Saturday, 6 February 2021

ಜಯ ಜಯ ಸಿರಿ ಪಾಂಡುರಂಗ ಭಕುತರ ankita raghupati vittala suladi JAYA JAYA SIRI PANDURANGA BHAKUTARA SULADI

 Audio by Smt.Sindhu S Kulkarni


ಶ್ರೀ ಪಾಂಡುರಂಗ ವಿಠಲನ ಸುಳಾದಿ

ರಚನೆ: ಶ್ರೀ ರಘುಪತಿ ವಿಠಲರು


ರಾಗ: ಭೈರವಿ ತಾಳ: ಧ್ರುವ ತಾಳ


॥ ಧ್ರುವ ತಾಳ ॥

ಜಯ ಜಯ ಸಿರಿ ಪಾಂಡುರಂಗ ಭಕುತರ ಭಯಗಜಕೆ ಸಿಂಗ ।

ಜಯ ಜಯ ಸಿರಿ ಪಾಂಡುರಂಗ ಭಕುತರ ಮನದೊಳಗೆ ಸಿಂಗ ।

ಜಯ ಜಯ ಸಿರಿ ಪಾಂಡುರಂಗ ನಮಿಪರಿಗೆ ನೀನತಿ ಕೃಪಾಂಗ ।

ಜಯ ಜಯ ಸಿರಿ ಪಾಂಡುರಂಗ ಮೋಹನ ಲೀಲಾವತಾರ ।

ಜಯ ಜಯ ಸಿರಿ ಪಾಂಡುರಂಗ ರಘುಪತಿ ವಿಠಲ ಉದಾರಾ ॥ ೧ ॥


॥ ಮಟ್ಟ ತಾಳ ॥

ನಿನ್ನ ಕರುಣದಳತೆ ಬಲ್ಲವರಾರಯ್ಯಾ ।

ನಿನ್ನ ನಂಬಿದವರು ದೋಷಿಗಳಾರಯ್ಯಾ ।

ನಿನ್ನ ಮಹಾಮಹಿಮೆ ಬೊಮ್ಮಾದಿಗಳೆಲ್ಲ ।

ನಿನ್ನರಿತು ಅರಿಯದಂತೆ ಕೊಂಡಾಡುತಲಿಹರು ।

ನಿನ್ನ ಪಾಡಲು ಎನ್ನಿಂದಲಿ ವಶವೆ ।

ಘನ್ನ ಕರುಣಿ ರಘುಪತಿ ವಿಠಲ ಕರುಣಿ ॥ ೨ ॥


॥ ರೂಪಕ ತಾಳ ॥

ಸಕಲ ಜನರೆಲ್ಲಾ ಬಡುವರು ನಾವೆನುತ ।

ಉಕುತಿಯಿಂದಲಿ ಪೇಳಿ ಮರುಗುವರೋ ।

ಲಕುಮಿ ವಲ್ಲಭ ಕೇಳೋ ನಾನೆ ಸಿರವಂತನೆಂದು ।

ಕಕುಲಾತಿಯನು ಬಿಟ್ಟು ಪೇಳಿಕೊಂಬೆ ।

ಸಕಲಾದಲ್ಲಿ ಔದಾರ್ಯಗಳಾಗಿಹ ಸುಮುಖಂ ತರೋಬ್ಬರ ಕಾಣೆನಯ್ಯಾ ।

ಭಕುತರಿಚ್ಛೆಗಾರ ಭಕುತರಿಗೆ ಸುಖವಿವ ಸುಖಪೂರ್ಣ ನೀನೆಂಬೊ ಸ್ವತಂತ್ರನೋ ।

ಸಕಲ ಮಾತೇನೊ ಅನುಭವ ಬಂದದಕೆ ಮತ್ತೆ ।

ಯುಕುತಿ ಪೇಳುವದೇನೊ ಪಂಢರಿರಾಯಾ ।

ಆಕಳಂಕ ಗುಣ ಪೂರ್ಣ ರಘುಪತಿ ವಿಠಲ ನಿನ್ನ ।

ಕಿಂಕರರ ಕಿಂಕರ ನಾನು ದಯಾದೃಷ್ಟಿಯಲಿ ನೋಡೋ ॥ ೩ ॥


