Wednesday, 27 January 2021

ಹರಿಕಥಾಮೃತಸಾರ ಸಂಧಿ 33 ankita shrida vittala ಫಲಶ್ರುತಿ ಸಂಧಿ HARIKATHAMRUTASARA SANDHI 33 PHALASHRUTI SANDHI

    


raga madhyamavati

Above Audio by Mrs. Nandini Sripad



RESTART MOBILE IF AUDIO IS NOT PLAYING  CLICK-> HOME

or just scroll down for other devaranama 


ಫಲಶ್ರುತಿ ಸಂಧಿ 33  phalashruti sandhi 

ಶ್ರೀದವಿಠ್ಠಲ ವಿರಚಿತ ಹರಿಕಥಾಮೃತಸಾರ ಸಂಧಿ 33

ರಚನೆ : ಶ್ರೀ ಕರ್ಜಗಿ ಶ್ರೀದವಿಠ್ಠಲದಾಸರು (ಕರ್ಜಿಗಿ ದಾಸರಾಯರು)


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು||


ಹರಿಕಥಾಮೃತಸಾರ ಶ್ರೀಮದ್ಗುರುವರ

ಜಗನ್ನಾಥ ದಾಸರ ಕರತಲಾಮಲಕವನೆ

ಪೇಳಿದ ಸಕಲ ಸಂಧಿಗಳ

ಪರಮ ಪಂಡಿತ ಮಾನಿಗಳು

ಮತ್ಸರಿಸಲೆದೆಗಿಚ್ಚಾಗಿ ತೋರುವುದರಿಸಕರಿಗಿದು

ತೋರಿ ಪೇಳುವದಲ್ಲ ಧರೆಯೊಳಗೆ||1||


ಭಾಮಿನೀ ಷಟ್ಪದಿಯ ರೂಪದಲೀ

ಮಹಾದ್ಭುತ ಕಾವ್ಯದಾದಿಯೊಳಾ

ಮನೋಹರ ತರತರಾತ್ಮಕ ನಾಂದಿ ಪದ್ಯಗಳ

ಯಾಮಯಾಮಕೆ ಪಠಿಸುವವರ

ಸುಧಾಮಸ ಕೈಪಿಡಿಯಲೋಸುಗ

ಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯಕೇನೆಂಬೆ||2||


ಸಾರವೆಂದರೆ ಹರಿಕಥಾಮೃತ

ಸಾರವೆಂಬುದೆಮ್ಮ ಗುರುವರ

ಸಾರಿದಲ್ಲದೆ ತಿಳಿಯದೆನುತ ಮಹೇಂದ್ರ ನಂದನನ

ಸಾರಥಿಯ ಬಲಗೊಂಡು ಸಾರಾ

ಸಾರಗಳ ನಿರ್ಣೈಸಿ ಪೇಳ್ದನು

ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೋ||3||


ದಾಸವರ್ಯರ ಮುಖದಿ ನಿಂದು

ರಮೇಶನನು ಕೀರ್ತಿಸುವ ಮನದಭಿಲಾಷೆಯಲಿ

ವರ್ಣಾಭಿಮಾನಿಗಳೊಲಿದು ಪೇಳಿಸಿದ

ಈ ಸುಲಕ್ಷಣ ಕಾವ್ಯದೊಳಗ್ಯತಿ

ಪ್ರಾಸಗಳಿಗೆ ಪ್ರಯತ್ನವಿಲ್ಲದೆ

ಲೇಸುಲೇಸನೆ ಶ್ರಾವ್ಯ ಮಾಡುದೆ ಕುರುಹು ಕವಿಗಳಿಗೆ||4||


ಪ್ರಾಕೃತೋಕ್ತಿಗಳೆಂದು ಬರಿದೆ

ಮಹಾಕೃತಘ್ನರು ಜರಿವರಲ್ಲದೆ

ಸ್ವೀಕೃತವ ಮಾಡದಲೆ ಬಿಡುವರೇ ಸುಜನರಾದವರು

ಶ್ರೀಕೃತೀಪತಿ ಅಮಲ ಗುಣಗಳು

ಈ ಕೃತಿಯೊಳುoಟಾದ ಬಳಿಕ

ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಜನರಿಗೆ||5||


ಶ್ರುತಿಗೆ ಶೋಭನಮಾಗದಡೆ

ಜಡಮತಿಗೆ ಮಂಗಳವೀಯದಡೆ

ಶ್ರುತಿಸ್ಮ್ರುತಿಗೆ ಸಮ್ಮತವಾಗದಿದ್ದಡೆ ನಮ್ಮ ಗುರುರಾಯ

ಮಥಿಸಿ ಮಧ್ವಾಗಮ ಪಯೋಬ್ಧಿಯ

ಕ್ಷಿತಿಗೆ ತೋರಿದ ಬ್ರಹ್ಮ ವಿದ್ಯಾ

ರತರಿಗೀಪ್ಸಿತ ಹರಿಕಥಾಮೃತಸಾರವೆನಿಸುವುದು||6||


