Audio by Mrs. Nandini Sripad
ರಾಗ : ಭೌಳಿ
ಧ್ರುವತಾಳ
ಮುಕ್ತಾ ಅಮುಕ್ತಾರಿಂದರ್ಚನೆಗೊಂಬ ಚರಣ ವೀ - |
ರಕ್ತಾರ ಮನದಲ್ಲಿ ನಿಂದಿಹ್ಯ ಚರಣ ಸೂ - |
ರಕ್ತಾವರ್ನ ನಖದಿಂದಲೊಪ್ಪುವ ಚರಣ |
ಭಕ್ತಿಗೆ ಒಲಿದೊಲಿದು ಭಾಗ್ಯಕೊಡುವ ಚರಣ |
ಭಕ್ತವತ್ಸಲನೆಂಬೊ ಮಹಾ ಪ್ರತಾಪದ ಚರಣ |
ವ್ಯಕ್ತವಾಗಿ ಲೋಕಾ ಪೂರ್ಣವಾದಾದಿ ಚರಣ |
ಉಕ್ತಿಗೆ ಮೈದೋರದ ಉನ್ನತೋನ್ನತ ಚರಣ |
ಶಕ್ತಿ ಪ್ರದವಾದ ಜ್ಞಾನಾನಂದ ಚರಣ |
ತ್ಯಕ್ತಾ ವೈದಿಕಾ ಸಿದ್ಧ ಸಾರಸುಂದರ ಚರಣ |
ಭಕ್ತಿ ಭೂಷಣವಿತ್ತು ಪಾಲಿಸುವ ಚರಣ |
ಶಕ್ತಿ ಉದರದಲ್ಲಿ ಅಂಕಿತವಾದ ಚರಣ |
ಸಿಕ್ತೋದಕ ಧರಿಸೆ ಸಿರದಲ್ಲಿ ಪೊಳೆವಾ ಚರಣಾ |
ಮುಕ್ತಿ ಕೊಡುತಿಪ್ಪ ಮದನ ಲಾವಣ್ಯ ಚರಣ |
ನಕ್ತೇಶನಂದದಲಿ ಥಳಥಳಿಸುವ ಚರಣ |
ಮುಕ್ತಾಭರಣ ರಂಗಾ ವಿಜಯವಿಠಲರೇಯಾ |
ಮುಕ್ತಗಿರಿಯ ವೆಂಕಟ ಶ್ರೀನಿವಾಸನ ಚರಣ ॥ 1 ॥
ಮಟ್ಟತಾಳ
ಈ ಚರಣ ಸಮಸ್ತರಿಗೆ ಸುಲಭಸಾಧ್ಯ |
ಈ ಚರಣ ಜ್ಞಾನ ಭಕುತಿ ಕೊಡುವುದು |
ಈ ಚರಣ ಅಹಂಕಾರ ಬಿಡಿಸುವುದು |
ಈ ಚರಣ ಕರಣಶುದ್ಧಿಯ ಮಾಡುವದು |
ಈ ಚರಣ ದುರಿತ ರಾಶಿಯ ದಹಿಸುವದು |
ಈ ಚರಣದಿಂದ ಪ್ರಸಾದತ್ರಯವೊ |
ಈ ಚರಣಾರ್ಚನೆಯ ಮಾಡಿದ ಅಜಭವರು |
ಗೋಚರಿಸುವರು ತಮ್ಮ ಪದವಿಯಲ್ಲಿ ನಿತ್ಯ |
ಈ ಚರಣ ನೆನಿಸಿದವನ ಭಾಗ್ಯವೆ ಭಾಗ್ಯ |
ಈ ಚರಣ ಕರ್ಮ ಜ್ಞಾನಾನಂದಕೆ |
ಸೂಚನೆ ಕಾಣಿರೊ ಗುರುಗಳ ಕೃಪೆಯಿಂದ |
ಈ ಚರಣವೆ ದೈತ್ಯವನ ಸವರುವ ಕೊಡಲಿ |
ಈ ಚರಣ ದೋಷ ವಿರಹಿತ ಸಂಪೂರ್ಣ |
ಈ ಚರಣೀಚರಣಾ ಆಲೋಚನೆಯ ಮಾಡೆ |
ಮೋಚಕವಾಗುವುದು ಲಿಂಗಾಶರೀರವೂ |
ವಾಚಸ್ಪತಿ ಜನಕ ವಿಜಯವಿಠಲ ವೆಂಕಟ |
ಲೋಚನಕೆ ಪೊಳೆವ ಅಪ್ರಾಕೃತ ಚರಣ ॥ 2 ॥
ತ್ರಿವಿಡಿತಾಳ
ಬನ್ನಿ ಬನ್ನಿರೊ ಜನರು ಭಾಗ್ಯಪ್ರದಾತನ್ನ |
ಘನ್ನ ಚರಣಾವಿಡಿದು ಮೌಳಿಯ ಪರಿಯಂತ |
ಚನ್ನಾಗಿ ತಿಳಿದು ಧಾನ್ಯವಮಾಡಿ ವೆಂಕಟನ್ನ |
ರನ್ನ ಮಕುಟ ಕುಂಡಲ ಕರ್ಣನೊಸಲಾನಾಮಾ |
ಬಂಣಿಸಾಲರಿದು ಮುಖನಯನನಾಸಾವದನ |
ಕೆನ್ನೆಕಪೋಲಾ ಸುಲಿಪಲ್ಲು ಸುಧಾಸುರಿಯೆ |