॥ ಝಂಪೆ ತಾಳ ॥

ನೀ ನೊಲಿದದ್ದಕ್ಕೆ ಇಹ ಸಂಪತ್ತು ಕೊಟ್ಟದ್ದು ।

ಜ್ಞಾನವೇನೊ ಭಕುತಿ ವೈರಾಗ್ಯವೋ ।

ನಾನೊಲ್ಲೆ ನಾನೊಲ್ಲೆ ಪುಂಡರೀಕವರದ ।

ನೀನೊಲಿದು ನಿನ್ನಲ್ಲಿ ಭಕುತಿ ನೀಯೋ ।

ಏನು ಇಹ ಸಂಪತ್ತು ಕೊಡಲು ಪೂರ್ವದ ಪುಣ್ಯ ।

ಹಾನಿಸರಿ ಪರಲೋಕ ಮಾನವೇನೋ ।

ಕ್ಷೋಣೀಧರ ರಘುಪತಿ ವಿಠಲ ಪಾವನಮೂರ್ತಿ ।

ಏನು ಮೊರೆ ಇಟ್ಟರು ನೀನು ಕೇಳೋ ॥ ೪ ॥


॥ ತ್ರಿವಿಡಿ ತಾಳ ॥

ಎಲ್ಲ ಜೀವರೊಳಗೆ ಬಲ್ಲಿದಂತರ್ಯಾಮಿ ।

ಎಲ್ಲಿ ನಿನಗೆ ಸರಿಯಿಲ್ಲವೆಂದು ।

ಎಲ್ಲಿ ಹೋಗಲು ಹಣೆಯಲ್ಲಿದ್ದ ಭೋಗವು ।

ಪೊಳ್ಳೆಂದರು ಬಿಡದೊಲ್ಲದೆ ಉಣಿಸುವೆ ।

ಸಲ್ಲದೆಂದು ಬಲು ಹೊಲ್ಲತನವು ಮಾಡಿ ।

ಒಳ್ಳೆ ಜನರಿಂದೆನ್ನ ಸೊಲ್ಲು ಗುಕ್ಕಿಸುವೆಲ್ಲಾ ।

ಫುಲ್ಲನೇತ್ರ ರಘುಪತಿ ವಿಠಲ ನೀನೇ ।

ನಲ್ಲದೆನಗಾರು ಇಲ್ಲ ದಾತರೆ ಇಲ್ಲ ॥ ೫ ॥


॥ ಅಟ್ಟ ತಾಳ ॥

ನೀ ಕೊಟ್ಟ ಸಂಪತ್ತು ಉಂಡು ಬೇಕಿಲ್ಲವೆಂದು ।

ಅನೇಕ ಯುಕುತಿಯಿಂದ ವ್ಯಾಕುಲನಾದರು ಬಿಡದು ಬಿಡದು ಬಿಡದು ।

ಏಕವೃತಿಯಲ್ಲಿ ನರಹರಿ ತೀರ್ಥರು ನೀ ।

ರಾಕರಿಸಲು ಭೋಗಾ ಎಂತು ಬಿಟ್ಟಿತೋ ಸ್ವಾಮಿ ।

ಸಾಕಾರ ಗುಣ ಪೂರ್ಣ ರಘುಪತಿ ವಿಠಲ ನೀ ।

ರಾಕರಿಸದೆ ಎನ್ನ ಮನಸೋ ಜೋಕೆ ಮಾಡೋ ॥ ೬ ॥


॥ ಆದಿ ತಾಳ ॥

ನೀ ಕೊಟ್ಟ ಪದವಿಯಿಂದ ಉದ್ಧರಿಸೊ ನರಕ ಸೇರಿಸೊ ।

ಲೋಕಮೋಹಕನಾದ ರಘುಪತಿ ವಿಠಲ ಎನ್ನ ಪರಾಕು ನಿನಗೆ ಮುಟ್ಟದಂತಾಯಿತೆ ಸ್ವಾಮಿ ॥ ೭ ॥


॥ ಜತೆ ॥

ಮನಸಿಗೆ ಮೈಲಿಗೆ ಹತ್ತದಂತೆ ಮಾಡೋ ।

ಮನಸಿಜ ಪಿತ ರಘುಪತಿ ವಿಠಲ ಪಾಂಡುರಂಗಾ ॥ ೮ ॥

***

No comments:

Post a Comment