ಭಕ್ತಿವಾದದಿ ಪೇಳ್ದನೆಂಬ

ಪ್ರಸಕ್ತಿ ಸಲ್ಲದು ಕಾವ್ಯದೊಳು ಪುನರುಕ್ತಿ

ಶುಷ್ಕ ಸಮಾನ ಪದ ವ್ಯತ್ಯಾಸ ಮೊದಲಾದ

ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ

ವಿಭಕ್ತಿ ವಿಷಮಗಳಿರಲು

ಜೀವನ್ಮುಕ್ತ ಭೋಗ್ಯವಿದೆಂದು ಸಿರಿಮದನಂದ ಮೆಚ್ಚುವನೆ?||7||


ಆಶುಕವಿಕುಲ ಕಲ್ಪತರು

ದಿಗ್ದೇಶವರಿಯಲು ರಂಗನೊಲುಮೆಯ

ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬೆನು

ಈ ಸುಲಕ್ಷಣ ಹರಿಕಥಾಮೃತ

ಮೀಸಲರಿಯದೆ ಸಾರದೀರ್ಘ

ದ್ವೇಷಿಗಳಿಗೆರೆಯದಲೆ ಸಲಿಸುವದೆನ್ನ ಬಿನ್ನಪವ||8||


ಪ್ರಾಸಗಳ ಪೊಂದಿಸದೆ ಶಬ್ದ

ಶ್ಲೇಷಗಳ ಶೋಧಿಸದೆ ದೀರ್ಘ

ಹ್ರಾಸಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ

ದೂಷಕರು ದಿನದಿನದಿ ಮಾಡುವ

ದೂಷಣೆಯೆ ಭೂಷಣಗಳೆಂದುಪ

ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ||9||


ಅಶ್ರುತಾಗಮ ಇದರ ಭಾವ

ಪರಿಶ್ರಮವು ಬಲ್ಲವರಿಗಾನಂದಾಶ್ರುಗಳ

ಮಳೆಗರೆಸಿ ಮರೆಸುವ ಚಮತ್ಕ್ರುತಿಯ

ಮಿಶ್ರರಿಗೆ ಮರೆ ಮಾಡಿ ದಿವಿಜರ

ಜಸ್ರದಲಿ ಕಾಯ್ದಿಪ್ಪರಿದರೊಳು

ಪಃಶ್ರುತಿಗಳೈತಪ್ಪವೇ ನಿಜ ಭಕ್ತಿ ಉಳ್ಳವರಿಗೆ||10||


ನಿಚ್ಚ ನಿಜಜನ ನೆಚ್ಚ ನೆಲೆಗೊಂಡಚ್ಚ

ಭಾಗ್ಯವು ಪೆಚ್ಚ ಪೇರ್ಮೆಯು

ಕೆಚ್ಚ ಕೇಳ್ವನು ಮೆಚ್ಚ ಮಲಮರ ಮುಚ್ಚಲೆಂದೆನುತ

ಉಚ್ಚವಿಗಳಿಗೆ ಪೊಚ್ಚ ಪೊಸೆದನ

ಲುಚ್ಚರಿಸದೀ ಸಚ್ಚರಿತ್ರೆಯನುಚ್ಚರಿಸೆ

ಸಿರಿವತ್ಸ ಲಾಂಛನ ಮೆಚ್ಚಲೇನರಿದು||11||


ಸಾಧು ಸಭೆಯೊಳು ಮೆರೆಯೆ ತತ್ವ

ಸುಬೋಧ ವೃಷ್ಟಿಯಗರೆಯೆ ಕಾಮಕ್ರೋಧ

ಬೀಜವು ಹುರಿಯೆ ಖಳರದೆ ಬಿರಿಯೆ ಕರಕರಿಯ

ವಾದಿಗಳ ಪಲ್ಮುರಿಯೆ ಪರಮ

ವಿನೋದಿಗಳ ಮೈಮರೆಯಲೋಸುಗ

ಹಾದಿತೋರಿದ ಹಿರಿಯ ಬಹುಚಾತುರ್ಯ ಹೊಸಪರಿಯ||12||


ವ್ಯಾಸತೀರ್ಥರೊಲವೆಯೊ ವಿಠಲೋಪಾಸಕ

ಪ್ರಭುವರ್ಯ ಪುರಂದರದಾಸರಾಯರ

ದಯವೋ ತಿಳಿಯದು ಓದಿ ಕೇಳದಲೆ

ಕೇಶವನ ಗುಣಮಣಿಗಳನು

ಪ್ರಾಣೇಶಗರ್ಪಿಸಿ ವಾದಿರಾಜರ

ಕೋಶಕೊಪ್ಪುವ ಹರಿಕಥಾಮೃತಸಾರ ಪೇಳಿದರು||13||


ಹರಿಕಥಾಮೃತಸಾರ ನವರಸಭರಿತ

ಬಹು ಗಂಭೀರ ರತ್ನಾಕರ

ರುಚಿರ ಶೃಂಗಾರ ಸಾಲಂಕಾರ ವಿಸ್ತಾರ

ಸರಸ ನರ ಕಂಠೀರವಾಖ್ಯಾರ್ಯರ

ಜನಿತ ಸುಕುಮಾರ ಸಾತ್ವೀಕರಿಗೆ

ಪರಮೋದಾರ ಮಾಡಿದ ಮರೆಯದುಪಕಾರ||14||


ಅವನಿಯೊಳು ಜ್ಯೋತಿಷ್ಮತೀ ತೈಲವನು

ಪಾಮರನುಂಡು ಜೀರ್ಣಿಸಲವನೆ

ಪಂಡಿತನೋಕರಿಪವಿವೇಕಿಯಪ್ಪಂತೆ

ಶ್ರವಣ ಮಂಗಳ ಹರಿಕಥಾಮೃತ

ಸವಿದು ನಿರ್ಗುಣಸಾರ ಮಕ್ಕಿಸಲವ

ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು||15||


ಅಕ್ಕರದೊಳೀ ಕಾವ್ಯದೊಳೊಂದಕ್ಕರವ

ಬರೆದೋದಿದವ ದೇವರ್ಕಳಿಂ

ದುಸ್ತಜ್ಯನೆನಿಸಿ ಧರ್ಮಾರ್ಥಕಾಮಗಳ

ಲೆಕ್ಕಿಸದೆ ಲೋಕೈಕನಾಥನ

ಭಕ್ತಿ ಭಾಗ್ಯವ ಪಡೆವ ಜೀವನ್ಮುಕ್ತಗಲ್ಲದೆ

ಹರಿಕಥಾಮೃತಸಾರ ಸೊಗಸುವದೆ||16||


ವತ್ತಿಬಹ ವಿಘ್ನಗಳ ತಡೆದಪ

ಮೃತ್ಯುವಿಗೆ ಮರೆಮಾಡಿ ಕಾಲನ

ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲ ಸಿದ್ಧಿಗಳ

ಎತ್ತಿಗೊಳ್ಳಿಸಿ ವನರುಹೇಕ್ಷಣ

ನ್ರುತ್ಯಮಾಡುವವನ ಮನೆಯೊಳು

ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ||17||


ಆಯುರಾರೋಗ್ಯೈಶ್ವರ್ಯ ಮಾಹಾಯಶೋ

ಧೈರ್ಯ ಬಲ ಸಮ ಸಹಾಯ

ಶೌರ್ಯೋದಾರ್ಯ ಗುಣಗಾಂಭೀರ್ಯ ಮೊದಲಾದ

ಆಯುತಗಳುಂಟಾಗಲೊಂದಧ್ಯಾಯ

ಪಠಿಸಿದ ಮಾತ್ರದಿಂ ಶ್ರವಣೀಯವಲ್ಲದೆ

ಹರಿಕಥಾಮೃತಸಾರ ಸುಜನರಿಗೆ||18||


ಕುರುಡ ಕಂಗಳ ಪಡೆವ ಬಧಿರನಿಗೆರೆಡು

ಕಿವಿ ಕೇಳ್ಬಹವು ಬೆಳೆಯದ

ಮುರುಡ ಮದನಾಕೃತಿಯ ತಾಳ್ವನು ಕೇಳ್ದ ಮಾತ್ರದಲಿ

ಬರಡು ಹೈನಾಗುವದು ಪೇಳ್ದರೆ

ಕೊರಡು ಪಲ್ಲೈಸುವದು ಪ್ರತಿದಿನ

ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ||19||


ನಿರ್ಜರ ತರಂಗಿಣಿಯೊಳನುದಿನ

ಮಜ್ಜನಾದಿ ಸಮಸ್ತ ಕರ್ಮ

ವಿವರ್ಜಿತಾಶಾಪಾಶದಿಂದಲಿ ಮಾಡಿದಧಿಕ ಫಲ

ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ

ಸಜ್ಜನರು ಶಿರತೂಗುವಂದದಿ


ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ||20||


ಸತಿಯರಿಗೆ ಪತಿಭಕುತಿ ಪತ್ನೀವ್ರತ

ಪುರುಷರಿಗೆ ಹರುಷ ನೆಲೆಗೊಂಡತಿ

ಮನೋಹರರಾಗಿ ಗುರು ಹಿರಿಯರಿಗೆ ಜಗದೊಳಗೆ

ಸತತ ಮಂಗಳವೀವ ಬಹು

ಸುಕೃತಿಗಳೆನಿಸುತ ಸುಲಭದಿಂ ಸದ್ಗತಿಯ

ಪಡೆವರು ಹರಿಕಥಾಮೃತಸಾರವನು ಪಠಿಸೆ||21||


ಎಂತು ಬಣ್ಣಿಸಲೆನ್ನಳವೆ

ಭಗವಂತನಮಲ ಗುಣಾನುವಾದಗಳೆಂತು

ಪರಿಯಲಿ ಪೂರ್ಣಬೋಧರ ಮತವ ಪೊಂದಿದರ

ಚಿಂತನಗೆ ಬಪ್ಪಂತೆ ಬಹು ದೃಷ್ಟಾಂತ

ಪೂರ್ವಕವಾಗಿ ಪೇಳ್ದ ಮಹಂತರಿಗೆ

ನರರೆಂದು ಬಗೆವರೆ ನಿರಯ ಭಾಗಿಗಳು||22||


ಮಣಿಖಚಿತ ಹರಿವಾಣದೊಳು ವಾರಣ

ಸುಭೋಜ್ಯ ಪದಾರ್ಥ ಕೃಷ್ಣಾರ್ಪಣವೆನುತ

ಪಸಿದವರಿಗೋಸುಗ ನೀಡುವಂದದಲಿ

ಪ್ರಣತರಿಗೆ ಪೊಂಗನಡ ವರ

ವಾನ್ಗ್ಮಣಿಗಳಿಂ ವಿರಚಿಸಿದ ಕೃತಿಯೊಳುಣಿಸಿ

ನೋಡುವ ಹರಿಕಥಾಮೃತಸಾರ ವನುದಾರ||23||


ದುಷ್ಟರೆನ್ನದೆ ದುರ್ವಿಷಯದಿಂ

