ನೋಡ್ ನೋಡಾ ಶ್ರೀಹರಿ ತಾನೆಂಥ ಚೆಲುವ ನೋಡಾ l
ನೋಡ್ ನೋಡಾ ರುಕ್ಮಿಣೀ ಅರಸೆಂಥ ಚೆಲುವ ನೋಡಾ l
ನೋಡ್ ನೋಡಾ ಗೋಪಾಲಕೃಷ್ಣ ಎಂಥ ಚೆಲುವ ನೋಡಾ ll ಪ ll
ಕಾಲಿನಲ್ಲಿ ಗೆಜ್ಜೆ ನೋಡಾ l ಮೇಲೆ ಪ್ಪೈಜಣ ಸರಪಳಿ ನೋಡಾ l
ಉಂಗುಷ್ಟದಲ್ಲಿ ಗಂಗೆಯ ಪಡೆದ ಮಂಗಳಾತ್ಮಕ ರಂಗನ ನೋಡಾ ll 1 ll
ವಜ್ರದ ಕಿರೀಟ ನೋಡ l ಕರ್ಣಕುಂಡಲವ ನೋಡ l
ಚಿನ್ನದ ಕೊಳಲನೂದುವಂಥ ಸಣ್ಣ ಬಾಲಕೃಷ್ಣನ ನೋಡಾ ll 2 ll
ವಕ್ಷಸ್ಥಳದಿ ಲಕ್ಷ್ಮೀನೋಡ l ವೈಜಯಂತಿ ಮಾಲೆಯ ನೋಡ l
ಹೊಕ್ಕಳಿಂದ ಬ್ರಹ್ಮನ ಪಡೆದ ಸುಂದರಾತ್ಮಕ ಕೃಷ್ಣನ ನೋಡಾ ll 3 ll
ಕಂದನ ಮೊರೆಯ ಕೇಳಿ ಕಂಭದಿಂದ ಒಡೆದು ಬಂದ l
ಹಿರಣ್ಯಕಶ್ಯಪನ ಒಡಲ ಸೀಳಿ ಕರುಳಮಾಲೆ ಧರಿಸಿದ ನೋಡಾ ll 4 ll
ಕರಿಯರಾಜನ ಮೊರೆಯ ಕೇಳಿ ಚಕ್ರದಿಂದ ನಕ್ರನ ಸೀಳಿ l
ಪುರಂದರವಿಟ್ಠಲನಾಗಿ ತಾನು ಗಿರಿಯ ಮೇಲೆ ನಿಂತ ನೋಡಾ ll 5 ll
***
No comments:
Post a Comment