Showing posts with label ಪ್ರಣವ ಮಂತ್ರವ ಗ್ರಹಿಸು vijaya vittala ankita suladi ಪ್ರಣವ ಮಂತ್ರ ಸುಳಾದಿ PRANAVA MANTRAVA GRAHISU PRANAVA MANTRA SULADI. Show all posts
Showing posts with label ಪ್ರಣವ ಮಂತ್ರವ ಗ್ರಹಿಸು vijaya vittala ankita suladi ಪ್ರಣವ ಮಂತ್ರ ಸುಳಾದಿ PRANAVA MANTRAVA GRAHISU PRANAVA MANTRA SULADI. Show all posts

Monday 9 December 2019

ಪ್ರಣವ ಮಂತ್ರವ ಗ್ರಹಿಸು vijaya vittala ankita suladi ಪ್ರಣವ ಮಂತ್ರ ಸುಳಾದಿ PRANAVA MANTRAVA GRAHISU PRANAVA MANTRA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ   ಪ್ರಣವ ಮಂತ್ರ ಸುಳಾದಿ 
 ( ಪ್ರಣವ ಮಂತ್ರ ಓಂಕಾರದಿಂದ 51 ವರ್ಣಗಳ ಸೃಷ್ಟಿ ) 

 ರಾಗ ಸಾರಂಗ 

ಧ್ರುವತಾಳ

ಪ್ರಣವ ಮಂತ್ರವ ಗ್ರಹಿಸು ಪ್ರಣುತನಾಗಿ ಸ -
ಜ್ಜನರುಪದೇಶದಿಂದ ಅನುಗ್ರಹ ನೋಡುವದು 
ಅನಾದಿಯಿಂದ ಬಂದ ಅನುಭವಸಿದ್ಧ ಜನಕೆ ಅಮೃತಾಶನ 
ಪ್ರಣವ ತಾರಕ ತಾರ ಪ್ರಥಮ ವ್ಯಾಹೃತಿ ಶೀರ್ಷ 
ಘನ ಓಂಕಾರ ಆದ್ಯೋಚ್ಚರಣೆ ಬೀಜ 
ಇನಿತಾಭಿಧಾನದಿಂದ ಒಪ್ಪುತದಲೆ ನಿತ್ಯ 
ಅನಂತ ವರ್ಣಾತ್ಮಕ ಜಡ ಪ್ರಭೇದ 
ಮನುಜಾದಿ ವಿಡಿದು ಬ್ರಹ್ಮಸಿರಿತನಕಾಲೋ -
ಚನೆ ಮಾಡುವರು ತಮ್ಮ ಯೋಗ್ಯತದನಿತು 
ಪ್ರಣವೆ ಮಂತ್ರವೆ ಸರ್ವ ಮಂತ್ರತಂತ್ರಕ್ಕೆ ಇದೆ
ಜನಕವಾಗಿಪ್ಪೊದು ಕಲ್ಪ ಕಲ್ಪ
ಪ್ರಣವ ಮಂತ್ರವೆ ಗ್ರಹಿಸು ಎಲೊ ಮನವೆ 
ಗುಣ ಕಾಲ ಕರ್ಮ ವರ್ಣಾಶ್ರಮ ಧರ್ಮ ರೂಪ ಕ್ರೀಯ 
ಮನೊವಾಚಕಾಯದಲ್ಲಿ ನಿರ್ಮಳನಾಗಿ 
ಎಣಿಸಬೇಕು ಅನುಕ್ರಮದಿಂದಲಿ 
ಪ್ರಣವ ಧ್ಯಾನವ ಮಾಳ್ಪ ಇದರ ವಿಸ್ತಾರವ 
ವನಜ ಸಂಭವನಿದಕೆ ಆಧಿಕಾರನೊ 
ಗುಣತ್ರಯ ಮೊದಲು ಮಾಡಿ ಧರತತ್ವ ಪರಿಯಂತ 
ಕ್ಷಣಬಿಡದೆ ಎಣಿಪ ಬಹು ಅಂಶಿ ಅಂಶ 
ತೃಣ ಜೀವಾದಿ ವಿಡಿದು ಅಂತರ ಬಾಹಿರ 
ಚಿನುಮಯ ಮೂರುತಿ ವಿಜಯವಿಠ್ಠಲರೇಯ 
ಪ್ರಣವ ಪ್ರತಿಪಾದ್ಯನೊ ಅಶೇಷ ಗುಣಧಾರಕ ॥ 1 ॥

