ಧನವ ಗೆದ್ದವರುಂಟೆ ಜನರೊಳಗೆ ಶ್ರೀನಿವಾಸ ಪ
ಕನಸಿಲಾದರು ಬಿಡದು ಕನಕದಾಶೆಯು ಈಶ ಅ.ಪ.
ಹೆಂಡತಿಯ ಬಿಡಬಹುದು ಮಂಡೆಬೋಳಿಸಬಹುದು
ಕಂಡ ಕಂಡವರೀಗೆ ದಂಡ ಬೀಳಲಿ ಬಹುದು
ಪುಂಡರೀಕಾಕ್ಷನಿಗೆ ತೊಂಡನಾಗಲಿ ಬಹುದು
ದುಡ್ಡು ಕಾಸುಗಳನ್ನು ನೀಡಲಾಗದು ಮನಸು 1
ನಾಮ ಹಾಕಲಿಬಹುದು ನೇಮಮಾಡಲಿಬಹುದು
ಹೋಮಮಾಡುತಲಿ ಬಹು ಕರ್ಮಿಷ್ಟನೆನಿಸಬಹುದು
ನಾಮ ಪಾಡಲಿಬಹುದು ಧರ್ಮಪೇಳಲಿ ಬಹುದು
ಹೇಮದಾಶೆಯು ಬಿಡದೂ ಶ್ರೀ ಮನೋಹರನೇ 2
ಜಪಮಾಲೆಧರಿಸುತಲಿ ಉಪವಾಸ ಮಾಡಬಹುದು
ತಾಪಸನು ಎನಿಸುತಲಿ ಪುರಾಣಗಳ ಪೇಳಲಿಬಹುದು
ಶ್ರೀಪತಿಯ ಸೇವಿಸುತ ಜಪತಪವ ನಡೆಸಬಹುದು
ರೂಪಾಯಿ ಮಮತೆ ತಾ ಮುಪ್ಪಿನಲು ತೊಲಗದೈಯ್ಯ 3
ಯಾತ್ರೆಮಾಡಲಿಬಹುದು ಸ್ತೋತ್ರ ಘಟ್ಯಾಗಿ ಹೇಳಬಹುದು
ನೀತಿ ಪೇಳಲಿಬಹುದು ಪೂತನೆನಿಸಬಹುದು
ಮಾತು ಮಾತಿಗೆವೇದ ಎತ್ತಿ ಪೇಳಲಿಬಹುದು
ಪ್ರೀತಿ ತಪ್ಪದೂ ಯೆಂದೂ ಆಸ್ತಿ ಧನಕನಕದಲಿ 4
ಲಜ್ಜೆಬಿಡುತಲಿ ಬೇಗ ಗೆಜ್ಜೆಕಟ್ಟಲಿ ಬಹುದು
ಸಜ್ಜನನುಯೆಂದೆನಿಸಿ ಮೂರ್ಜಗದಿ ಮೆರೆಯಬಹುದು
ಮಜ್ಜನಕ ಜಯತೀರ್ಥ ವಾಯು ಹೃದಯದಲಿರ್ಪಜ
ಗಜ್ಜನಕ “ಶ್ರೀಕೃಷ್ಣವಿಠಲ”ನೆ ನೀವಲಿವ ತನಕ 5
****
No comments:
Post a Comment