ಪುಷ್ಟರೆನ್ನದೆ ಪೂತಕರ್ಮ

ಭ್ರಷ್ಟರೆನ್ನದೆ ಶ್ರೀದವಿಠಲ ವೇಣುಗೋಪಾಲ

ಕೃಷ್ಣ ಕೈಪಿಡಿವನು ಸುಸತ್ಯ

ವಿಶಿಷ್ಟ ದಾಸತ್ವವನು ಪಾಲಿಸಿ

ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ||24||

***

Phalashruti Sandhi - Transliteration

Pīṭhike Nudi

Harikathāmr̥tasāra gurugaḷa karuṇadiṃdāpanitu kēḷuve |

Parama bhagavadbhaktaru idanādaradi kēḷuvudu ||


1. Dhruva Pada

Harikathāmr̥tasāra śrīmadguruvara

Jagannātha dāsara karatālāmalakavane

Pēḷida sakala saṃdhigaḷa

Parama paṇḍita mānigaḷu

Matsarisaledegiccāgi tōruvudarisakari gidu

Tōri pēḷuvadalla dhareyoḷage || 1 ||


2. Bhāminī Ṣaṭpadi Gati

Bhāminī ṣaṭpadiya rūpadalī

Mahādbhuta kāvyadādiyoḷā

Manōhara taratarātmaka nāṃdi padyagaḷa

Yāmayāmake paṭhisuvavara

Sudhāmasa kaipiḍiyolōsuga

Prēmaadiṃdali pēḷda guru kāruṇyakēneṃbe || 2 ||


3. Sāravēṃdare Harikathāmr̥ta

Sāravēṃdare harikathāmr̥ta

Sāravēṃbuademma guruvara

Sāridallade tiḷiyadenuta mahēndra nandanana

Sārathiya balagoṃdu sārā

Sāragaḷa nirṇaisi pēḷdanu

Sāra naḍeva mahātmarige saṃsāravellihudō || 3 ||


4. Dāsavaryara Mukhadi

Dāsavaryara mukhadi niṃdu

Ramēśananu kīrtisuva manadabhilāṣeyali

Varṇābhimānigaḷolidu pēḷisida

Ī sulakṣaṇa kāvyadoḷagyati

Prāsagaḷige prayatnavillade

Lēsulēsane śrāvya māḍude kuruhu kavigaḷige || 4 ||


5. Prākr̥tōktigaḷeṃdu

Prākr̥tōktigaḷeṃdu baride

Mahākrtaghṇaru jarivarallade

Svīkr̥tava māḍadale biḍuvarē sujanarādavuaru

Śrīkr̥tīpati amala guṇagaḷu

Ī kr̥tiyoḷuṃṭāda baḷika

Prākr̥tave saṃskr̥tada saḍagaravēnu sujanarige || 5 ||


6. Śrutige Śōbhanamāgadaḍe

Śrutige śōbhanamāgadaḍe

Jaḍamatige maṃgaḷavīyadaḍe

Śrutismr̥tige sammatavāgaddiddaḍe namma gururāya

