ಇದ್ದರೇನು ಇಲ್ಲದಿದ್ದರೇನು ಬುದ್ಧಿಯಿಲ್ಲದವನು ಬಾಳಿದ್ದರೇನು ಪ
ಮಕ್ಕಳಿಲ್ಲದ ಮನೆಯು ಅರಮನೆ ಆದರೇನು
ತಕ್ಕ ದಾನವ ಕೊಡದ ಧನವಿದ್ದರೇನು
ದುಃಖ ಸುಖಗಳನು ಕೇಳದ ನೆಂಟರಿದ್ದರೇನು
ಅಕ್ಕರದಿ ತಾನೊಬ್ಬ ಉಂಡರಾಗುವುದೇನು 1
ನರಜನ್ಮ ದೊರೆತಾಗ ಹರಿಯ ನೆನೆಯದಿರೇನು
ಪರಮ ಪಾತಕಿ ಆಗಿ ಬಾಳಿದ್ದರೇನು
ದುರಿತ ಕಾರ್ಯದೊಳಿದ್ದ ಬುದ್ಧಿಹಾಕಿದರೇನು
ಕರುಣರಹಿತನು ತಾನು ಅರಸಾದರೇನು 2
ಮಾತು ಕೇಳದ ಮಗನು ಮನೆಯಲ್ಲಿ ಇದ್ದರೇನು
ಸೋತು ನಡೆಯದ ಬಂಟತನವಿದ್ದರೇನು
ನೀತಿ ತಿಳಿಯದೆ ಹರಿಯ ಕಥೆಯ ಕೇಳಿದರೇನು
ಹೋತಿನ ಕೊರಳೊಳಗೆ ಮೊಲೆ ಇದ್ದರೇನು 3
ವೇದವನೋದದಾ ವಿಪ್ರನಾದರು ತಾನು
ದ್ವಾದಶಿ ನಾಮವನು ಬಡಕೊಂಡರೇನು
ಹಾದರಕೆ ಮೆಚ್ಚಿದಾ ಚಲ್ವೆ ಆದರೇನು
ಆದಿ ತಿಳಿಯದೆ ಬೂದಿ ಬಡಕೊಂಡರೇನು 4
ಶರಣು ಬಂದವರ ಅನ್ಯರಿಗೊಪ್ಪಿಸದೇ ತಾನು
ಕೊರಳ ಕೊಯಿದವನ ಧನ ಸೆಳೆದರೇನು
ವರದ ಹನುಮೇಶ ವಿಠಲನಂಘ್ರಿಗಳ ನುತಾ
ಸ್ಮರಿಸದಲೇ ನೂರೊರುಷ ಬಾಳಿದರೇನು 5
****
No comments:
Post a Comment