Wednesday, 4 December 2019

ಕಂಡು ಕಂಡೆಂತು ಕೈ ಬಿಡುವೆ ಹರಿಯೆ purandara vittala

ಪುರಂದರದಾಸರು
ಕಂಡು ಕಂಡೆಂತು ಕೈ ಬಿಡುವೆ ಹರಿಯೆ |ಪುಂಡರೀಕಾಕ್ಷನಿನ್ನ ನಂಬಿದ ಮೇಲೆ ಪ

ಕ್ಷಣವೊಂದು ಯುಗವಾಗಿ ತೃಣಕಿಂತ ಕಡೆಯಾಗಿ |ಬಣಗುದಾರಿದ್ರ್ಯದಲಿ ಬಲು ನೊಂದೆನಯ್ಯ ||ಫಣಿಶಾಯಿ ಪ್ರಹ್ಲಾದವರದನೇ ನೀನೆನಗೆ |ಹೊಣೆಯಾದ ಮೇಲಿನ್ನು ಮರುಳು ಗೊಳಿಸುವರೆ? 1

ಒಂದು ದಿನ ಅತಿಥಿಗಳನುಪಚರಿಸಿದವನಲ್ಲ |ಬೆಂದೊಡಲ ಹೊರೆದು ಬೇಸತ್ತೆನಯ್ಯ ||ಕುಂದು-ಕೊರತೆಯು ಏಕೆ ? ನಿನ್ನ ನಂಬಿದೆ ದಯಾ-|ಸಿಂಧುಗೋವಿಂದನೇ ತಂದೆಯಾದ ಮೇಲೆ2

ಬಂಧು ಬಳಗ ಮುನ್ನಿಲ್ಲ ಬದುಕಿನಲ್ಲಿ ಸಖವಿಲ್ಲ |ನಿಂದ ನೆಲ ಮುನಿಯುತಿದೆನೀರಜಾಕ್ಷ||ತಂದೆ-ತಾಯಿಯು ನೀನೆ ಬಂಧು ಬಳಗವು ನೀನೆ |ಕುಂದದೇ ರಕ್ಷಿಸೈ ನಂದನಂದನನೆ 3

ಆಶೆಯನು ಬಿಡಲಿಲ್ಲ ಅತಿ ಹರುಷವೆನಗಿಲ್ಲ |ದೇಶದೇಶವ ತಿರುಗಿ ದೆಸೆಗೆಟ್ಟೆನಯ್ಯ ||ವಾಸವಾರ್ಚಿತನಾದ ವೈಕುಂಠನಿಲಯ ಲ-|ಕ್ಷ್ಮೀಶ ನೀಯೆನ್ನ ಕಣ್ಣಾರೆ ಕಂಡ ಮೇಲೆ 4

ಭಕುತವತ್ಸಲನೆಂಬ ಬಿರುದು ಹೊತ್ತಿದ ಮೇಲೆ |ಭಕುತರಾಧೀನನಾಗಿರ ಬೇಡವೆ ||ಮುಕುತಿದಾಯಕನೆ ಬೇಲೂರು ಪುರಾಧೀಶ್ವರ |ಸಕಲ ದೇವರದೇವಪುರಂದರವಿಠಲ5
*******

No comments:

Post a Comment