Showing posts with label ಅಣುದ್ವಯ ಪರಮಾಣು vijaya vittala ankita suladi ಕಾಲಾಖ್ಯ ಸುಳಾದಿ ANUDWAYA PARAMAANU KAALAAKHYA SULADI. Show all posts
Showing posts with label ಅಣುದ್ವಯ ಪರಮಾಣು vijaya vittala ankita suladi ಕಾಲಾಖ್ಯ ಸುಳಾದಿ ANUDWAYA PARAMAANU KAALAAKHYA SULADI. Show all posts

Friday, 1 October 2021

ಅಣುದ್ವಯ ಪರಮಾಣು vijaya vittala ankita suladi ಕಾಲಾಖ್ಯ ಸುಳಾದಿ ANUDWAYA PARAMAANU KAALAAKHYA SULADI

Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ  ಕಾಲಾಖ್ಯ ಸುಳಾದಿ 


 ರಾಗ ಭೈರವಿ 


 ಧ್ರುವತಾಳ 


ಅಣುದ್ವಯ ಪರಮಾಣು ಯಿಂಥಾದೆ ತ್ರಯವಾಗೆ 

ತ್ರಣು ಯೆನಿಸಿ ಕೊಂಬೋದು ಯಿದೆ ತೃಸರೇಣು 

ಮನುಜಾಗೋಚರವೆನ್ನು ಜಾಲಾರ್ಕಕಿರಣಾದಲ್ಲಿ 

ಘನವಾಗಿ ಚರಿಸುವ ದೇಶಭೇದ 

ಇನಿತು ತ್ರಸರೇಣು ತೃಟಿ ತೃಟಿ ಮೂರು ಯೆಂಬೋದು

ಅನಿಸಿಕೊಳುತಲಿದೆ ವಂದು ವೇಧ 

ತೃಣಿ ವೇಧ ವೊಂದು ಲವ ಯಿಂಥವು ಮೂರಾಗೆ 

ಎಣಿಸು ನಿಮಿಷಾವೆಂದು ನಿಮಿಷ ಮೂರು 

ಕ್ಷಣವಾಗುವದು ಕೇಳಿ ಮರಳೆ ಚನ್ನಾಗಿ ಐದು -

ಕ್ಷಣ ಕೂಡಿದರೆ ವೊಂದು ಕಾಷ್ಟ ಯೆನ್ನಿ 

ಅನುಮಾನ ಮಾಡಸಲ್ಲ ಹದಿನೈದು ಕಾಷ್ಟಾ ಲೋ -

ಚನೆ ಮಾಡು ವೊಂದು ಲಘುವು ಸಿದ್ದವಕ್ಕು 

ಗುಣಿಸು ಹದಿನೈದು ಲಘುವು ವೊಂದು ನಾಡಿಯೆಂದು 

ಇನಿತು ಆರೇಳು ಯೆಂಟು ವೊಂದು ಯಾಮಾ 

ಎಣಿಕೆ ಗೈಯೊ ಯಿಂಥ ಯಾಮ ಚತುಷ್ಟವಾಗೆ 

ದಿನಮಣಿ ಅಸ್ತಂಗತ ಹನ್ನೆರಡು ತಾಸು 

ಇನಿತು ಹನ್ನೆರಡಾಗೆರಳು ನಾಲು ಝಾಂವ 

ಎನಿಸುವದು ವೊಂದು ವಾಸರಕೆ 

ಗಣಿತಜ್ಞರು ಪೇಳುವರು ತಿಥಿ ತಾರ ಯೋಗ ಕರಣ 

ಮನುಜರಿಗೆ ವೊಂದು ದಿವಸಾಯಿತೋ ದೇವ 

ಜನನ ಮಿಕ್ಕಾದ ಕರ್ಮಗಳಿಗೆ ಯಿದೆ ಆರಂಭ 

ನೆನಿಸು ಹತ್ತೈದು ದಿವಸವೆಂಬೋದೆ ಪಕ್ಷ

