Monday, 6 September 2021

ಬಂದಿಹೆ ಗುರುರಾಜರೆಡೆ ಸಾಗಿ ಕುಂದಿದೆ ಭವದೊಳು ಬಹುವಾಗಿ ankita krishnavittala

 ರಾಗ: ಸಾವೇರಿ ತಾಳ: ಆದಿ


ಬಂದಿಹೆ ಗುರುರಾಜರೆಡೆ ಸಾಗಿ ಕುಂದಿದೆ ಭವದೊಳು ಬಹುವಾಗಿ


ಹೊಂದಿದೆ ದುಃಖವನತಿಯಾಗಿ ತಂದೆಯೆ ಕಾಯೊ ನೀ ಅನುವಾಗಿ ಅ.ಪ


ಹಳಸಿದಅನ್ನದತೆರನಾಗಿ ಗಳಿಸಿದೆ ಪಾಪವನತಿಯಾಗಿ

ಗಾಳಕೆಸಿಕ್ಕಿದಮೀನಾಗಿ ತೊಳಲಿದೆ ನಾನು ಬಹುವಾಗಿ 1

ಸಂಚಿತಕರ್ಮವು ಬಿಡದಾಗಿ ಚಿಂತೆಯೊಳ್ ತೊಳಲಿದೆ ಹೆಚ್ಚಾಗಿ

ವಂಚಿತನಾದೆನು ಚೆನ್ನಾಗಿ ನಿನ್ನ ಸಂತತ ಬೇಡುವೆ ಶಿರಬಾಗಿ 2

ಪ್ರಾರಬ್ಧಕರ್ಮದ ಫಲವಾಗಿ ಪರಹಿಂಸೆ ಮಾಡಿದೆ ಹುಲುಸಾಗಿ

ಯಾರನು ಕಾಣೆನು ಹಿತರಾಗಿ ಗುರುರಾಜನೊಬ್ಬನೆ ಅನುರಾಗಿ 3

ಭಯಶೋಕಮೋಹಕ್ಕೊಳಗಾಗಿ ಕಾಯವು ದಣಿಯಿತು ಬಹಳಾಗಿ

ಬಯಲಡಂಭಕೆ ಮರುಳಾಗಿ ಅನ್ಯಾಯಗೈದೆನು ಅತಿಯಾಗಿ 4

ಪರಿಪರಿಕಷ್ಟವ ತ್ವರೆಯಾಗಿ ಹರಿಸುವ ಗುರುರಾಜ ಅತಿತ್ಯಾಗಿ

ಸಿರಿಕೃಷ್ಣವಿಠಲನ ಮರೆಹೋಗಿ ಗುರು ಸೇವೆ ಮಾಡುವ ಅನುವಾಗಿ 5

***


No comments:

Post a Comment