Monday 6 September 2021

ಸಾಕಿನ್ನು ಸ್ವಸ್ಥದಿ ಇರು ಕಂಡ್ಯ ಮನವೆ ankita krishnavittala

 ರಾಗ: ಭೈರವಿ ತಾಳ: ತ್ರಿಪುಟ


ಸಾಕಿನ್ನು ಸ್ವಸ್ಥದಿ ಇರು ಕಂಡ್ಯ ಮನವೆ

ಏಕಿಂತು ತೊಳಲುವೆ ಬರಿದೆ ನೀ ಮನವೆ


ಏಕಾಗ್ರಚಿತ್ತದಿ ಗುರು ರಾಘವೇಂದ್ರರ

ಏಕೆ ನೀ ನೆನೆಯದೆ ಕೊರಗುವೆ ಮನವೆ ಅ.ಪ


ದೇಹವೆಂಬುದು ಇದು ಎಲುಬಿನ ಗೂಡು

ಊಹಿಸಿ ನೋಡಲು ಪಾಪದ ಬೀಡು

ದೇಹದಭಿಮಾನವ ಬಿಡದೆ ಈಡ್ಯಾಡು

ವಿಹಿತಮಾರ್ಗದಿ ನೀ ಗುರುವ ಕೊಂಡಾಡು 1

ಭವಬಂಧದೊಳು ನೀ ಬಳಲಲಿಬೇಡ

ಭವದೂರ ಗುರುವನು ಮರೆಯಲಿಬೇಡ

ಪವನಪತಿಯ ಪಾದಸ್ಮರಿಸದೆ ಇರಬೇಡ

ದುರ್ವಾದಿಗಳ ಕೂಡೆ ವಾದವು ಬೇಡ 2

ಅಧಿಕಾರ ಸಂಪತ್ತು ತಾ ಸ್ಥಿರವಲ್ಲ

ಬಾಧೆಗೊಳಿಪುದು ಪರರ ತಾ ಒಳಿತಲ್ಲ

ಅಧಿಕಾರ ಹೋದಂತು ಕೇಳುವರಾರಿಲ್ಲ

ಅಧಿಕ ಪುಣ್ಯವ ಗಳಿಸೆ ಬಹಳ ಲೇಸಲ್ಲ 3

ತುತ್ತಿನಚೀಲವ ನಂಬಲಿ ಬೇಡ

ಮತ್ತಿದಕಾಗಿ ನೀನಾಶಿಸಲಿ ಬೇಡ

ಮತ್ತನಾಗುತ ನೀ ತಿರುಗಲಿ ಬೇಡ

ಉತ್ತಮ ಗುರುವನು ಮರೆಯಲಿಬೇಡ 4

ಅಳಿವು ಉಳಿವು ಎಲ್ಲ ದೇವರಧೀನ

ಅಳಿವ ಕಾಯವು ಒಂದೇ ಮನುಜಗಧೀನ

ಇಳೆಯೊಳು ಶ್ರೀ ಕೃಷ್ಣವಿಠಲನ ಧ್ಯಾನ

ತಿಳಿದು ನೀ ಮಾಡುತ ಪಡೆಯಲೋ ಜ್ಞಾನ 5

***


No comments:

Post a Comment