Mathisi madhvāgama payōbdhiya

Kṣitige tōrida brahma vidyā

Ratarigīpsita harikathāmr̥tasāravenisuvudu || 6 ||


7. Bhaktivādadi Pēḷdaneṃba

Bhaktivādadi pēḷdaneṃba

Prasakti salladu kāvyadoḷu punarukti

Śuṣka samāna pada vyatyāsa modalāda

Yukti śāstra viruddha śabda

Vibhakti viṣamagaḷiralu

Jīvanmukta bhōgyavideṃdu sirimadananda meccuvane? || 7 ||


8. Āśukavikula Kalpataru

Āśukavikula kalpataru

Digdēśavariayalu raṃganolumeya

Dāsakūṭastharaigeragi nā bēḍikoṃbe nu

Ī sulakṣaṇa harikathāmr̥ta

Mīsalarayade sāradīrgha

Dvēṣigaḷigereyadale salisuvadena binnapava || 8 ||


9. Prāsagaḷa Poṃdisade

Prāsagaḷa poṃdisade śabda

Ślēṣagaḷa śōdhisade dīrgha

Hrāsagaḷa sallisade ṣaṭpadigatige nillisade

Dūṣakaru dinadinadi māḍuva

Dūṣaṇeye bhūṣaṇagaḷeṃdupa

Dēśagamyavu harikathāmr̥tasāra sādhyarige || 9 ||


10. Aśrutāgama Idara

Aśrutāgama idara bhāva

Pariśramavu ballavarigānaṃdāśrugaḷa

Maḷegaresi maresuva camatkr̥tiya

Miśrarige mare māḍi divijara

Jasradali kāydipparidaroḷu

Paḥśrutigaḷaitappavē nija bhakti uḷḷavarige || 10 ||


11. Nicca Nijajana

Niccha nijajan neccha nelegoṃdacca

Bhāgyavu pecca pērmeyu

Kecca kēḷvanu mecca malamara muccaleṃdenuta

Uccavigaḷige pocca posedana

Luccarisadī saccaritrayanuccarise

Sirivatsa lāṃchana meccalēnaridu || 11 ||


12. Sādhu Sabheyoḷu

Sādhu sabheyoḷu mereye tatva

Subōdha vr̥ṣṭiyagareye kāmakrōdha

Bījavu huriye khaḷarade biriye karakariya

Vādigaḷa palmuriye parama

Vinōdigaḷa maimareyalōsuga

Hāditōrida hiriyar bahucāturya hosapariya || 12 ||


13. Vyāsatīrtharolaveyō

Vyāsatīrtharolaveyō viṭhalōpāsaka

