ankita ಭೂಪತಿವಿಠಲ
ರಾಗ: ಪಹಾಡಿ ತಾಳ: ದಾದರಾ
ಎಂಥ ಶ್ರೀಮಂತನೋ ಎಂಥ ಧೀಮಂತನೋ ಪ
ಎಂಥ ಶ್ರೀಮಂತನೋ ಮಂತ್ರಾಲಯದಿನಿಂತನೋ
ಕಂತು ಪಿತನ ಒಲಿಸಿದನೋ ಸಂತತ ಭಕ್ತರ ಸಲಹುವನೋ 1
ದೈತ್ಯರ ಕುಲದಲಿ ಜನಿಸಿದನೋ ಸತ್ಯಾಗ್ರಹವನು ಮಾಡಿದನೋ
ದೈತ್ಯಗೆ ಸರ್ವತ್ರದ ಶ್ರೀಹರಿಯ ನಿತ್ಯವ್ಯಾಪ್ತಿಯ ತೋರಿದನೋ 2
ಸರಸಗ್ರಂಥಗಳ ರಚಿಸಿದನೋ ದುರ್ವಾದಿಗಳನು ಜಯಿಸಿದನೋ
ಅರಸನ ಭಯ ಪರಿಹರಿಸಿದನೋ ಪುರಂದರದಾಸರ ಗುರುವರನೋ 3
ಪರಮಹಂಸ ಪೀಠಾಧಿಪನೋ ಮಧ್ವಮತಾಬ್ಧಿಗೆ ಚಂದ್ರಮನೋ
ಭಕ್ತ ಜನರ ಇಷ್ಟಾರ್ಥ ಕೊಡುತಲಿ ಕಾಮಧೇನುವಾಗಿಹನೋ 4
ಅಪರೋಕ್ಷಿಕೃತ ಶ್ರೀಶನೋ ಶಾಪಾನುಗ್ರಹ ಶಕ್ತನೋ
ಅಪರಾಧಗಳನು ಕ್ಷಮಿಸಿ ಭಕ್ತರಿಗೆ ಭೂಪತಿವಿಠಲನ ತೋರುವನೋ 5
***
No comments:
Post a Comment