Monday, 2 August 2021

ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ ankita gopalakrishna vittala

ನಿಂದು ದರ್ಶನ ನೀಡೊ ಅರವಿಂದ ಮಧ್ಯದಲಿ

ಕಂದರ್ಪಜನಕ ದೇವ ಪ.


ನಂದಕಂದನೆ ನಿನ್ನ ಮಂದಮತಿ ನಾನೆಂತು

ವಂದಿಸಿ ಸ್ತುತಿಪೆನಯ್ಯ | ಜೀಯ ಅ.ಪ.


ಸತ್ವಗುಣವಾರಿಧಿಯೆ ತತ್ವಗಳ ತಿಳಿಸೆನಗೆ

ಉತ್ತಮ ಪಥವ ತೋರೋ

ನಿತ್ಯ ಸಂಸಾರದಲ್ಲಿ ಸುತ್ತಿಸದೆ ನಿನ್ನಪದ

ಭೃತ್ಯಸಂಗದಲಾಡಿಸೊ | ಸತತ 1

ವಿಶ್ವತೈಜಸಪ್ರಾಜ್ಞತುರಿಯ ರೂಪಗಳಿಂದ

ವಿಶ್ವೇಶ ದೇಹದೊಳಗೆ

ವಿಶ್ವವ್ಯಾಪಕ ಹರಿಯೆ ಸ್ವಪ್ನ ಜಾಗ್ರತೆ ಸುಷುಪ್ತಿ

ವಿಶ್ವಮಯ ಜೀವಕೀವೆ | ಕಾವೆ 2

ತತ್ವಾಧಿಪತಿಗಳೊಳು ವ್ಯಾಪ್ತನಾಗಿರುತ ನೀ

ಮತ್ತೆಲ್ಲ ಕಾರ್ಯ ಮಾಳ್ಪೆ

ಚಿತ್ತಾಭಿಮಾನಿ ಶ್ರೀ ಮಾರುತಾಂತರ್ಯಾಮಿ

ವ್ಯಾಪ್ತನಾಗಿರುವೆ ಜಗದಿ | ಮುದದಿ 3

ಮಧ್ಯನಾಡೀ ಹೃದಯ ಮಧ್ಯಪದ್ಮದ ಮಧ್ಯೆ

ಇದ್ದೆನೆಗೆ ರೂಪ ತೋರೋ

ಒದ್ದಾಡುವೆನೊ ಭವದಿ ಉದ್ಧರಿಸಬೇಕಿನ್ನು

ಒದ್ದು ತಾಪತ್ರಯವನು | ನೀನು 4

ಶ್ರೀನಿವಾಸನೆ ನಿನ್ನ ಧ್ಯಾನ ಅನವರತದಲಿ

ಮಾನಸದಲೆನಗೆ ನೀಡೋ

ಶ್ರೀನಿಧೇ ಗೋಪಾಲಕೃಷ್ಣವಿಠ್ಠಲ ಎನ್ನ

ಸಾನುರಾಗದಲಿ ಸಲಹೋ ಎಲವೋ 5

****


No comments:

Post a Comment