Wednesday, 1 September 2021

ಹರಿಸ್ಮರಣೆ ಪೂರಣ ಕರತನ್ನಿ ankita mahipati

ಕಾಖಂಡಕಿ ಶ್ರೀ ಮಹಿಪತಿರಾಯರು

ಹರಿಸ್ಮರಣೆ ಪೂರಣ ಕರತನ್ನಿ ಪ  


ಕರತನ್ನಿರೊ ವರಗುರು ಕೃಪೆಯಿಂದ ಗುರುವರ ಮೂರುತಿ ಕರುಣಾನಂದ 1 

ಕರುಣಿಸಿ ನೋಡಲು ಬಾಹುದು ಪುಣ್ಯ ಶರಣ ಜನರಿಗಿದು ತಾರ್ಕಣ್ಯ 2 

ತಾರ್ಕಣ್ಯಂಬುದು ತರ್ಕರಹಿತ ಸರ್ಕನೆ ತಿಳಿವದು ತನ್ನೊಳು ಗುರುತ 3 

ಗುರ್ತವಾಗಲು ನಿಜ ಹಿತಾರ್ಥ ಅರ್ತವಗಿದು ಸ್ವಸುಖ ಪರಮಾರ್ಥ 4 

ಪರಮಾರ್ಥವು ಪರಗತಿ ಸಾಧನ ಪರಲೋಕಕೆ ಐದುವ ಸೊಪಾನ 5 

ಸೋಪಾನವೆ ಸುಲ್ಲಭ ಸುಪಥ ಉಪಾಯದಲಿ ತಿಳಿಯಲು ಸ್ವಹಿತ 6 

ಸ್ವಹಿತ ಮಾರಿಕೊಂಬುದೇ ಸುಖ ಸಾಹ್ಯ ಮಾಡುವ ಶ್ರೀ ಗುರುಕುಲತಿಲಕಾ 7 

ಶ್ರೀಗುರು ಸೇವೆಯ ಮಾಡಿರೊ ಬ್ಯಾಗ ಜಗದೊಳಗಿದು ಮಹಾ ಪುಣ್ಯದ ಯೋಗ 8 

ಯೋಗವೆ ಮಹಾ ನಿಜ ಭಕ್ತರ ಪ್ರಾಣ ಸುಗಮ ಸುಪಥ ಸದ್ಗತಿ ಸಾಧನ 9 

ಸಾಧನ ಪಡೆವದು ಗುರುದಯ ಕರುಣ ಸದಮಲ ಸುಖ ಸುಜ್ಞಾನದ ಸ್ಪುರಣ10 

ಸ್ಪುರಣ ಸುಫಲಿತ ಸುಜನರ ಹೃದಯ ಸುರ ಮುನಿ ಜನರಾನಂದದ ಉದಯ 11 

ಉದಯವಾಯಿತು ಮಹಿಪತಿ ಮನದೊಳಗೆ ಸದೋದಿತವಾಯಿತು ಗುರುಕೃಪೆಲೆನಗೆ 12 

ಎನ್ನೊಳು ದೋರಿತಾನಂದದಲಹರಿ ತನ್ನಿಂದಲಿ ತಾನೊಲಿದ ಶ್ರೀ ಹರಿ 13

***


 

No comments:

Post a Comment