Monday, 20 September 2021

ವಾಸುದೇವನ ಚರಣ vijaya vittala ankita suladi ಮಂತ್ರದೇವತಾ ಸುಳಾದಿ VAASUDEVANA CHARANA MANTRA DEVATA SULADI


Audio by Mrs. Nandini Sripad


ಶ್ರೀವಿಜಯದಾಸಾರ್ಯ ವಿರಚಿತ 


ಮಂತ್ರದೇವತಾ ಸುಳಾದಿ 


(ಮಂತ್ರದೇವತೆಗಳ ಮತ್ತು ಮಂತ್ರಗಳ ಬಗೆಗಳನ್ನು ಅರಿವುದು.) 


ರಾಗ ಕಲ್ಯಾಣಿ 


ಧ್ರುವತಾಳ 


ವಾಸುದೇವನ ಚರಣ ಸರಸಿಜ ಧೂಳಿ -

ಯಾ ಶಿರಸಿನಲಿ ಸೂಸುವದು

ಆ ಸುಮನಸರ ಸಮಾನನು ಕಾಣೊ

ವಾಸವಾಗುವ ಮೀಸಲ ಪದವಿಲಿ

ದೋಷ ವರ್ಜಿತರಾದ ದಾಸರನನುಸರಿಸಿ

ರಾಶಿ ಗುಣದಲ್ಲಿ ಲೇಸನಾಗಿ

ವಾಸಿಪಂಥವ ಬಿಟ್ಟು ಬ್ಯಾಸರಕೆಯ ಮನ -

ಬೀಸಿ ಬಿಸಾಟು ಸಂತೋಷದಲ್ಲಿ

ಸಾಸಿರಾರ್ಚಿಸೆ ನಾಮ ವಿಜಯವಿಟ್ಠಲನ್ನಾ -

ಕಾಶ ಹೃದಯದಿ ನಿಲಿಸಿ ನೀ ನಮಿಸು ॥ 1 ॥ 


ಮಟ್ಟತಾಳ 


ಪಂಚಭೂತದ ಪ್ರಾಪಂಚವನಳಿದು

ಪಂಚೇಂದ್ರಿಯಗಳೆಂಬ ವಂಚನಿಯ ತೊರೆದು

ಪಂಚಭೇದ ತಿಳಿದು ಸಂಚಿತ ಪ್ರಾರಬ್ಧ

ಮುಂಚಿನ ಕರ್ಮಕ್ಕೆ ಸಂಚಗಾರವ ಪಿಡಿದು ಕೊಂಚಮನನಾಗದಲೆ

ಲಂಚೆಗುಳಿ ಗುಪ್ತ ವಿಜಯವಿಟ್ಠಲ ಹರಿಯ

ಪಂಚದಶನೆಂದು ಅಂಚಿಗಂಚಿಗೆ ಭಜಿಸೊ ॥ 2 ॥ 


ರೂಪಕತಾಳ 


ಮಡದಿ ಮಕ್ಕಳು ನಿನ್ನ ಒಡಿವೆ ವಸ್ತದ ಮ್ಯಾಲೆ

ಕಡುನೇಹ ಮಾಡಿ ಬೆಂಬಿಡದೆ ಮನವಿಟ್ಟಂತೆ

ಪಿಡಿದರಘಳಿಗೆ ವಿಕ್ಕಡಿ ಚಿತ್ತನಾಗದೆ

ಪೊಡವೀಶ ರಂಗನ ಅಡಿಗಳಲಿ ಆವಾಗ

ತಡಿಯದೆ ಭಕುತಿಯ ನಡಿಸಿ ಆತನ ಕರುಣ ಪಡೆದು ವಶೀಕರಿಸೋದು

ದೃಢ ದೈವ ವಿಹಾಯಾಸಹಿತ ವಿಜಯವಿಟ್ಠಲ

ಕಡು ಮೆಚ್ಚಿ ಬೆನ್ನನು ಬಿಡದೆ ಪಾಲಿಸುವನು ॥ 3 ॥ 


ಝಂಪಿತಾಳ 


ಇಂಧನ ಮಥಿಸಿ ಪಾವಕನ ಪಡೆದಂತೆ

