ಮೇಲುಕೋಟೆ
by yadugiriyamma
ಯದುಗಿರಿವಾಸ ನಾರಾಯಣ ಯದುಗಿರಿವಾಸ ಪ
ಯದುಗಿರಿವಾಸನೆ ಬುಧಜನಪೋಷನೆ
ಮದಮುಖಶಿಕ್ಷನೆ ಪದುಮದಳಾಕ್ಷನೆ ಅ.ಪ
ವೇದವ ತಂದು ಅಜನಿಗಿತ್ತು ಭಾರವ ಪೊತ್ತು
ಕೃತಯುಗದೊಳಗೆ ವೇದಾದ್ರಿಯೆಂದೆನಿಸಿದೆ
ಚತುರ್ಮುಖನಲಿ ಪೂಜೆ ಗ್ರಹಿಸಿದ ನಾರಾಯಣ 1
ನಿಗಮವ ತಂದು ಮನುವಿಗಿತ್ತು ಕಂಬದಿಂ ಬಂದು
ತ್ರೇತಾಯುಗದಲ್ಲಿ ನಾರಾಯಣಗಿರಿಯೆನಿಸಿದೆ
ಸನಕಾದಿಗಳ ಪೂಜೆ ಗ್ರಹಿಸಿದ ನಾರಾಯಣ 2
ದಾನವ ಬೇಡಿ ಕ್ಷತ್ರಿಯರ ಕುಲವನೀಡಾಡಿ
ದ್ವಾಪರಯುಗದಲ್ಲಿ ಯದುಗಿರಿಯೆನಿಸಿದೆ
ರಾಮ ಕೃಷ್ಣರ ಪೂಜೆ ಗ್ರಹಿಸಿದ ನಾರಾಯಣ 3
ಜಾನಕಿಯ ತಂದು ಅತಿದುರುಳ ಕಂಸನ ಕೊಂದು
ಕಲಿಯುಗದೊಳಗೆ ಶ್ರೀ ಯತಿಶೈಲವೆನಿಸಿದೆ
ಯತಿರಾಜರಿಗೆ ಒಲಿದ ಪತಿತಪಾವನ ಸ್ವಾಮಿ 4
ಹಯವನುಹತ್ತಿ ನಾರಯಣ ದುಷ್ಟಕಲಿಯ ನೀನೊತ್ತಿ
ಸಪ್ತದ್ವೀಪವನೆಲ್ಲ ಸುತ್ತಿ ಬಂದೆಯೊ ಎನ್ನಪ್ಪ
ನಿನ್ನೆಣೆಕಾಣೆ ಕಂದರ್ಪನಪಿತ ಚೆಲ್ವಯದುಗಿರಿವಾಸ 5
****
No comments:
Post a Comment