ಮಟ್ಟತಾಳ

ಆ ಉ ಮ ನಾದ ಬಿಂದು ಘೋಷ ಶಾಂತಾತಿಶಾಂತ 
ಈ ವರಣಗಳುಂಟು ಪ್ರಣವಾತ್ಮಕವೆನ್ನಿ 
ಈ ವಿಧವನೆ ತಿಳಿದು ಅಕಾರ ಅಷ್ಟರಲಿ 
ಆ ವರ್ಗವೆಯೆಂಟು ಉದುಭವಿಸಿದವೆನ್ನು 
ಕೋವಿದನಾಗಬೇಕೊ ತಿಳಕೊಂಡು ಮಾತ್ರ 
ಸಾವಿರಶಿರನಮ್ಮ ವಿಜಯವಿಠ್ಠಲರೇಯನ 
ಭಾವದಲಿ ನಿಲಿಸಿ ಒಲಿಸಿ ವಿಶ್ವಾದಿಗಳ ॥ 2 ॥

ತ್ರಿವಿಡಿತಾಳ

ಆ ವರ್ಗ ಹದಿನಾರು ಕ ಪ ವರ್ಗವೆ ಐದು 
ಈ ವಿಧ ಅಯಿದೈದು ಇಪ್ಪತ್ತೈದು 
ಯ ವರ್ಗ ನಾಲ್ಕು ಕ ವರ್ಗ ಪಂಚಕೂಡೆ 
ಈ ವರ್ಣ ಎಣಿಸಲು ದಶ ಪಂಚವೊ
ಪಾವಿತ್ರವಾಗಿವೆ ಕ ಷ ಕೂಡಿಸಲಾಗಿ 
ಕ್ಷ ವರಣವಾಯಿತು ಒಂದೈವತ್ತು 
ಆ ವಿಶ್ವಗೆ ಹದಿನಾರು ತೈಜಸಂತರಾತ್ಮ 
ದೇವಗಳಿಗೆ ಇಪ್ಪತ್ತೈದು ಸಿದ್ಧ 
ಪಾವನ ಪರಮಾತ್ಮ ಜ್ಞಾನಾತ್ಮಗೆ ಒಂಭತ್ತು 
ಸೇವಿಸುವದು ಇವು ದ್ವಿತಿಯ ವರಣಾ 
ಯಾವತ್ತು ಸ್ವರ ವರಣ ಒಂದೊಂದು ಬಗೆಯಿಂದ 
ಆವಾವ ಸ್ವರದಲಿ ಕೂಡಿಸಲು 
ಕ ವರ್ಗಾದಿಗೆ ದೀರ್ಘ ಹ್ರಸ್ವ ಕನ್ನೆ ಮಾತ್ರ 
ವೋ ವತ್ತು ಬಿಂದು ವಿಸರ್ಗದಿಂದ 
ಮೂವತ್ತೈದಕೆ ಕೇಳು ವೊಂದಕೆ ದ್ವಿಷಟ್ ಪರಿಯು 
ಈ ವಿಧ ತಿಳಿ ವಿಂಶತಿ ಚತುರ ಶತ 
ದೇವದೇವೇಶ ನಮ್ಮ ವಿಜಯವಿಠ್ಠಲರೇಯ 
ಜೀವೋತ್ತಮನಿಂದ ಪೂಜೆಗೊಂಬನಿಲ್ಲಿ ॥ 3 ॥

