Monday, 9 December 2019

ಶ್ರೀದೇವಿಯ ಶ್ರೀಮಂತ shree krishna ankita suladi ಪ್ರಾರ್ಥನಾ ಸುಳಾದಿ SRIDEVIYA SRIMANTA PRAARTHANA SULADI

Audio by Mrs. Nandini Sripad

ಶ್ರೀ ವ್ಯಾಸರಾಜ ವಿರಚಿತ   ಪ್ರಾರ್ಥನಾ ಸುಳಾದಿ 

 ರಾಗ ಕಲ್ಯಾಣಿ 

 ಧ್ರುವತಾಳ 

ಶ್ರೀದೇವಿಯ ಶ್ರೀಮಂತ ಸಿಂಧೂರಗಳಂ
ಅತಿ ಅತಿ ರಂಜಿತವಾದ
ಶ್ರೀದೇವಿಯ ಕಸ್ತೂರಿ ತಿಲಕದಿಂ
ಅತಿ ಅತಿ ವಾಸಿತವಾದ
ಶ್ರೀ ಕುಚಕುಂಭ ಕುಂಕುಮದಿಂ
ಅತಿ ಅತಿ ಶೋಭಿತವಾದ
ಶ್ರಿದೇವಿಯ ಕರಕಂಜ ಸುರೇಖೆಗಳಿಂದ
ಅತಿ ಅತಿ ಅಂಕಿತವಾದ
ಶ್ರೀ ವನಜಭವಾದಿ ಹೃತ್ಸರೋವರದಿಂ
ಸರಸಿಜದಂತೆ ನಿಲಸಿಪ್ಪ
ಸನಕಾದಿ ಹೃದಯಾಂಬುಜದಿಂ
ಹಂಸೆಯಂತೆ ನಲಿಯುತಿಪ್ಪ
ಮನುಜೋತ್ತಮರ ಹೃದಯಾಂಬರದಿಂ
ಮಿಂಚಿನಂತೆ ಹೊಳೆ ಹೊಳೆವ
 ಸಿರಿಕೃಷ್ಣನ ಚರಣಕಮಲ
ಶರಣ ಎನಗೆಂದೆಂದು ॥ 1 ॥

 ಮಟ್ಟತಾಳ 

ನಿಧಿಯ ಮೇಲೆ ಇದ್ದು ನಿಧಿಯನರಿಯದಂತೆ
ತನ್ನ ಕಂಠಮಣಿಯ ತಾ ಮರೆದಂತೆ
ಕಣ್ದೆರೆಯದ ಹಸುಳೆ ತಾಯನರಿಯದಂತೆ
ಎನ್ನಲ್ಲಿ ಹೊಂದಿಪ್ಪ ನಿನ್ನರಿಯದಂತೆ
ನಿನ್ನ ತೋರಿದರೆನಗೆ ನಿನ್ನ ದಾಸರು ಸಿರಿಕೃಷ್ಣ ॥ 2 ॥

 ರೂಪಕತಾಳ 

ಜನನ ಮರಣ ಮಾರ್ಗದಲ್ಲಿ ತೊಳಲಿ ಬಳಲಿ ಸ್ವರ್ಗ
ನರಕಕ್ಕೇರಿ ಮಮತೆಯೆಂಬ ಭಾರವ ಪೊತ್ತು
ಬಳಲಿ ತಾಪತ್ರಯದ ತಾಪದಿಂ ಬೆಂದೆನಾಗಿ
ನಖ ಚಂದ್ರಿಕೆ ಗಂಗಾ ಶೀತಕರದಿಂ ತಂಪಾದ
 ಸಿರಿಕೃಷ್ಣನ ಚರಣ ನೆಳಲು ನೆಲೆಮನೆಯಾಯಿತು ॥ 3 ॥

 ತ್ರಿಪುಟತಾಳ 

ಕಾಮಿತ ಫಲವೀವ ಬಹು ಶಾಖೆಗಳಿಂ
ಕೋಮಲಕರ ಚರಣಯುಗಳ ಪಲ್ಲವದಿಂ
ಹೊಸ ಕುಸುಮದಿಂದಾದ ಮಕರಂದದಿಂ
ಶ್ರೀಸತಿ ಕಲ್ಪಲತಾ ವಿಲಾಸಗಳಿಂ
ಶುಕಮುಖ್ಯ ದ್ವಿಜಗಣದಿಂದ ಸೊಗಸಿಪ್ಪ
 ಸಿರಿಕೃಷ್ಣ ಕಲ್ಪತರುವ ಸಾರಿದೆವಯ್ಯ ॥ 4 ॥

 ಅಟ್ಟತಾಳ 

ಕರುಣಾಜಲದಿಂ ಚರಣಾಬ್ಜಗಾಳಿಯಿಂ
ವರನಾಭ ಸುಳಿಯಿಂ ಪರಮಹಂಸಕೂಲದಿಂ
ಮೆರೆವ ಅಗಾಧ ಶ್ರೀಕೃಷ್ಣನ ಸರೋ -
ವರದಿ ಮುಳಗಿ ಕಳದೆನೊ ಭವತಾಪವ ॥ 5 ॥

 ಆದಿತಾಳ 

ಜಿಜ್ಞಾಸುವಿಗೆ ಜ್ಞಾನ ಕಾರಣಾ
ಜ್ಞಾನಿಗೆ ಅಪರೋಕ್ಷ ಜ್ಞಾನ ಸಾಧನ 
ಅಪರೋಕ್ಷಿಗೆ ಅಧಿಕಾನಂದ ಜನಕ 
ಮುಕ್ತಿಗೆ ತಾನೆ ಫಲರೂಪ
 ಸಿರಿಕೃಷ್ಣನ ಪಾದಸೇವೆ
ಇದರ ತೂಕಕ್ಕೆ ಸಾಕೆ ಕೈವಲ್ಯ ॥ 6 ॥

 ಏಕತಾಳ 

ಪಾಪಾಟವಿಗೆ ದಾವಾನಲ ಕಾಮಾನಿಲ ಕಾಲಾಂಬುದ
ಮೋಹಾಂಬುದ ಝಂಝಾನಿಲ ಕೋಪಾನಿಲ ಭುಜಂಗಮ
 ಸಿರಿಕೃಷ್ಣನ ಪದಸೇವೆ ಭವಭುಜಂಗ ಗರುಡಾ ॥ 7 ॥

 ಜತೆ 

 ಸಿರಿಕೃಷ್ಣ ನಿನ್ನ ಪಾದ ನಖ ಚಂದ್ರಿಕೆಯಲ್ಲಿ
ಸಾಕೆನ್ನ ಚಿತ್ತ ಚಕೋರವಾದ ಧರ್ಮ ॥
**********

No comments:

Post a Comment