ಇನಿತು ಈ ಪರಿಯಾಗೆ ಭಿನ್ನ ಪಕ್ಷ ವೆಂ -

ದೆನಿಸುವು ಶುಕ್ಲ ಕೃಷ್ಣ ಯೆಂಬೊ ನಾಮ 

ಅನುವಾಗಿ ಯೆರಡು ಪಕ್ಷ ಕೂಡಿಸಲು ಮಾ -

ತನು ಕೇಳು ತಿಂಗಳೊಂದು ಇಂಥವೆರಡು 

ಅನುಸಂಧಿ ನಾಲ್ಕು ವೊಂದು ಋತುವಾಹುದು ಯಿವೆ ಆರು 

ಗುಣಿಸಲು ವೊಂದು ವರ್ಷ ವರ್ಷ ನೂರಾಗಲು 

ಮನುಜರಿಗೆ ಪೂರ್ಣಾಯು ಯೆಂದೆನಿಸುವದು ಯೋ -

ಚನೆ ಮಾಡು ಮಾನುಷ್ಯ ಮಾನದ ಲೆಕ್ಕ 

ಅನಿಮಿಷ ತತಿಗಳಿಗೆ ಮತ್ತೆ ಬಗೆ ವೊಂದು ವತ್ಸರ 

ದಿನವೊಂದು ಹಗಲಿರಳು ಆಗೋವೆಂದು 

ವನಜಗರ್ಭನ್ನ ತನಕ ಈ ಪರಿಯಿಂದ ಯೆಣಿಸಿ

ಗುಣಿಸಿ ತಿಳಿಯಬೇಕು ಕಾಲಪ್ರಭಾ 

ಅಣುಮಹತ್ತುರೂಪ ವಿಜಯವಿಟ್ಠಲರೇಯ 

ಗುಣನಿಧಿ ಸರ್ವಕಾಲದೊಡನೆ ತಿರುಗುತಿಪ್ಪ ॥ 1 ॥ 


 ಮಟ್ಟತಾಳ 


ಮೂರೊಂದು ಯುಗವುಂಟು ಮನುಜ ಮಾನದಲ್ಲಿ 

ಸಾರುವೆ ವರ್ಷಂಗಳು ವಿವರ ವಿವರವಾಗಿ 

ಆರಂಭ ಯುಗಕೆ ಹದಿನೇಳು ಲಕ್ಷ 

ಈರೈದು ಹತ್ತುಯೆಂಟು ಸಾವಿರವೆನ್ನಿ (೧೭,೨೮,೦೦೦) 

ಚಾರು ದ್ವಿತಿಯ ಯುಗಕೆ ಲಕ್ಷದ್ವಾದಶ ತೊಂಭ -

ತ್ತಾರು ಸಾವಿರವೈಯ್ಯ (೧೨,೯೬,೦೦೦) 

ಮೂರನೆಯುಗಕೆ ಯೆಂಟುಲಕ್ಷ ಮ್ಯಾಲೆ 

ಈರೆರಡರವತ್ತು ಸಾವಿರ ವರುಷಗಳು (೮,೬೪,೦೦೦) 

ಈ ರೀತಿ ಗ್ರಹಿಸು ನಾಲ್ಕನೆಯುಗಕೆ ವಿ -

ಚಾರ ನಾಲ್ಕು ಲಕ್ಷ ತ್ರಿಂಶತಿ ದ್ವಯ ಸಹಸ್ರ (೪,೩೨,೦೦೦) 

ಹಾರೈಸು ಯೆಲ್ಲ ಕೂಡಿ ಗುಣಿಸೆ ವಿ -

ಸ್ತಾರವಾಗಿದೆ ನಾಲ್ಕು ಹತ್ತು 

ಮೂರುಲಕ್ಷ ದಶ ದಶ ಸಾವಿರವೊ (೪೩,೨೦,೦೦೦) 

ಬ್ಯಾರೆ ಬ್ಯಾರೆ ಯುಗದ ಪೆಸರಂಗಳು ಶ್ರಿಂ -

ಗಾರದಿಂದಲಿ ಕೇಳಿ ಕೃತ ತ್ರೈತಾ ದ್ವಾಪರ ಕಲಿ 

ಸಾರ ಹೃದಯರೊಲಿದು ಸಂತತ ಕರುಣದಲಿ  

ಶ್ರೀರಮಣ ನಮ್ಮ ವಿಜಯವಿಟ್ಠಲರೇಯ 

ಮೂರೊಂದು ವತ್ಸರ ನಾಮಕ ಕಾಣೊ ॥ 2 ॥ 


 ರೂಪಕತಾಳ 


ಏಕತ್ರಯ (೧ + ೩ = ೪) ವೊಮ್ಮೆ ತಿರುಗಿದರು ಮಹಯುಗ 

ನಾಕಮಾನದಲ್ಲಿ ದ್ವಾದಶ ಸಹಸ್ರವೊ (೧೨,೦೦೦) 

