ಕಾಖಂಡಕಿ ಶ್ರೀ ಕೃಷ್ಣದಾಸರು
ಹಬ್ಬವನು ಮಾಡಿದನು ಗುರುರಾಯ ಇಬ್ಬರೊಡಗೂಡಿಸುವದಿಂಗಿತದ ನೆಲೆಯರಿದು ಪ
ಶ್ರವಣದಕ್ಷತೆ ಕೊಟ್ಟು ಪರಮಾರ್ಥ ದೌತಣದಿ | ಅವನಿಯೊಳು ಪರಮ ಕರುಣ ಸ್ನೇಹದಿ | ಸುವಿವೇಕ ವೈರಾಗ್ಯ ವೆಂಬ ಜಲ ಸಮಬೆರಸಿ | ತವಕದಲಿ ಮಜ್ಜನವ ಗೈಸಿದನು ಮುದದಿ 1
ಸ್ಥಿರ ಚಿತ್ತ ದಾಸನದಿ ಕುಳ್ಳಿರಿಸಿ ಸದ್ಭಾವ ಬೋಧ ಸುಧೆಯಾ ಪರಿ ಪರಿಯಲುಣಿಸಿ ಅಪರೋಕ್ಷದನುಭವ ಕಲಶ ನೆರೆವಿಡಿಸಿ ಕೈದೊಳಿಸಿ ಭವದೆಂಜಲ ಗೆಳಸೀ 2
ಸಹಜಾವಸ್ಥೆ ತಾಂಬೂಲವನು ಕರದಿತ್ತು | ವಿಹರಿಸುತ ನಿರ್ವಿಕಲ್ಪ ಸಮಾಧಿಯಾ | ವಿಹಿತದುಡುಗೊರೆ ಹೆಗಲಲಿಪೊದಿಸಿ ಪಾಲಿಸಿದ | ಮಹಿಪತಿ ಸ್ವಾಮಿ ನಂದನಗ ದಯ ಬೀರಿ 3
***
No comments:
Post a Comment