ಅಟ್ಟತಾಳ

ಆ ಓಂಕಾರ ಬೀಜ ಎಂಟರಿಂದಲಿ ಸತ್ಯ 
ಈ ವರ್ತಮಾನಕ್ಕೆ ಅಭಿವ್ಯಕ್ತಿಯಾಯಿತು 
ಆ ವರ್ಗ ಮಿಗಿಲಾಗಿ ಎಂಟು ವರ್ಗಗಳೈದು 
ಕ್ಷ ವೊಂದೂ ಕೂಡಿಸೆ ಏಕ ಪಂಚಾಶತಿ 
ಸೂವರ್ನವಾಗಿ ಒಪ್ಪುತಿವೆಯಿವು ವ್ಯಾಪ್ತಿ 
ಠಾವು ಠಾವಿಲಿವುಂಟು ಸ್ವರ ಸಂಯೋಗವಾಗೆ 
ಮೂವತ್ತು ಹತ್ತು ಮೇಲೆ ನೂರು ಇಪ್ಪತ್ತು 
ಈ ವರ್ಣಗಳೆಲ್ಲ ಗುಣಿತ ಮಾಡಲಾಗಿ 
ಭಾವಿಸುವುದು ವರ್ಣೋವರ್ಣಸಂಯೋಗ 
ಕ ವೊಂದಕ್ಕೆ ನೋಡು ಮೂವತ್ತೈದರಂತೆ 
ಈ ವಿಚಾರ ಮಾತ್ರಕೆ ಎಣಿಸಾಲು ಹದಿನಾಲ್ಕು 
ಸಾವಿರದೇಳು ನೂರು ಲೆಖ್ಖವನ್ನು 
ಶ್ರೀವಲ್ಲಭ ನಮ್ಮ ವಿಜಯವಿಠ್ಠಲರೇಯ 
ಕಾವುತಲಿಪ್ಪನು ಈ ಪರಿ ತಿಳಿದವನ ॥ 4 ॥

ಆದಿತಾಳ

ಇದರೊಳು ಇನ್ನುವುಂಟು ಪಾದಾರ್ಧದಿ ಉಚ್ಚಾರಣೆ 
ಯಿದೆ ಅನಂತಾನಂತ ವರ್ಣಗಳಾಗೋವು 
ಇದರಲ್ಲಿ ಉಪನಿಷತು ಸರ್ವವೇದ ಪುರಾಣ 
ಮುದದಿಂದ ಪಂಚರಾತ್ರ ಬ್ರಹ್ಮ ತರ್ಕ ರಾಮಾಯಣ 
ಸುಧಿಯಾದಿ ಭಾಗವತ ಯೋಗ ಶಾಸ್ತ್ರ ಭಾರತ 
ಪದೊಪದಿಗೆ ಕರ್ಮ ಭೇದ ಮೀಮಾಂಸ ಸಕಲ ನಿರ್ಣಯ 
ಒದಗಿ ತುಂಬಿಹವು ವೈದಿಕ ಲೌಕಿಕ ಶಬ್ದ 
ಇದರಿಂದ ಕಮಲಾಸನ ಹರಿಯಲ್ಲಿ ಸಮನ್ವಯ
ಉದಯಾಸ್ತಮಾನ ಬಿಡದೆ ದುಃಖ ಶಬ್ದಾ ತುಚ್ಛಾ 
ಮೊದಲಾದ ವಾಕ್ಯದಿಂದ ಮಾಡುವ ಮಹಾಜ್ಞಾನಿ 
ಆದ ಕಾರಣ ಹರಿ ಅಖಿಳ ವರಣಾತ್ಮಕ 
ನಿಧಿಯಾದ ಓಂಕಾರ ಪ್ರತಿಪಾದ್ಯನೆನಿಸುವ 
ಪದುಮೆ ವಿರಂಚಿ ವಾಯು ಖಗ ಶೇಷ ರುದ್ರೇಂದ್ರ 
ಮದನ ಸೂರ್ಯೇಂದು ಮಿಕ್ಕ 
ತ್ರಿದಶ ಮಹಾಮುನಿ ಸರ್ವ ಚೇತನಕೆ ಕೂಡೋದಯ್ಯ 
ಉದಧಿ ದರ್ಶನದಂತೆ ಎಲ್ಲರಿಗೆ ಸಾಧ್ಯವೆನ್ನು 
ಸದಮಲಮೂರುತಿ ವಿಜಯವಿಠ್ಠಲರೇಯ 
ಯದುಕುಲೋತ್ತಮ ಕಾಣೊ ಭಕ್ತರ ಸಲಹುವ ॥ 5 ॥

ಜತೆ

ತಾರ ವಿಚಾರ ವಿಚಾರತನದಲಿ ಗ್ರಹಿಸು 
ಧಾರಕ ಶಕುತಿಯಿಂದ ವಿಜಯವಿಠ್ಠಲ ಬಲ್ಲ ॥
**********