Prabhuvarya purandaradāsarāyara

Dayavō tiḷiyadu ōdi kēḷadale

Kēśavana guṇamaṇigaḷanu

Prāṇēśagar pisi vādirājara

Kōśakoppuva harikathāmr̥tasāra pēḷidaru || 13 ||


14. Harikathāmr̥tasāra Navarasa

Harikathāmr̥tasāra navarasabharita

Bahu gaṃbhīra ratnākara

Rucira śr̥ṃgāra sālaṃkāra vistarā

Sarasa nara kaṃṭhīravākhyāryara

Janita sukumāra sātvīkarige

Paramōdāra māḍida mareyadupakāra || 14 ||


15. Avaniyoḷu Jyōtiṣmatī

Avaniyoḷu jyōtiṣmatī tailavanu

Pāmaranuṃḍu jīrṇisalavane

Paṇḍitanōkaripavivēkiyappaṃte

Śravaṇa maṃgaḷa harikathāmr̥ta

Savidu nirguṇasāra makkisalava

Nipuṇanai yōgyagallade dakkalariyadidu || 15 ||


16. Akkaradoḷī Kāvyadoḷoṃdakkara

Akkaradoḷī kāvyadoḷoṃdakka rava

Baredōdidava dēvarkaḷiṃ

Dustajyanenisi dharmārthakāmagaḷa

Lekkisade lōkaikanāthana

Bhakti bhāgyava paḍeva jīvanmuktagallade

Harikathāmr̥tasāra sogasuvade || 16 ||


17. Vattibaha Vighnagaḷa

Vattibaha vighnagaḷa taḍedapa

Mr̥tyuvige maremāḍi kālana

Bhr̥tyarige bhīkarava puṭṭisi sakala siddhigaḷa

Ettigoḷḷisi vanaruhēkṣaṇa

Nruatyamāḍuvavana maneyoḷu

Nityamaṃgaḷa harikathāmr̥tasāra paṭhisuvara || 17 ||


18. Āyurārōgyaiśvarya

Āyurārōgyaiśvarya māhāyāśō

Dhairya bala sama sahāya

Śauryōdārya guṇagāṃbhīrya modalāda

Āyutagaḷuṃṭāgaloṃdadhyāya

Paṭhisida mātradiṃ śravaṇīyavallade

Harikathāmr̥tasāra sujanarige || 18 ||


19. Kuruḍa Kaṃgaḷa

Kuruḍa kaṃgaḷa paḍeva badhiranigēreḍu

Kivi kēḷbahavu beḷeyada

Muruḍa madanākr̥tiya tāḷvanu kēḷda mātradali

Baraḍu haināguvadu pēḷdare

Koraḍu pallaisuvadu pratidina

Huruḍilādaru harikathāmr̥tasāravanu paṭhise || 19 ||


20. Nirjara Taraṃgiṇiyoḷa

