Monday, 2 August 2021

ನಾಗವೇಣಿಯೆ ಕರೆದು ತಾರೆ ನಾಗಶಯನನಾ ankita devapura lakshmikanta

ನಾಗವೇಣಿಯೆ ಕರೆದು ತಾರೆ ನಾಗಶಯನನಾ ಪ


ನಗಧರ ಪ್ರಿಯನೆನಿಪ ನಾಗವರದನಾ ಅ.ಪ


ಜಲವಪೊಕ್ಕು ತಮ ನಲಿದ ಜಲರುಹಾಕ್ಷನಾ

ಜಲಧಿ ಮಥನವನ್ನು ಗೈದ ಚೆಲುವರರಸನಾ 1


ಧರಣಿಪೊಯ್ದ ಖಳನ ಸೀಳ್ದ ನಳಿನನಾಭನಾ

ಭರದಿ ಹೊಳೆವ ಕಂಬದಲ್ಲಿ ತರಳಗೊಲಿದನಾ 2


ಧರಣಿ ಈರಡಿಯ ಮಾಡಿ ಸುರರ ಪೊರೆದನಾ

ಧರಣಿಪಾಲಕುಲವ ತರಿದ ಪರಶುರಾಮನಾ 3


ಧರಣಿಸುತೆಯನೊಯ್ದ ಖಳನ ಶಿರವನರಿದನಾ

ತರಳತನದಿ ವೊರಳನೆಳೆದ ತರಳ ಕೃಷ್ಣನಾ 4


ತರುಣಿಯರ ವ್ರತವನಳಿದು ಪುರವಗೆಲಿದನಾ

ಹರುಷದಿಂದ ತುರಗವೇರಿ ನಲಿವ ಸುಗುಣನಾ 5


ಸುರಪುರದಿ ನಲಿವಿನಿಂದ ನೆರೆದು ನಿಂದನಾ

ಶರಣರಕ್ಷ ಲಕ್ಷ್ಮಿಯರಸ ಪರಮಪುರುಷನಾ 6

****


No comments:

Post a Comment