ankita ಪಂಡರೀನಾಥವಿಠಲ
ರಾಗ: ಹಂಸಾನಂದಿ ತಾಳ: [ಆದಿ]
ರಾಘವೇಂದ್ರರಾಯಾ ಈ ಭವ
ರೋಗ ಕಳೆಯೋ ಜೀಯಾ ಪ
ರಾಘವೇಂದ್ರಗುರು ರಾಯ ನಿಮ್ಮಂಘ್ರಿಯ
ಜಾಗುಮಾಡದಲೆ ಬಾಗಿ ಭಜಿಸುವೆನು ಅ ಪ
ಮಂತ್ರಾಲಯನಿಲಯಾ ಸಂತತ
ಚಿಂತಿಸುವೆನು ನಿನ್ನಾ
ಕಂತು ಜನಕ ಶ್ರೀಕಾಂತನ ಪ್ರೀಯನೆ
ಚಿಂತೆ ಹರಿಸೊ ಬಹು ಭಕ್ತಿಲಿ ಬೇಡುವೆ 1
ಶ್ರೀ ಸುಧೀಂದ್ರಕರಜಾ ಗುರುವರ
ಸೂಸಿ ಭಜಿಪೆ ನಿನ್ನಾ
ದೋಷರಹಿತ ಶ್ರೀನಿಲಯನ ದಾಸನೆ
ದೋಷಿಯು ನಾ ನಿಜ ದೂಷಿಸದಿರೊ ಶ್ರೀ 2
ನಿಜ ಕರುಣಿಯು ನೀನೆ ಈ ಭುವಿ
ಸುಜನರ ಪೊರೆಯುವನೇ
ನಿಜವಾಗಿಯು ನಂಬಿಹೆ ಪದರಜಗಳ
ಗಜವರದನ ದಾಸನೆ ತ್ವರ ಕರುಣಿಸೋ 3
ಹ್ಯಾಗೆ ಸ್ತುತಿಸಲಯ್ಯಾ ನಿನ್ನನು
ರಾಘವೇಂದ್ರರಾಯಾ
ನಾಗಶಯನ ಹರಿ ಭಕ್ತಾಗ್ರೇಸರ
ಕೂಗಿ ಕರೆಯುವೆನು ಸ್ತುತಿಸಲು ತಿಳಿಯೆನು 4
ಮಂಗಳ ಮೂರುತಿಯೇ ಶ್ರೀನರ-
ಸಿಂಗನ ಕಂಡವನೇ
ಭಂಗಿಸೋ ಭವಭಂಗಗಳೆಲ್ಲವ ಬೇಗ
ರಂಗ ಪಂಢರಿನಾಥವಿಠಲನ ದಾಸಾ 5
***
No comments:
Post a Comment