Nirjara taraṃgiṇiyoḷanudina

Majjanādi samasta karma

Vivarjitāśāpāśadiṃdali māḍidadhika phala

Hejjēhejjēge doreyadippave

Sajjanaru śiratūguvaṃdadi

Gharjisutalī harikathāmr̥tasāra paṭhisuvara || 20 ||


21. Satiyarige Patibhakuti

Satiyarige patibhakuti patnīvrata

Puruṣarige haruṣa nelegoṃdati

Manōhararāgi guru hiriyarige jagadoḷge

Satata maṃgaḷavīva bahu

Sukr̥tigaḷenisuta sulabhadiṃ sadgatiya

Paḍevaru harikathāmr̥tasāravanu paṭhise || 21 ||


22. Eṃtu Baṇṇisalennaḷave

Eṃtu baṇṇisalennaḷave

Bhagavaṃtanamala guṇānuvādagaḷeṃtu

Pariyali pūrṇabōdhara matava poṃdidara

Ciṃtanēge bappaṃte bahu dr̥ṣṭāṃta

Pūrvakavāgi pēḷda mahantarige

Narareṃdu bagevare niraya bhāgigaḷu || 22 ||


23. Maṇikhacita Harivāṇadoḷu

Maṇikhacita harivāṇadoḷu vāraṇa

Subhōjya padārtha kr̥ṣṇārpaṇavēnutu

Pasidavarigōsuga nīḍuvaṃdadali

Praṇatarige poṃganaḍa vara

Vān gmaṇigaḷiṃ virachisida kr̥tiyoḷuṇisi

Nōḍuva harikathāmr̥tasāra vanudāra || 23 ||


24. Duṣṭarennade Durviṣayadiṃ

Duṣṭarennade durviṣayadiṃ

Puṣṭarennade pūtakarma

Bhraṣṭarennade śrīdavithala vēṇugōpāla

Kr̥ṣṇa kaipiḍivanu susatya

Viśiṣṭa dāsatvavanu pālisi

Niṣṭheyiṃdali harikathāmr̥tasāra paṭhisuvara || 24 ||

***

Key Pronounciation Guide

Use clear, standard English phonetic stress: pronounce words smoothly as written, pronouncing 'a' as 'ah' (as in car), 'i' as 'ee' (as in meet), and 'u' as 'oo' (as in boot).


Pronounce letters with a dot underneath ('ṭ', 'ḍ', 'ṇ') by curling your tongue back slightly toward the roof of your mouth to create a heavy, hard sound (e.g., Shatpadi sounds like Shaht-pah-dee).


