Saturday, 13 March 2021

ನರನಾದ ಮೇಲೆ ಹರಿನಾಮ ಜಿಹ್ವೆ purandara vittala

 ರಾಗ - : ತಾಳ -


ನರನಾದ ಮೇಲೆ

ಹರಿ ನಾಮ ಜಿಹ್ವೆಯೊಳಿರಬೇಕು ll ಪ ll


ಭೂತ ದಯಾಪರನಾಗಿರ ಬೇಕು

ಪಾತಕವೆಲ್ಲವ ಕಳೆಯಲು ಬೇಕು

ಮಾತು ಮಾತಿಗೆ ಹರಿಯೆನ್ನ ಬೇಕು ll 1 ll


ಆರು ವರ್ಗವನಳಿಯಲು ಬೇಕು

ಮೂರು ಗುಣಂಗಳ ಮೀರಲು ಬೇಕು

ಸೇರಿ ಬ್ರಹ್ಮನೊಳಿರಬೇಕು ll 2 ll


ಅಷ್ಟ ಮದಂಗಳ ತುಳಿಯಲು ಬೇಕು

ದುಷ್ಟರ ಸಂಗವ ಬಿಡಲು ಬೇಕು

ಕೃಷ್ಣ ಕೇಶವ ಎನ್ನಬೇಕು ll 3 ll


ವೇದ ಶಾಸ್ತ್ರವನೋದಲು ಬೇಕು

ಭೇದಹಂಕಾರವ ನೀಗಲು ಬೇಕು

ಮಾಧವ ಸ್ಮರಣೆಯೊಳಿರಬೇಕು ll 4 ll


ಶಾಂತಿ ಕ್ಷಮೆ ದಮೆ ಪಿಡಿಯಲು ಬೇಕು

ಭ್ರಾಂತಿ ಕ್ರೋಧವ ಕಳೆಯಲು ಬೇಕು

ಸಂತರ ಸಂಗದಿ ರತಿಯಿರಬೇಕು ll 5 ll


ಗುರುವಿನ ಚರಣಕ್ಕೆರಗಲು ಬೇಕು

ತರಣೋಪಾಯವನರಿಯಲು ಬೇಕು

ವಿರಕ್ತಿ ಮಾರ್ಗದಲಿರಬೇಕು ll 6 ll


ಬಂದದ್ದುಂಡು ಸುಖಿಸಲು ಬೇಕು

ನಿಂದಾ ಸ್ತುತಿಗಳ ತಾಳಲು ಬೇಕು

ತಂದೆ ಪುರಂದರವಿಟ್ಠಲನೆನಬೇಕು ll 7 ll

***


No comments:

Post a Comment