ankita ಪಾಂಡುವಿಠಲ
||ಆಶ್ವಧಾಟಿ - ಸಾಂಗತ್ಯ||
ಗುರುರಾಘವೇಂದ್ರತವ | ಚರಣಾರವಿಂದದ ಭ್ರ- |
ಮರ ನೆನಿಸುವ ಮನುಜಗೇ |
ಪರಿಮಳವು ಷಟ್ಟದಕೆ | ವರಕಮಲ ಪ್ರತತಿಯಿಂ |
ಭರದಿಂದ ದೊರೆವಂದದೀ |
ಸ್ಥಿರ ಭಕ್ತಿಜ್ಞಾನ ವಿ | ಸ್ಪುರಿಸುವುದು ನಿತ್ಯಸುಖ |
ಖರೆಯಿಂದೂ ಸಟೆಯೆಲ್ಲವೋ |
ಕರೆದು ಕಾಮಿತವೀವ | ಸುರಧೇನು ವಿರಲನ್ಯ-|
ನರರ ತುತಿಸುವದ್ಯಾತಕೆ 1
ಪ್ರಹ್ಲಾದನಾಗಿ ಶ್ರೀ | ನಲ್ಲನ್ನ ಭಕ್ತ ಜನ- |
ರೆಲ್ಲಾರಿಗಿವ ತೋರಿದಾ |
ಉಲ್ಲಾಸದಲಿ ಮುನಿಗ | ಳಲ್ಲುತ್ತಮ ಹರಿಯು |
ಎಲ್ಲರೊಳಗಧಿಕನೆಂದಾ |
ಸಲ್ಲಾದನಣ್ಣ ಯತಿ | ಮಲ್ಲನಿವನೀ ಜಗದೋ- |
ಳೆಲ್ಲಾ ದ್ವಿಜರ ಸಲುಹಿದಾ |
ಒಳ್ಳೆಮನದಿ ಭಕ್ತ | ರೆಲ್ಲಾರು ಇವರಸ್ತುತಿ |
ಉಲ್ಲಾಸದಿಂ ಕೇಳ್ವುದೂ 2
ಇಂದ್ರಾದ್ಯಮರರು ಈ | ವೃಂದಾವನದಲಿ ಗೋ- |
ವಿಂದನ ಕೂಡಿರುವರೂ |
ಪೊಂದಿರ್ಪುವಿಲ್ಲಿ ಮುನಿ | ವೃಂದಾದಿ ದಾಸಕುಲ |
ವೀಂದ್ರಧ್ವಜನ ದೂತನ |
ಸುಂದರನು ಇಲ್ಲಿರಲು | ಚಂದವಿರುವೀ ಸ್ಥಾನ |
ಕೇಂದ್ರವೆನಿಪುದು ಬುಧರಿಗೆ |
ಸಂದೇಹವಿಲ್ಲವೋ ಯ | ತೀಂದ್ರರ ರೂಪದಿಂ- |
ದಿಂದ್ರಾವರಜ ನಿಂತಿಹ 3
ಶ್ರೇಷ್ಠವಾದ ಭಕ್ತಿಲು | ಚ್ಛೇಷ್ಟದಲಿ ಬರಲು ಸಕ- |
ಲೇಷ್ಟಪ್ರದಾತನಡಿಗೆ |
ಕಾಷ್ಟಾಲಯದಲಿ ಕಡು | ಶೇಷ್ಠಾನಲಿಟ್ಟಂತೆ |
ಕುಷ್ಟಾದಿಗಳ ಸುಡುವನು |
ಎಷ್ಟೇಳಲವನು ಬಲು | ಸಾಷ್ಟಾಂಗವೆರಗೆ ಸಂ- |
ತುಷ್ಟಾಗಿ ತಾನೊಲಿವನೂ |
ಕಷ್ಟಂಗಳಂ ಬಿಡಿಸಿ | ಇಷ್ಟಾರ್ಥಕೊಟ್ಟು ಯತಿ- |
ಶ್ರೇಷ್ಠ ಪ್ರಭು ಪೊರೆವನೂ 4
ಬಿನೈಪೆನೋ ಯತಿವ | ರೇಣ್ಯ ಪ್ರಭೋ ಎನಲು |
ಚಿನ್ನಾ ನೀ ಬಾ ಎಂಬನೂ |
ಕಣ್ಣಿಗೆ ಎವೆಯಂತೆ | ಚನ್ನಾಗಿ ಪೋಷಿಸುವ- |
ನೆನ್ನಾಣೆ ಸುಳ್ಳಲ್ಲವೋ |
