ankita ರಘುನಾಯಕ/ರಘುರಾಮ (ಅನೇಕ)
ರಾಗ: ಆನಂದಭೈರವಿ ತಾಳ: [ಆದಿ]
ಆನಂದಮಹುದೆನೆಗೆ ನಿನ್ನ ನಾಮಸ್ಮರಣೆ ಪ
ಮಾನನಿಧಿ ಗುರುವರ್ಯ ರಾಘವೇಂದ್ರ ಅ. ಪ
ನೀ ನುಡಿದುದೇ ವೇದ ನೀ ನಡೆದುದೇ ಧರ್ಮ
ಮಾನವರ್ಗದೆ ಮಾರ್ಗ ಚರಿತಾರ್ಥವು
ಮೌನಿಮಣಿ ನಿನ್ನಮೃತವಾಣಿಯೊಂದೇ ಸಾಕು
ಕಾಣಿಪುದು ಮುಕ್ತಿಯನು ನಿತ್ಯ ಸತ್ಯ 1
ಅನವರತ ಭಕ್ತಿಯಿಂ ಭಜಿಸುವರ ಕರುಣದಿಂ
ಕನಸಿನಲಿ ಪೋಷಿಸುವೆ ತಂದೆ ಗುರುವೆ
ಮುನಿಸು ನಿನಗಿನಿಸಿಲ್ಲ ಎಲ್ಲಿರಲಿ ಎಂತಿರಲಿ
ಮುನಿರಾಯ ಬಂದೊದಗಿ ಕಾಪಾಡುವೆ 2
ಅದುವೆ ಭೂವೈಕುಂಠ ಅಲ್ಲಿರುವ ರಘುರಾಮ
ಅದೆಕೊ ಮಂತ್ರಾಲಯಂ ಪುಣ್ಯನೆಲೆಯು
ಅದುವೆ ಶ್ರೀ ರಾಘವೇಂದ್ರರು ನಿಂದ ನೆಲೆವೀಡು
ಒದಗಿ ಭಜಿಸೈ ಮನುಜ ಗುರುರಾಯರ 3
***
No comments:
Post a Comment