ಕಂಡು ಹಿಗ್ಗಿದಳೆ ಕಮಲಾಕ್ಷನ್ನ ಯಶೋದ ಎತ್ತಿ
ಕೊಂಡು ಮುದ್ದಿಸಿದಳೆ ಯದುನಾಥನ್ನ ಪ
ಪಾಲವಾರಿಧಿ ಮಧ್ಯದಲ್ಲಿ ಶ್ರೀದೇವಿ ಸಹಿತ್ವೊಂ
ದಾಲದೆಲೆಯ ಮ್ಯಾಲಾಡುತಲಿ
ಕಾಲಬೆರಳು ಕಟಬಾಯಲಿ ಚೀಪುವ
ನೀಲವರ್ಣದಲಿ ತನ್ನ ಬಾಲನೆಂದೆನುತ 1
ಕೋಟಿ ಸೂರ್ಯದ ಕಾಂತಿ ಹರಣಮಾಡುವ ಮುಖ ಕಿ-
ರೀಟ ಕೌಂಸ್ತುಭ ಮಣಿಯಾಭರಣ
ಹಾಟಕಾಂಬರನುಟ್ಟ ನಾಟಕಧಾರಿ ಕಿ
ರೀಟಿ ಸಾರಥಿ ಪಕ್ಷಿರಾಟವಾಹನನ 2
ಚೆನ್ನವಾಗೀರೇಳು ಲೋಕವನು ತನ್ನುದರದೊಳಡಗಿಸಿ
ಪನ್ನಂಗಶಾಯಿ ಪರಮಾತ್ಮನ್ನ
ಚಿನ್ನ ಮಾಣಿಕ್ಯದ ತೊಟ್ಟಿಲೊಳಿಟ್ಟು ತೂಗುತ
ಎನ್ನ ಕಂದ ನೀ ತೋಳನ್ನಾಡೆಂದೆನುತ 3
ಕಡಗ ಕಿರುಗೆಜ್ಜೆ ಚರಣದಿಂದಲಿ ನಡೆಯುತಲಿ ಬಂದು ದಧಿ-
ಗಡಿಗೆ ತಾ ಒಡೆದನೆ
ಕಡಗೋಲಿಂದ ಹಿಡಿದು ಕಟ್ಟಲು ಒರಳೆಳೆದ್ವಿಮಳಾರ್ಜುನ
ಗಿಡವ ಕೆÀಡಹಿ ಮುಕ್ತಿಕೊಡುವ ಶ್ರೀ ಕೃಷ್ಣನ 4
ದಾಸಜನ ಪೋಷ ಭವ ಭಯ ನಾಶ ಮಾಡುವಾತ ಭುವ-
ನೇಶ ಹದಿನಾಲ್ಕು ಲೋಕದ ವಾಸ
ರಾಸಕ್ರೀಡೆಲಿ ವ್ರಜದ್ವನಿತೆಯರ ಸಂತೋಷಬಡಿಸಿದ ಭೀ-
ಮೇಶ ಕೃಷ್ಣನ ಮುಖ5
****
No comments:
Post a Comment