ಚಿನ್ನದ ಸರಿಗೆ ನಾನಾಹಾರ ಕೌಸ್ತುಭಾ |
ಸನ್ನಿಭಾ ರವಿಯನ್ನೆ ಕೊರಳ ತ್ರಿವಳಿಕಾಂತಿ |
ಕನ್ನೆಲಕುಮಿ ಇಪ್ಪ ಉರ ಚತುರ್ಭುಜ ಬಾಹು |
ಉನ್ನತಕೇಯೂರ ಹಸ್ತ ಕಂಕಣಂಗೂಲಿ |
ಹನ್ನೆರಡು ಎರಡುಲೋಕಾ ಉಳ್ಳವುದರ |
ಪನ್ನಂಗನ ಕಾಯ ಸೋಲಿಸುವ ಕಟ್ಟಿಸೂತ್ರಾ |
ಗಣ್ಯಗಣದ ಪೀತಾಂಬರವೂರು ಪಾ - |
ವನ್ನ ಜಾನು ಜಂಘೆ ಪರಡು ಪಾದಾಂಗುಲಿ |
ಬನ್ನಾದಿ ಪಡದ ನಖಾ ರೇಖಾಂಕಿತ ಬಲುಪರಿ |
ಭಿನ್ನಾವಿಲ್ಲದೆ ಇಪ್ಪ ಸರ್ವಾವಯಂಗಳೂ |
ಇನ್ನೂ ಈ ವಿಧದಲಿ ನಿಮ್ಮ ಚಿತ್ತದಲ್ಲಿ ಸಂ - |
ಪನ್ನ ಈ ಮೂರ್ತಿಯ ನಿಲಿಸಿ ಆತ್ಮನೆಂದೂ |
ಬನ್ನಾ ಬಡದಿರಿ ಅಲ್ಲೆಲ್ಲಿ ಇಹನೆಂದೂ |
ಕಣ್ಣು ಮುಂದಾಡುವ ಪರಿಮಳ ಯಸವುತ್ತ |
ಪುಣ್ಯಶ್ಲೋಕರಾಯ ವಿಜಯವಿಠಲ ವೆಂಕಟ |
ಮನ್ನಿಸಿ ಮುದದಿಂದ ಪ್ರಸನ್ನನಾಗುವ ॥ 3 ॥
ಅಟ್ಟತಾಳ
ವಿಶ್ವಮಂಗಳನೀತ ವಿಶ್ವಕಾಯನೀತ |
ವಿಶ್ವಕುಟುಂಬ ಪಾಲಕನೀತ ಪ್ರಭುನೀತ |
ವಿಶ್ವಧಾರಕನೀತ ವಿಶ್ವ ವಿಶ್ವನೀತ |
ವಿಶ್ವೇಶ್ವರನೀತ ವಿಶ್ವಾಸುಗುಣನೀತ |
ವಿಶ್ವನಾಟಕನೀತ ವಿಶ್ವಪ್ರೇರಕನೀತ |
ವಿಶ್ವಕರ್ಮನೀತ ವಿಶ್ವಕಾಲನೀತ |
ವಿಶ್ವದ್ರವ್ಯನೀತ ವಿಶ್ವನೀತ |
ವಿಶ್ವವ್ಯಾಪ್ತನೀತ ವಿಶ್ವಭಿನ್ನನೀತ |
ವಿಶ್ವಮೂರುತಿ ಈತ ವಿಲಕ್ಷಣನೀತ |
ವಿಶ್ವಾಂಬರೆಯೊಳಗೆ ವಿಶ್ವಾಸದಲಿ ಶ್ವೇ - |
ತಶ್ವನ್ನ ಮಿತ್ರನ್ನ ಸುಸ್ವರದಲಿ ಪಾಡಿ |
ಈಶ್ವರ ನಾನೆಂಬ ನಶ್ವರ ಮತಿಬಿಟ್ಟು |
ಭಾಸ್ವರ ಸಂಪೂರ್ಣ ಐಶ್ವರ್ಯಾನಾಗೋ |
ವಿಶ್ವಗಿರಿವಾಸ ವಿಜಯವಿಠಲ ವೆಂಕ - |
ಟೇಶ್ವರ ಭಕ್ತರ ವ್ಯಾಧಿಗಳ ಕಳೆವಾ ॥ 4 ॥
ಆದಿತಾಳ
ದ್ರವ್ಯ ಪೂರ್ತಿ ಧರ್ಮ ಭವ್ಯಫಲದ ಭಯಹಾರಿ |
ನವ್ಯಾ ಭೂಷಣನಂದ ಪೋಷಣ |
ಅವ್ಯಕ್ತವ್ಯಕ್ತಗಾತ್ರ ದಿವ್ಯತೇಜ ದಿವಿಜರಾಜ |
ಅವ್ಯಯ ಆನಂದಮಯ ಹವ್ಯಾದಿಕ್ರಿಯಾ ನಿಯಾಮಕ |
ಸವ್ಯಸಾಚಿ ಪ್ರೀಯ ಜೀಯ್ಯ ಭವ್ಯಗಿರಿರಾಯ ವಿಜಯವಿಠಲ್ಲಾ |
ಸೇವ್ಯಮಾನನೊ ಸುರರಿಂದ ವೆಂಕಟ ॥ 5 ॥
ಜತೆ
ವೆಂಕಟಗಿರಿ ಸ್ವಾಮಿಪುಷ್ಕರಣಿನಿವಾಸ |
ಪಂಕಜಾಪತಿ ವಿಜಯವಿಠಲನ್ನ ಕೊಂಡಾಡು ॥
*****
No comments:
Post a Comment