ಲೋಕದೊಳಗೆ ಸಿದ್ಧ ಯಿಂಥ ಮಹಯುಗ ಸಾವಿರ 

ಶ್ರೀಕಾಂತನಿಂದಲಿ ತಿರುಗಿದರದು ಅಂದು 

ಲೋಕೇಶಗಾಗುವದು ವೊಂದು ಹಗಲು ಶಬ್ದ 

ವಾಕು ಲಾಲಿಸಿ ನಾನೂರು ಮೂವತ್ತೆರಡುಕೋಟಿ (೪೩೨,೦೦,೦೦,೦೦೦) 

ಈ ಕಾಲದಂತೆ ಸಾವಿರಾವರ್ತಿ ತಿರುಗಿದರು 

ನೂಕಿ ಪೋಯಿತು ವೊಂದು ಯಿರಳು ಕಮಲಾಸನಗೆ 

ನಾಲ್ಕು ನೂರು ಮೂವತ್ತೆರಡು ಕೋಟಿ 

ಶ್ಲೋಕಾರ್ಥದಿಂದಲಿ ಯಿತ್ತಂಡ ಕೂಡಿಸಿ 

ನಾಲ್ಕೆರಡು ಅರವತ್ತು ನಾಲ್ಕು ಕೋಟಿ ಗುಣಿತ (೮೬೪,೦೦,೦೦,೦೦೦) 

ವಾಕೇಶ ಚತುರ್ಮುಖಗೆ ನಿಜವೊಂದು ದಿವಸವೊ 

ಸಕಾರಮೂರ್ತಿ ಸಿರಿ ವಿಜಯವಿಟ್ಠಲರೇಯ 

ಲೌಕಿಕಮಾನದಲ್ಲಿ ಯಿಷ್ಟು ವರ್ಷ ಗೈದಾ ॥ 3 ॥ 


 ಝಂಪಿತಾಳ 


ವನಜಸಂಭವನ ವೊಂದು ದಿವಾ ರಾತ್ರಿಯೊಳು 

ಮನುಗಳು ಚತುರ್ದಶರು ತಮ್ಮ ಪದವಿ 

ಅನುಭವಿಸುವರು ಪ್ರತ್ಯೇಕ ಪ್ರತ್ಯೇಕವಾಗಿ 

ಗಣಣೆ ಮಾಡಲಿಬೇಕು ಯಿವರ ಕಾಲ 

ಮನು ವೊಬ್ಬಗೆ ಎಪ್ಪತ್ತೊಂದು ಮಹಾಯುಗ ದಶ 

ಪನಗರ್ಧಾಲಕ್ಷ ಮೇಲೆ ಭುಕ್ತಿಕಾಲ 

ಎಣಿಕೆ ಮಾಡಲಿಬೇಕು ಯೆಪ್ಪತ್ತೊಂದು ಮಹಾಯುಗ

ವಿನಯದಿಂದಲಿ ವೊಂದು ಮಹಯುಗದ ಲೆಖ್ಖ (೪೩,೨೦,೦೦೦) 

ಇನಿತು ಯೆಪ್ಪತ್ತೊಂದರಿಂದ ವೆಗ್ಗಳಿಸೆ 

ಮನಕೆ ವೊಪ್ಪುವದು ತ್ರಿಂಶತಿ ಕೋಟಿ ಅರವತ್ತು 

ಮುನಿಲಕ್ಷ ಯಿಪ್ಪತ್ತು ಸಾಸಿರ ವರುಷ (೩೦,೬೭, ೨೦,೦೦೦) 