ಇನ್ನೇನು ಈ ಶ್ರೇಷ್ಠ | ಸನ್ಯಾಸಿ ಭಕ್ತರನು |
ಸನ್ಮಾನದಿಂದ ಪೋಷಿಪಾ |
ಪುಣ್ಯಾಸೆ ಜನಕೆ ಸ್ವ | ಪುಣ್ಯ ಪ್ರಧಾನದಿಂ |
ಚಿನ್ನಾಂಗನಿವ ತೋರುತ 5
ರೋಗಾದನೇಕ ವಿಧ | ಭೋಗೋಪ ಭೋಗದಲಿ |
ಸಾಗಿರ್ದು ಕಂಗೆಡದಲೇ |
ಯೋಗೇಶನಡಿಗಳನು | ರಾಗಾದಿ ಭಜಿಸೆ ಬಲು |
ಬೇಗಾದಿ ಬಂದು ಪೊರೆವಾ |
ಬಾಗೀದೊಡಿವಗೆ ಶಿರ | ವಾಗಾಗ್ಗೆ ಫಲ ಬಹುದು |
ಭಾಗೀರಥೀ ಸ್ನಾನದಾ |
ಯಾಗಾದಿಗಳ ಪುಣ್ಯ | ಭೋಗಂಗಳುಂಬುವರು |
ನಾಗಾರಿ ಧ್ವಜನ ಪುರದೀ 6
ಮುದ್ದಾದ ರಾಯ ಪ್ರ | ಸಿದ್ಧಾದ ವಾರಾಹಿ |
ಶುದ್ಧವಿಹ ದಂಡೆ ಮೇಲೆ |
ಸಿದ್ಧಸ್ತದಿಂದ ಪರಿ | ಶುದ್ಧಾತ್ಮ ಕುಳಿತಿಹನು |
ಸದ್ವೈಷ್ಣವಾಬ್ಧಿ ಚಂದ್ರ |
ಉದ್ಧಾರಗೈವ ಭವ | ಬದ್ಧರನು ಪೊರೆವ ಬಲು- |
ಶ್ರದ್ಧೆಯಿಂ ಭಜಿಸಿದೊಡನೆ |
ಮಧ್ವಾರ್ಯಮತ ದೀಕ್ಷೆ | ಯದೃಚ್ಛ ಲಾಭವಿ- |
ತ್ತುದ್ದೇಶ ಪೂರೈಪನೋ 7
ತುಂಗಾನಿವಾಸ ದಿ | ವ್ಯಾಂಗ ಪ್ರಭೂ ಜನರ |
ಭಂಗಕ್ಕೆ ಗುರಿ ಮಾಡನೂ |
ಶೃಂಗಾರವದನ ನರ | ಸಿಂಗಾಂಗ ಶರಧಿ ಶಶಿ |
ಯಂಗೇನು ಭಜಿಸದಿಹೂದೂ |
ಗಂಗಾದಿಗಳಲ್ಲಿ ಮಲ | ಹಿಂಗೂವುದೇ ಪಾಂಡು- |
ರಂಗನ್ನ ಪದಕಮಲಕೇ |
ಭೃಂಗಾನೆನಿಪ ಬುಧೋ | ತುಂಗನ್ನ ಭಾಗವತ |
ಜಂಗುಳಿಯಾ ನಮಿಸದೇ 8
ಉತ್ಕೃಷ್ಟ ರಥದಿ ಮುನಿ | ಯೊತ್ತಾಯದಲಿ ಕುಳಿತು |
ರತ್ನಾದಿ ಮಾಲೆ ಧರಿಸಿ |
ಕಸ್ತೂರಿ ತಿಲಕ ಮೇಣ್ | ಕೆತ್ತಿರ್ದಪದಕ ಪೊಳೆ- |
ಯುತ್ತಿರ್ಪವೋ ಕಣ್ಣಿಗೇ |
ನಿತ್ಯದಾ ಸುಖ ಬಯಿಪ | ರೊತ್ತಾಯದಲಿ ಬನ್ನಿ |
ಮತ್ತೇನು ಬೇಕೆನ್ನುತ್ತಲೀ |
ಭಕ್ತಿಗೊಲಿದತಿ ಜನರಿ | ಗತ್ಯಾದರಿಸುವದಕೆ |
ಚಿತ್ತಗುಹೆವಾಸ ಪೇಳ್ವ 9
ಸಿಕ್ಕಲ್ಲಿ ಐಹಿಕ ಸು | ಖಕ್ಕಾಗಿ ಪೋಗಿತ್ವರ |
ಪೊಕ್ಕಾಲಯದಲಿ ನರರ |