ಇಂದು ನಿನ್ನಯ ಹೃದಯ ಮಧ್ಯದಲಿ

ಇಂದಿರೇಶನ ಪಾದ ನಖದ ಸಂದರುಶನಕೆ

ಛಂದವಾಗಿ ಮನಸು ಮಥನ ಮಾಡಿ

ಕಂದೆರದು ಜ್ಞಾನಾಂಕುರದಿಂದ ನೋಡಿ ಗೋ -

ವಿಂದನ್ನ ಪೂಜಿಪದು ಹರುಷದಲ್ಲಿ

ಸಂದೇಹ ಸಲ್ಲ ಲಕ್ಷ್ಮೀ ವಿಜಯವಿಟ್ಠಲನ್ನ

ವಂದಿಸಿ ನೀ ಬಪ್ಪ ದ್ವಂದ್ವವನು ನೀಗು ॥ 4 ॥ 


ತ್ರಿವಿಡಿತಾಳ 


ತಂತುನಾಳಿಲಿಂದ ಮದವೇರಿ ತಿರಗುವ

ದಂತಿಯ ಎಳತಂದು ಕಟ್ಟಿದಂತೆ

ನಿಂತ ಭಕುತಿ ಎಂಬ ತಂತು ನಾಳಿಲಿಂದ

ಕಂತುಪಿತನೆಂದೆಂಬ ಮದಕರಿಯಾ

ಸಂತತ ಹೃದಯವೆಂಬಾಖ್ಯಾನ ಪುರದೊಳು

ಅಂತರಾತ್ಮಕನ ನಿಲಿಸಿ ನಿಲಿಸಿರೊ

ದಂತಿವರದ ಊರ್ಧ್ವ ವಿಜಯವಿಟ್ಠಲರೇಯ

ಸಂತರಿಸುವನು ಆದ್ಯಂತ ಕಾಲದಲ್ಲಿ ॥ 5 ॥ 


ಅಟ್ಟತಾಳ 


ಆವಾವ ದುಃಶಾಸ್ತ್ರ ಆವಾವ ದುಃಸ್ಸಂಗ

ಆವಾವ ದುರ್ಮಿಥ್ಯ ಆವಾವ ಮೋಹಕ

ಆವಾವದಾದರು ಜೀವಾಧಮರಿಂದ

ದೇವದೇವರ ವಾಸುದೇವಗೆ ಪೇಳುವ

ಕೂವಾದ ಬರಲದ ನೀ ಒದದು ಕಳ -

ದಾವಾವ ಪರಿಯಲ್ಲಿ ಪಾವಮಾನಿಯ ಮತ

ಭಾವದಲ್ಲಿ ಮೆಚ್ಚಿ ಕೋವಿದನಾಗೋದು

ಶ್ರೀವರನಾಮಕ ವಿಜಯವಿಟ್ಠಲನ್ನ

ತಾವರೆ ಪದಗಳ ಪಾವನ ನೋಡೋ ॥ 6 ॥ 


ಆದಿತಾಳ 


"ಆಮೇತ ಸಹಿತ ದೃಷ್ಟಾಪ್ರೀಯತಾ ಸರ್ವತೋ"

ಪ್ರಮೇಯಗಳನರಿದು ಶುದ್ದ ಸಮಚಿತ್ತದಲ್ಲಿ ಇದ್ದು 

ಮಮತೆಯನ್ನು ಬಿಟ್ಟು ನಿಜ ಸಮಾಧಿಯಲ್ಲಿ ಕುಳಿತು ಆ -

ತುಮ ಮೂರ್ತಿರೂಪವರಿತು ಶಮದಮೆ ಮನದಲ್ಲಿ 

ಸಮಾಧಾನವಾಗಿ ನೋಡಿ

ಅಮೇಯಾತ್ಮನಾಮ ನಮ್ಮ ವಿಜಯವಿಟ್ಠಲನಂಘ್ರಿ

ಕಮಲವನ್ನು ಕಮಲದೊಳು ನಮಿಸಿ ನವಭಕುತಿಯಲ್ಲಿ ॥ 7 ॥ 


ಜತೆ 


ದ್ವಾದಶ ಮೂಲ ಮಂತ್ರದಲ್ಲಿ ಸಾಧಿಸಿ ಮನ

ಸಾಧುವೆ ವಿಜಯವಿಟ್ಠಲನ ಪಾದವ ಕಾಣೊ ॥

***



No comments:

Post a Comment