ಮನು ವೊಬ್ಬಬ್ಬನಿಗೆ ಮಹಯುಗ ಎಪ್ಪತ್ತೊಂದು 

ಉಣಿಸಿ ಪೋದವು ನೂಕೆ ಅದು ಸಂಖ್ಯ ಮಾಡೆ 

ಕ್ಷಣ ಬಿಡದೆ ವೊಂಭೈನೂರು ವೊಂಭತ್ತು ನಾಲ್ಕು 

ಮಿನಗುವದು ಮಹಾಯುಗ ಉಳಿದವಾರು ಈ 

ಜನಕೆ ಹಂಚಿಕೆಯಿಂದ ನೋಡಲಿಬೇಕು 

ಎಣಿಸು ಹದಿನೆಂಟುಲಕ್ಷ ವಂದೈವತ್ತು ಸಾವಿರ 

ವನಧಿ ಶತಯಿಪ್ಪತ್ತೆಂಟು ವರುಷಾರು ತಿಂಗಳ

ದಿನ ಯಿಪ್ಪತ್ತೈದು ತಾಸು ಹದಿನೇಳು ಲಘು ಐದು 

ಕೊನೆಮಾತ್ರ ವುಂಟು ಅದು ಅಲ್ಪ ವಿವಕ್ಷ 

ಮನು ಓರ್ವನಿಗೆ ಕೇಳು ಕಾಲಕ್ಲಪ್ತಿ ಅಬ್ದ 

ಮುನಿಗಳ ಸಮ್ಮತವೊ ಬಲ್ಲವರಿಗೆ ಈ ಪ್ರಕಾರದಲಿ 

(೧೮, ೫೧, ೪೨೮ ವರುಷ , ೬ ತಿಂಗಳು , ೨೫ ದಿನ , 

೧೭ತಾಸು, ೫ ಲಘು, ೫ ಕಾಷ್ಟ, ೩ ಕ್ಷಣ) 

ಇನಿತು ಮಿಶ್ರಮಾಡೆ ವೊಬ್ಬ ಮನುನಿಗೆ ಧಾ - 

ರುಣಿ ವಶವಾಗಿ ಯಿದ್ದದು ಕೇಳಿರೊ 

ಗುಣ ಹತ್ತು ಕೋಟಿ ಎಂಭತ್ತೈದು ಲಕ್ಷ, ಮಾ -

ರ್ಗಣ ಯೆರಡು ಶತ ಮೇಲೆ ವೊಂದು ಸಹಸ್ರ 

ವನಧಿ ವಿಂಶತಿ ಅಷ್ಟವರುಷ ತದು ಪರಿಯಿಂದ 

ಗುಣಿಸು ಯುಗ ಮಹಾಯುಗ ವಿಭಾಗದಿ 

ಜನನ ಮರಣ ಶೂನ್ಯ ವಿಜಯವಿಟ್ಠಲ ತಾನೆ 

ಮನುವಿನೊಳಗಿದ್ದು ತ್ರಿಲೋಕವನು ಆಳ್ವಾ ॥ 4 ॥ 


 ವಿವರ 


ಹದಿನಾಲ್ಕು ಮನುಗಳಿಗೆ ಎಪ್ಪತ್ತೊಂದು ಮಹಾಯುಗ ಪ್ರಕಾರ ಲೆಕ್ಕ 

ಮಾಡಲಾಗಿ, ೧೪ × ೭೧ = ೯೯೪ ಮಹಾಯುಗಗಳು. 


ಮನುಷ್ಯ ಮಾನದ ವರುಷಗಳು ವಂದು ಮಹಾಯುಗಕೆ (೪೩,೨೦,೦೦೦) ನಾಲ್ವತ್ತುಮೂರುಲಕ್ಷ ಯಿಪ್ಪತ್ತು ಸಾವಿರ ವರುಷ ಇದು. ಎಪ್ಪತ್ತೊಂದರಲ್ಲಿ ಹೆಚ್ಚು ಗುಣಿಸಿದರೆ ಒಬ್ಬ ಮನುವಿಗೆ - ೪೩,೨೦,೦೦೦ × ೭೧ = ೩೦,೬೭,೨೦,೦೦೦ 


೩೦,೬೭,೨೦,೦೦೦ ಇದಕ್ಕೆ ೧೪ ಮನುಗಳು. ೧೪ ರಿಂದ ಗುಣಿಸಿದರೆ ೪೨೯,೪೦,೮೦,೦೦೦ ವರ್ಷಗಳು ೯೯೪ ಮಹಾಯುಗಕೆ. 


೨೫೯,೨೦,೦೦೦ ಉಳಿದ ಆರು ಯುಗಕೆ, ಒಟ್ಟಿಗೆ ೧೦೦೦ ಯುಗಗಳಿಗೆ ೪,೩೨,೦೦,೦೦,೦೦೦ ವರುಷಗಳು. 


ಬ್ರಹ್ಮದೇವರಿಗೆ (೧) ಹಗಲು ನಾಲ್ಕು ಅಬ್ಜ, ಮೂವಕ್ತೆರಡು ಕೋಟಿ ಮನುಜ ಮಾನ, ವರ್ಷ, ಬ್ರಹ್ಮದೇವರ ಹಗಲಿಗೆ.