ರೊಕ್ಕಕೆ ಸೇವಿಸುತ | ದಿಕ್ಕಿಲ್ಲದವರಂತೆ |
ಧಿಕ್ಕಾರವೋ ಜನ್ಮಕೇ |
ಪಕ್ಕಂಗಳಂ ಕಳೆದ | ಪಕ್ಷಿಪ್ರತಿತಿಯಂತೆ |
ಈ ಕ್ಷೋಣಿಯಲಿ ಬಾಳದೇ |
ತಕ್ಕದ್ದಪೇಕ್ಷಿಸಿರ | ದಕ್ಕಾಗಿ ಇಲ್ಲಿಹನು |
ಆಕ್ಷೇಪಣವು ಇಲ್ಲವೋ 10
ವಾರಹಿವಾಸ ಭೂ | ಭಾರಾರಿ ದಿವ್ಯರಥ- |
ವೇರುತ್ತಲಾ ಕ್ಷಣದಲೀ |
ವಾರಾಂಗನೆಯರು ಬ್ರಹ್ಮ | ಚಾರ್ಯಾದ್ಯನೇಕ ಜನ |
ಸಾರಾದ ಸಂಗೀತದಿ |
ಬಾರೋ ನೀ ಭವರೋಗ | ದೂರಾ ಯತಿಯೆ ಎಂದು |
ಸಾರುತ್ತ ಡಂಗುರಗಳ |
ಕಾರುಣ್ಯನಿಧಿ ಯತಿಯು | ನಾರಾಯಣನ ತೋರ್ಪ- |
ನಾರಾಧಿಪರ್ಗೆ ಬಿಡದೆ 11
ನಾನಾಬಗೆಯ ಈ | ಕ್ಷೋಣಿಯ ಜೀವರಿಗೆ |
ನಾನಾ ವಿಧದಿ ಕಾಣುವಾ |
ಆನೆಗೊಲಿದನ ಪ್ರಿಯನು | ದಾನಗಳಿತ್ತು ಸುಖ |
ಜ್ಞಾನಾದಿ ಭಕ್ತಿ ಈವ |
ನಾನಾರ್ಥವೀವ ಯತಿ | ಮಾನೋತ್ತಮರಿಗೆ ಈ- |
ಕ್ಷೋಣಿಯೊಳಗಾಗಿರುವರೊ |
ನಾನಾ ವಿಮೋಹಕನು | ಮಾನಿಲ್ಲ ಪೊರೆವ ಪ್ರ- |
ಮಾಣವೇ ಭೋಗವಿರಲೂ 12
ಗುಂಪಾಗಿ ಭಾಗವತ | ರಿಂಪಾದ ಗಾಯನದಿ |
ಮಾಂಪಾಹಿ ಗುರುವೆಂಬರೂ |
ಕೆಂಪಾದ ಕಮಲಾಕ್ಷ | ಕಂಪಿಸುವೆವು ಭವದಿ |
ನೀಂಪಾಲಿಸೆಂದೆನುತಲೀ |
ನೀಂಪಾಲಿಸದಿರೆ ಈ | ಗುಂಪುಗಳ ಗತಿಯೇನು |
ನಾಂ ಪೇಳಲಾರೆನುತಲೀ |
ಚಂಪಕಾ ನಾಶಿಕನೆ | ಪೆಂಪೊಡೆದ ಪದಜ್ಯೋತಿ |
ತಂಪಾಗಿ ಪಸರಿಸಿಹುದೂ 13
ಶಾಂತತೆಯಲಿ ಚಂದ್ರ | ಸಂತೋಷದಲಿ ಕಡಲ |
ಕಾಂತಿಯೊಳಗಿವ ಭಾಸ್ಕರ |
ಅಂತೇನು ಇವನ ಕರು | ಣೆಂಥಾದು ಬಲುಜ್ಞಾನ- |
ವಂತೆನಿಪನೆ ಪೊಗಳನು |
ಚಿಂತಿಸುವದೇಕೆ ಜನ | ಭ್ರಾಂತಿಯಲಿ ಬರಿದೆ ಶ್ರೀ- |
ಮಂತಿಗೆಯಲಿ ದನುಜತನಯಾ |
ಪಂಥದಲಿ ಬಲಿತಾತ | ಸಂತೇಂದ್ರ ದಾನದಲಿ |
ಮಂತ್ರಾಲಯಾ ನಿವಸನು 14
ನೀಲಾಂಗ ಭಕ್ತ ಭವ | ಜಾಲಾವಿನಾಶ ಕುಲ- |
ಕೋಲಾಹಲ ವಿಧುರನೋ |
