..
ಯತಿರಾಜ ಯತಿರಾಜ
ಕ್ಷಿತಿದೇವ ತತಿನುತ ರಾಘವೇಂದ್ರ
ಆದಿಯುಗದಿ ಪ್ರಹ್ಲಾದ ಸುನಾಮದಿ
ಮೋಹದಿ ಭಜಿಸುತ ಮಾಧವನೊಲಿಸಿದ 1
ಘನ ವಿರಾಗ್ರಣಿ ಜನಪತಿ ಬಾಹ್ಲೀಕ
ನೆನಿಸಿ ದ್ವಾಪರದಿ ಜನಿಸಿದ ಗುಣನಿಧಿ 2
ವಾಸವನಾಯಕ ದಾಸಾರ್ಯರಿಗುಪ
ದೇಶಗೈದ ಗುರುವ್ಯಾಸ ಪೋಷಿಸೈ 3
ಕ್ಷೋಣಿಯೊಳಗೆ ಕುಂಭಕೋಣ ಸುಕ್ಷೇತ್ರದಿ
ವೀಣೆ ವೆಂಕಟಾಭಿಧಾನದಿ ಜನಿಸಿದ 4
ದೀನ ಜನಾಮರಧೇನು ಸುಧೀಂದ್ರರ
ಪಾಣಿಪದ್ಮಭವ ಮಾಣದೆ ಕಾಯೋ 5
ತುಂಗಭದ್ರ ಸುತರಂಗಿಣಿ ತೀರದಿ
ಕಂಗೊಳಿಸುವ ಶತಪಿಂಗಳ ತೇಜ6
ಕಲುಷ ಕುಲಾದ್ರಿಗೆ ಕುಲಿಶನೆಂದೆನಿಸಿದ
ಅಲವ ಬೋಧಮತ ಜಲಧಿ ಶಶಾಂಕ 7
ಬಾಲನ ಬಿನ್ನಪ ಲಾಲಿಸಿ ಪ್ರೇಮದಿ
ಪಾಲಿಪುದೈ ಮಂತ್ರಾಲಯ ನಿಲಯ8
ಪರಿಮಳ ಗ್ರಂಥವ ವಿರಚಿಸಿ ದುರ್ಮತ
ಮುರಿದು ಸಜ್ಜನರಿಗೊರೆದ ಮಹಾತ್ಮ 9
ಪರಿಪರಿಭವದೊಳು ಪರಿತಪಿಸುವೆನೈ
ಪರಮ ಕರುಣದಲಿ ಪರಿಕಿಸಿ ಪೊರೆಯೊ 10
ಕಾಮಿತದಾಯಕ ಭೂಮಿಜೆನಾಯಕ
ಶಾಮಸುಂದರನ ಪ್ರೇಮದ ಸೇವಕ 11
***
No comments:
Post a Comment