಿಡದೆ ಬರುತಿರಲು ಪೂರ್ವದಲ್ಲಿದ್ದಾ 

ವಸತಿ ಇದೆ ಎಂದು ಅಡಗಿದಾನಲ್ಲಿ 

ಅಸುರ ಸಂಹರ ಶಿರಿ ವಿಜಯವಿಠಲರೇಯಾ 

ನಸುನಗುತಾ ಐದಿದ ನಾರಿವೇಷವ ತಾಳಿ ॥೩॥


 ಅಟ್ಟತಾಳ 


ಶಿವನು ಕೇಶವಗೆ ದಾನವನ ಅಟ್ಟುಳಿಗೆ ಗಾ -

ತ್ರವನು ಬಳಲಿ ಮೊರೆಯಿಟ್ಟೂ ಮಾತಿಗೆ ತ್ರಿ -

ಭುವನ ಬೆರಗಾಗೆ ಯುವತಿ ರೂಪವ ತಾಳಿ 

ನವನವ ಮೋಹಕ ಕೌತುಕವನೆ ತೋರಿ 

ಅವನ ವಂಚಿಸಿ ಆಟವನು ಆಡಿದ ದಾ-

ನವನ ಸಂಹರಿಸಿದ ಪವನಗಿರಿಯಲ್ಲಿ 

ಪವಿತುರ ಮೂರುತಿ 

ಕವಿ ಮನೋಹರ ನಮ್ಮ ವಿಜಯವಿಠಲರೇಯಾ 

ಅವನಿಯೊಳಗೆ ವೇಲಾಪುರದ ಚನ್ನಿಗ ಕಾಣೊ ॥೪॥


 ಆದಿತಾಳ 


ಯಾಗ ಮಾಡಿದ ಬ್ರಹ್ಮಾ ಮುನಿಗಳ ಕೂಡ ಇಲ್ಲಿ 

ಭಾಗಕೊಡುವದಕ್ಕೆ ತಪೋಧನಾ ಉಳ್ಳಕೋಟಿ

ಯೋಗೀಶ್ವರರಕೈಯ್ಯ ಪಾರ್ಥಿವ ಪೂಜಿಸಿ 

ಆಗ ಕರಿಸಿದ ಶಿವನ ಕೂಪದಿಂದೂಧ್ರ್ವಕ್ಕೆ 

ಭೂಗೋಳದೊಳಗಿದೆ ಕೋಟೀಶ್ವರ ಪಶ್ಚಿಮ 

ಸಾಗರ ತೀರದಲ್ಲಿ ಒಪ್ಪುತಿದೆ ಕೇಳಿ 

ನಾಗಭೂಷಣ ಇಲ್ಲಿ ವಸುರಾಯನಿಂದ ಚ-

ನ್ನಾಗಿ ಪೂಜಿಯಗೊಂಡ ಭಕುತಿಭರಕೆ ಮೆಚ್ಚಿ 

ಆಗಮ ವಂದ್ಯನಾದಿ ವಿಜಯವಿಠಲರೇಯ 

ಬಾಗಿದ ಜನಕೆ ಸದ್ಗತಿಯಾಕೊಡುವಾ ಒಲಿದೂ ॥೫॥


 ಜತೆ 


ಧ್ವಜಪುರಿನಿಲಯಾ ಪಾರ್ವತಿಪತಿ ಪುರವೈರಿ 

 ವಿಜಯವಿಠಲನ ಪ್ರೀಯ ಪಾವನಕಾಯಾ ॥೬॥

******

ಕೋಟೀಶ್ವರ ಕ್ಷೇತ್ರದ ಪುರಾಣ

(ಸಂಗ್ರಹ : ತೀರ್ಥಪ್ರಬಂಧ)


