Friday, 6 December 2019

ಧನವು ಮನವು ಎರಡುಳ್ಳ ಸತ್ಪುರುಷಗೆ purandara vittala

ರಾಗ ಮುಖಾರಿ ಝಂಪೆತಾಳ

ಧನವು ಮನವು ಎರಡುಳ್ಳ ಸತ್ಪುರುಷಗೆ
ಅನುಕೂಲವಾದಂಥ ಸತಿಯು ಇಲ್ಲವಯ್ಯ ||ಪ||

ಬಾಡಿಗೆ ಮನೆಯಂತೆ ಹೋಹ ಜೀವವ ಕಂಡು
ಮಾಡುವನು ಸತಿ ಪತಿ ಭೋಗವನು , ಈ
ಬೀಡ ಬಿಟ್ಟು ಮತ್ತಾಬೀಡ ಸೇರುವ
ನಾಡ ಜೀವವ ನೆಚ್ಚಿ ಕೆಡಬೇಡ ಮನುಜ ||೧||

ನಾಳೆ ಮಾಡುವ ಧರ್ಮ ಇಂದೆ ಗೈಯಲು ಬೇಕು
ನಾಳೆ ನೀನ್ಯಾರೋ ಪೇಳೆಲೊ ಮಾನವ
ಊಳಿಗದವರು ನೀ ಬಾರೆಂದು ಎಳೆವರು
ನಾಳೆ ಮಾಡುವೆನು ಎಂದರೆ ಬಾರದಯ್ಯ ||೨||

ನಿನ್ನ ಕಣ್ಣ ಮುಂದೆ ಹೋಹ ಜೀವವ ಕಂಡು
ಇನ್ನು ನಾಚಿಕೆ ಇಲ್ಲವೇನೊ ಮನುಜ
ಎನದು ತನದು ಎಂದು ಭೇದವ ಮಾಡುವ
ಕುನ್ನಿ ಮನವನು ನೆಚ್ಚಿ ಕೆಡಬೇಡ ಮನುಜ ||೩||

ಒಂದೊಂದು ಪರಿಯಲ್ಲಿ ಬೆಳೆದ ಜೀವವ ಕಂಡು
ಮುಂದಾಗೋ ಗತಿಗೆ ಸಾಧನವಿಲ್ಲವು
ತಂದೆ ಪುರಂದರವಿಠ್ಠಲನ ಚರಣವ
ಕುಂದದೆ ಮನದಲಿಟ್ಟು ನೆನೆ ಕಂಡ್ಯ ಮನುಜ ||೪||
******

No comments:

Post a Comment