ಇನ್ನು ಒಬ್ಬ ಮನುವಿಗೆ ಕಾಲ, ೧ + ೧೦ ಗುಣ ಹತ್ತುಕೋಟಿ, ಎಂಭತ್ತೈದುಲಕ್ಷ ಮಾರ್ಗಣ - ೩೦,೮೫,೭೧೪,೨೮ 

ವರುಷ, ಆರು ತಿಂಗಳು (೬) ದಿನ (೨೫) ಘಳಿಗೆ (೧೭) ಲಘು (೫) ಕಾಷ್ಟ (೫) ಕ್ಷಣ (೩) ಇದಕ್ಕೆ ೧೪ ರಿಂದ ಗುಣಿಸೆ ೪,೩೨,೦೦,೦೦,೦೦೦ 


 ತ್ರಿವಿಡಿತಾಳ 


ಹದಿನಾಲ್ಕು ಮನುಗಳು ಯಿಪ್ಪರು ಸ್ವಾಯಂಭುವ 

ಇದರೊಳಗಾದಿ ಮನುವೆನಿಸಿಕೊಂಬ 

ಮುದದಿಂದ ತಿಳಿವದು ತಾಪಸಾಖ್ಯಮನು 

ಉದುಭವ ವಾಗಿಹ ನಾರೆಯಣ 

ಬುಧರು ವಿವರಿಸಿ ಯಿವರ ಸಂಧಿಕಾಲದ ಕ್ಲಪ್ತಿ 

ವೊದಗಿ ಕೊಂಡಾಡುವದು ಪುಣ್ಯವಕ್ಕು 

ಮೊದಲು ಮನುವಿಗೆ ಎರಡು ಸಾವಿರ ಹಯನ - ೨೦೦೦ 

ಅದರ ತರುವಾಯದಲಿ ಐದು ಮನುಗಳಿಗೆ 

ಹದಿನಾಲ್ಕುನೂರು ವತ್ಸರ ಪ್ರಕಾರ - ೧೪೦೦೦ × ೫ 

ಯಿದನೆ ಗುಣಿಸಲಾಗಿ ಏಳು ಸಾವಿರ ವಾ - ೭೦೦೦ 

ದದು ಕಾಣೊ ಉಳಿದೆಂಟು ಮನುಗಳ ಸಂಧಿ 

ಹದಿನೈದು ನೂರಬ್ದದಂತೆ ಉಗ್ಗಡಿಸೆ ಹನ್ನೆರಡು ಸಾವಿರವಾದವೆನ್ನಿ - ೧೨೦೦೦ 

ಇದರಂತೆ ಅವರವರ ಸಂಧಿ ಕಾಲಗಳಿಗೆ 

ತ್ರಿದಶಗಣ ಬಲ್ಲರೆ ಕಾಲ ವಿವರ 

ಮದನಜನಕ ನಮ್ಮ ವಿಜಯವಿಟ್ಠಲರೇಯ 

ಹೃದಯದೊಳಗೆ ಪ್ರೇರಿಸಿದಂತೆ ವಿವರ ನಿಶ್ಚಯಮಾಡಿ ॥ 5 ॥ 


(೨೧,೦೦೦ ಇಪ್ಪತ್ತೊಂದು ಸಾವಿರ ವರುಷ ೧೪ ಮನುಗಳ ಸಂಧಿಕಾಲ) 

ಇದರ ವಿವರ : 


೨೦೦೦ ಎರಡು ಸಾವಿರ ವರುಷ ಆದಿ ಸ್ವಾಯಂಭು ಮನುವಿಗೆ.

೭೦೦೦ ಸ್ವಾರೋಚಿಷ, ಉತ್ತುಮ, ತಾಪಸ, ರೈವತ, ಚಾಕ್ಷುಸ ಮನುಗಳಿಗೆ 

೧೪೦೦ ನೂರು ಪ್ರಕಾರ × ೫ - ೭೦೦೦ ಸಾವಿರ 

೨೧,೦೦೦ ವೈವಸ್ವತಮನ್ವಾದಿ ಇಂದ್ರಸಾವರ್ಣಿ ತನಕಾ, 

೮ ಜನಕ್ಕೆ ೧೫೦೦ ವರ್ಷ ಪ್ರಕಾರಕ್ಕೆ ಒಟ್ಟು ೨೧,೦೦೦. 