 ಚಾರು ಕೋಟಿಶ್ವರಸ್ಥಾನಂ ಶೋಭತೇ ಯತ್ ಪುರತ್ರಯಮ್ ।

 ಪುರಾರಿರಿವ ನಿರ್ಜಿತ್ಯ ಧ್ವಜೇನಾದ್ಯಾಪಿ ಜೃಂಭತೇ


ಈಶ್ವರನು ಪುರತ್ರಯವನ್ನು ಜಯಿಸಿ ಜಯಧ್ವಜದಿಂದ ಶೋಭಿಸಿದಂತೆ ಕೋಟೀಶ್ವರವು ಕಂದಾವರ , ಕುಂಭಾಸಿ, ಬ್ರಹ್ಮಾವರಗಳೆಂಬ ಗ್ರಾಮತ್ರಯಗಳಿಂದ ಬರುವ ವಂತಿಗೆಯಿಂದ ಧ್ವಜೋತ್ಸವವನ್ನು ಆಚರಿಸುವುದರಿಂದ , ರುದ್ರದೇವರಂತೆ ಶೋಭಿಸುತ್ತದೆ(ಉತ್ಪೇಕ್ಷಾಲಂಕಾರ)  ಎಂದು ಭಾವ. ಪರಶುರಾಮಕ್ಷೇತ್ರದ ಸಪ್ತ ಮಹಾಕ್ಷೇತ್ರಗಳಲ್ಲಿ ಇದೂ ಒಂದು 


ಕೋಟೀಶ್ವರವು ಕುಂದಾಪುರ-ಉಡುಪಿ ಮಾರ್ಗದಲ್ಲಿರುವ ಮತ್ತೊಂದು ಪುಣ್ಯಕ್ಷೇತ್ರ . ಇಲ್ಲಿ ಒಂದು ದೊಡ್ಡ ಈಶ್ವರ ದೇವಾಲಯವಿದೆ...ತನ್ನನ್ನು ಕುರಿತು ತಪಸ್ಸು ಮಾಡುತ್ತಿದ್ದ ಕೋಟಿ ಸಂಖ್ಯಾಕರಾದ ಮುನಿಗಳಿಗೆ ಕೋಟಿಲಿಂಗಗಳಾಗಿ ಈಶ್ವರನು ದರ್ಶನ ಕೊಟ್ಟ ಸ್ಥಳವಾದ್ದರಿಂದ ಇದಕ್ಕೆ 

" ಕೋಟೀಶ್ವರ "  ಎಂದು ಹೆಸರು. ದೇವಾಲಯದಲ್ಲಿ ಇಂದೂ ಶಿವ ಲಿಂಗದ ಕೆಳಗೆ ಇರುವ ಅನೇಕ ಲಿಂಗಗಳೇ ಈ ಕೋಟಲಿಂಗಗಳು ಎಂದು ಪ್ರತೀತಿ.


 ನಮಸ್ತೇ ಶಿತಿಕಂಠಾಯ ಕೋಟಿಸಂಖ್ಯರ್ಷಿತೋಷಣಾತ್ ।

 ಯಃ ಕೋಟೀಶ್ವರಸಂಜ್ಞೋs ಭೂಃ ಸ ಕಿಂ ನೈಕರ್ಷಿಕಾಮಧುಕ್ ॥


ಇದೂ ಸಹ ಶ್ರೀವಾದಿರಾಜರ " ಸ್ವಾಪ್ನ ಪದ್ಯ " . ಕೋಟಿಸಂಖ್ಯಾಕರಾದ ಋಷಿಗಳ ಅಭಿಲಾಷೆಯನ್ನು ಪೂರೈಸಿದ ನಿನಗೆ ಒಬ್ಬ ಋಶಿಯಾದ ನನ್ನ ಬಯಕೆಯನ್ನು ಈಡೇರಿಸುವಲ್ಲಿ ಸಾ

ಮರ್ಥ್ಯವು ಕೈಮುತ್ಯಸಿದ್ಧ ಎಂದು ಭಾವ . ಅಷ್ಟು ಜನರಿಗೆ ಇಷ್ಟಪ್ರದರಾದ ರುದ್ರದೇವರಿಗೆ ಒಬ್ಬರಿಗೆ ಇಷ್ಟಪ್ರದರಾಗುವುದು ಏನಾಶ್ಚರ್ಯ ಎಂದೂ ಭಾವ.

🙏 ಶ್ರೀ ಕೃಷ್ಣಾರ್ಪಣಮಸ್ತು 🙏

******