Saturday, 7 December 2019

ಏಳಯ್ಯ ಬೆಳಗಾಯಿತು ಏಳು ಹೃಷಿಕೇಶ purandara vittala

ಉದಯರಾಗ ಝಂಪೆತಾಳ

ಏಳಯ್ಯ ಬೆಳಗಾಯಿತು ||ಪ||
ಏಳು ಹೃಷಿಕೇಶ ಏಳು ರವಿಶಶಿವಂದ್ಯ
ಏಳು ಪಶುಗಳ ಕಾಯ್ದೆ ಪಾಲಿಸಿದೆ ಗೋಕುಲವ
ಏಳು ಯಶೋದೆಸುತನೆ ಏಳು ಭೂಸತಿರಮಣ ||ಅ||

ಪಚ್ಚೆ ಮುಡಿವಾಳಗಳು ಅಚ್ಚ ಶಾವಂತಿಗೆಯು
ಬಿಚ್ಚನೆ ಜಾಜಿ ಸಂಪಿಗೆಯು ಪುನ್ನಾಗ ಕುಕ್ಷಿಯೊಳು
ಈರೇಳು ಭುವನವನು ಸಲಹುವೆ
ಅಚ್ಚ ಜಾಣೆಯರು ಶ್ರೀಗಂಧಪುನುಗು ಕಸ್ತೂರಿ
ಬಿಚ್ಚನೆ ಬೆಳೆಯೆಲೆಯ ಪಿಡಿದು ನಿಂತಿದ್ದಾರೆ
ಮುಚ್ಚುತಿವೆ ತಾರೆಗಳು ಹೆಚ್ಚುತಿದೆ ರವಿಕಿರಣ
ಅಚ್ಯುತನೆ ಉಪ್ಪವಡಿಸೊ ||

ಚೆನ್ನೆಯರು ಚದುರಸಂಪನ್ನೆಯರು ಪನ್ನೀರು
ಪೊನ್ನ ತಂಬಿಗೆಗಳಲಿ ಪಿಡಿದು ನಿಂತಿದ್ದಾರೆ
ಮನ್ನಣೆಯ ನಾರದರು ಮೊದಲಾದ ಸುರನಿಕರ
ನಿನ್ನ ಮಹಿಮೆಯ ಪಾಡಿ ನಲಿಯುತಿರೆ
ಇನ್ನು ಉದಯದ ಸಮಯ ಸಿರಿಯರಸ
ಚೆನ್ನಿಗನೆ ಉಪ್ಪವಡಿಸೊ ||

ದೇವದುಂದುಭಿ ಮೊಳಗೆ ನಿಮ್ಮ ಓಲಗದ ಸಂಭ್ರಮಕೆ
ದೇವಾದಿದೇವತೆಗಳೆಲ್ಲ ನೆರೆದು
ದೇವಪ್ರಹ್ಲಾದ ಬಲಿ ಮುಖ್ಯರನು ಕಾಯ್ದೆಂದು
ದೇವಬ್ರಹ್ಮನ ಪಡೆದ ದೇವಗಂಗೆಯ ಪಿತನೆ
ದೇವದೇವೋತ್ತಮನೆ ದೇವಾದಿದೇವನೇ
ದೇವಪುರಂದರವಿಠಲನೆ ಉಪ್ಪವಡಿಸೊ ||
**********

No comments:

Post a Comment