 ಅಟ್ಟತಾಳ 


ಇಂತು ಸಾವಿರ ಖ್ಯಾಪಿ ತಿರುಗಿದರೆ ದೇವ 

ತಿಂತಿಣಿ ಪಿರಿಯಂಗೆ ಹಗಲಿರಳೊಂದೆ ಅಯ್ಯ 

ಸಂತಿತೊ ಕಾಣೊ ಮುಂದೆ ಗಣತಿ ಚನ್ನಾಗಿ 

ಚಿಂತಿಸು ಬೊಮ್ಮನ್ನಾ ವಂದೆ ತಿಂಗಳಿಗೆ ಆ -

ದ್ಯಂತಕಾಲ ನೋಡೆ ಎರಡು ಅರ್ಬುದ ಐನೂರಾ ತೊಂ -

ಭತ್ತೆರಡು ಕೋಟ ವತ್ಸರ ಸಿದ್ಧ (೨೫,೯೨,೦೦,೦೦,೦೦೦) 

ಇಂಥವೆ ಹನ್ನೆರಡಾಗೆ ವೊಂದು ವರುಷ 

ಮಂತ್ರೋಕ್ತದಿಂದಲಿ ಯಿವೆ ನೂರು ಬೊಮ್ಮಗೆ 

ಕಂತುಜನಕ ರಂಗ ವಟಪತ್ರ ಶಯನನೊ 

ಎಂತು ಪೇಳಲಿ ಹರಿಯ ಶಕ್ತಿಗೆ ಸರ್ವ ಸ್ವಾ -

ತಂತ್ರನೊ ಅಜನಬ್ದ ನೂರು ವರುಷ ಪರಿ -

ಯಂತ ಮಲಗಿಪ್ಪ ಲಕುಮಿ ಸಹಿತವಾಗಿ 

ಚಿಂತಿತ ಫಲದಾಯಕ ವಿಜಯವಿಟ್ಠಲರೇಯ 

ಪಿಂತಿನ ಬೊಮ್ಮನಿಗೆ ಯಿದರಂತೆ ಫಲಿಸಿದ ॥ 6 ॥ 


 ಆದಿತಾಳ 


ಕಾಲಾತೀತ ವಿಷ್ಣು ಅಣುಮಹತ್ತುವಾದ 

ಕಾಲ ಪ್ರೇರಕನಾಗಿ ಅನಾದಿಯಿಂದ ವಿಡಿದು 

ಕಾಲನಾಮಕನೆನಿಸಿ ಸಮಸ್ತ ಜೀವಿಗಳ 

ಕಾಲಪಾಶದಿ ಸಂಸಾರದೊಳಗಿಟ್ಟು 

ಕಾಲಕಾಲಕೆ ಮಹಾ ಸುಳಿಯೊಳು ಸುತ್ತಿಸುವ 

ಕಾಲಮೂರುತಿ ಈತನ ಭಯದಿಂದ ಜಡಜೀವರು 

ಕಾಲ ಮೀರದೆ ಸರ್ವ ಸತ್ಪಥ ಕೊಡುವರು 

ಕಾಲದೊಡನೆಯಿಪ್ಪ ಕಾಲಕ್ಕೆ ಶಿಗದಿಪ್ಪ 

ಕಾಲತ್ರಯದಲ್ಲಿ ಯಿನಿತೆನಿಸಿದ ಮಾನವ 

ಕಾಲಜ್ಞಾನಿಯಾಗುವ ಆವಾವ ದೇಹದಲ್ಲಿ 

ಕಾಲನ್ನ ಭೀತಿಯಿಲ್ಲದೆ ಸುಖಿಸುವ ಗೋತ್ರದೊಡನೆ 

ಕಾಲಕ್ಕೆ ದೋಷವಿಲ್ಲ ಸಮ್ಮಂಧದಿಂದ ದುಷ್ಕಾಲ ಅಕಾಲವೆಂದು 

ಕಾಲ ಕರೆಸಿಕೊಳುತಿಪ್ಪವು ನೋಡಿರೊ 

ಕಾಲಕಂಧರ ವಿನುತ ವಿಜಯವಿಟ್ಠಲ ಸರ್ವ -

ಕಾಲಕೆ ಗತಿಯೆನ್ನು ಕಡೆಮಾಡು ಭವದಿಂದ ॥ 7 ॥ 


 ಜತೆ 


ಕಾಲವಿವರ ತಿಳಿದು ವಿಜಯವಿಟ್ಠಲರೇಯನ 

ಕಾಲಿಗೆರಗಿ ಬದುಕು ಜ್ಞಾನ ಭಕುತಿಯಿಂದ ॥

****