ಶೀಲೋತ್ತಮನು ತುಳಸೀ | ಮಾಲಾ ವಿಭೂಷಿತ ಸು- |
ಶೀಲೇಂದ್ರ ವಂದ್ಯನಿವನು |
ವ್ಯಾಲಾಲಯದಲಿಲಿಯುಂ | ಬಾಳಿರ್ಪತೆರ ಮೋಹ |
ಜಾಲಾಗಿಹಾ ಭವದಲಿ |
ಕಾಲೆಂತು ಕಳೆವುದೆನೆ | “ಬಾಲಾ ನೀ ಬಾ ಎಂಬ” |
ಪಾಲಾಬ್ಧಿಶಯನ ದಾಸ 15
ನಿಗಮದ ಧ್ವನಿಗಳೀ | ಜಗದೇವತೆಗಳೆಲ್ಲ |
ಸ್ಥಗಿತ ಭಕ್ತಿಲಿಗೈಯುತಾ |
ಮಿಗೆ ಧನ್ಯವಾದೆವೀ | ಜಗದೊಳಗೆನುತ ಗುರುಗ- |
ಳಘ ಕಳೆವ ಚರಣಕಂಡು |
ಪೊಗಳಲಳವೇ ಜಗ | ದ್ಗುರು ವಿರಲು ದೈವಕೆ |
ಮಿಗಿಲಾದ ಕನ್ನಡಿಗರಾ |
ಮಗುವೆಂದು ಪೊರೆದನುಜ | ಮಗನೆಂದು ದಾಸಕುಲ |
ಕರ ಮುಗಿದು ಕನ್ನಡಿಗಗೆ 16
ಶ್ರೀಶನಂಘ್ರಿಯ ದೂತ | ಪೋಷಿಸೆಲೊ ಭಕ್ತರನು |
ಘಾಸಿಗೊಳಿಸದಿರಲೆಂದಿಗೂ |
ನೀ ಸಲಹದಿರಲು ಈ | ಭೂಸುರರೆನಿಪರು ನರರ |
ದಾಸರಾಗುವರು ಬಿಡದೇ |
ಘಾಸಿಗೊಂಡವರು ಬಲ ದು | ರಾಶೆ ಹೆಚ್ಚಿತು ದ್ವಿಜರೂ |
ದಾಸಿಸಲ್ಪಡುವರಿಹದೀ |
ಈಸೋಕಾಯಿಯಂತೆ | ಭೂಸುರರ ಬಿಡದೆ ನೀ |
ಪೋಷಿಸೆನ್ನವರೆನುತಲೀ 17
ವ್ಯಾಕರಣ ಗಣ ಯತಿಗ | ಳಾ ಕಠಿಣ ಮಾತ್ರೆಗಳ |
ಸ್ವೀಕರಿಸಕೂಡದೆಂದೂ |
ಲೇಖಕನು ಬಿನ್ನೆಪ | ಪ್ರಾಕೃತವಿದೆಂದು ಜನ |
ಭೀಕರದ ಟೀಕೆ ಬಿಟ್ಟು |
ವ್ಯಾಕುಲದ ಭವರೋಗ | ಕೇಕ ಔಷಧ ಮಾತ್ರೆ |
ಪಾಕವಿದು ಜನರು ಬಿಡದೇ |
ಏಕ ಚಿತ್ತದಿ ಪಠಿಪು | ದೀ ಕೃತಿಯ ನಿತ್ಯದೈ- |
ಹಿಕದ ಸುಖಕೊಳಗಾಗದೇ 18
ಕಂಡಲ್ಲಿ ಬೇಡಿ ಬಲು | ಬೆಂಡಾದೆ ಗುರುವೆನಲು |
ಚಂಡಾಲನಿರೆ ಸಲಹುವಾ |
ದಂಡ ಪ್ರಣಾಮದಿಂ | ಕೊಂಡಾಡದವರ ಶಿರ |
ಚಂಡಾಗುವದು ಯಮನಿಗೆ |
ಕೊಂಡಾಡು ದುರಿತವನ | ಕೆಂಡಾದ ಯತಿಯ ಇ- |
ತ್ತಂಡವಾಗುವದು ಸಂಪದಾ |
ಕೊಂಡಾಡುವರ ಪೊರೆವ | ಖಂಡಾಗಿ ವಂದ್ಯಖಳ |
ಹಿಂಡಾರಿ ಪಾಂಡುವಿಠಲಾ 19
***
No comments:
Post a Comment