Keep the vowel sound short whenever you see letters with a regular lowercase profile, but hold or elongate the sound whenever a macron accent accentuates a vowel ('ā', 'ī', 'ū', 'ē', 'ō').


Treat combined consonants like 'jn' as a blended gny sound (e.g., Jagannatha as Juh-guhn-nah-thah), and pronounce the vocalic 'r̥' as a brief ru syllable (e.g., Amr̥ta as Uhm-ru-thah).


Maintain a steady, rhythmic cadence throughout the Bhamini Shatpadi structure by avoiding sharp stops or jerky pauses, blending the end of each word smoothly into the next.

***


ಶ್ರೀ ಜಗನ್ನಾಥದಾಸರ ಪರಮಶಿಷ್ಯರಾದ ಶ್ರೀ ಕರ್ಜಗಿ ಶ್ರೀದವಿಠ್ಠಲದಾಸರು ವಿರಚಿತ, ಶ್ರೀ ಹರಿಕಥಾಮೃತಸಾರ ಗ್ರಂಥದ ಮಹತ್ವ ಹಾಗೂ ಫಲವನ್ನು ಕೊಂಡಾಡುವ 'ಫಲಶ್ರುತಿ ಸಂಧಿ'ಯ ಸುಂದರ ವಿವರಣೆ ಇಲ್ಲಿದೆ. ಶ್ರೀ ಜಗನ್ನಾಥದಾಸರು ರಚಿಸಿದ ಮೂಲ ಹರಿಕಥಾಮೃತಸಾರದ ಕೊನೆಯಲ್ಲಿ ಈ ಸಂಧಿಯನ್ನು ಭಕ್ತಿಯಿಂದ ಪಠಿಸಲಾಗುತ್ತದೆ.

ಸಾರಾಂಶ (Summary)

ಈ ಸಂಧಿಯಲ್ಲಿ ಶ್ರೀದವಿಠ್ಠಲದಾಸರು ಶ್ರೀ ಜಗನ್ನಾಥದಾಸರ ದಿವ್ಯ ಕೃತಿಯಾದ 'ಹರಿಕಥಾಮೃತಸಾರ'ದ ಮಹತ್ವ, ಅದರ ತತ್ವ ಮತ್ತು ಅದನ್ನು ಪಠಿಸುವುದರಿಂದ ಸಿಗುವ ಲೌಕಿಕ ಹಾಗೂ ಪಾರಮಾರ್ಥಿಕ ಫಲಗಳನ್ನು (ಫಲಶ್ರುತಿ) ವಿವರವಾಗಿ ವರ್ಣಿಸಿದ್ದಾರೆ.


ದಾಸರು ಹೇಳುವಂತೆ, ಹರಿಕಥಾಮೃತಸಾರವು ಕೇವಲ ಒಂದು ಕಾವ್ಯವಲ್ಲ; ಇದು ಆಚಾರ್ಯ ಮಧ್ವರ ದ್ವೈತ ಸಿದ್ಧಾಂತದ (ಮಧ್ವಾಗಮ ಪಯೋಬ್ಧಿ) ಸಾರವಾಗಿದೆ. ಶ್ರೀಹರಿಯ ಅಮಲ ಗುಣಗಳನ್ನು ಒಳಗೊಂಡಿರುವ ಈ ಕೃತಿಯನ್ನು ಪ್ರಾಕೃತ (ಕನ್ನಡ) ಭಾಷೆಯಲ್ಲಿದೆ ಎಂದು ನಿಂದಿಸುವವರು ಕೃತಘ್ನರು. ಸಜ್ಜನರು ಇದರ ತತ್ವವನ್ನು ಸ್ವೀಕರಿಸುತ್ತಾರೆ. ಈ ಗ್ರಂಥದ ನಾಂದಿ ಪದ್ಯಗಳನ್ನು, ಸಂಧಿಗಳನ್ನು ಪ್ರತಿದಿನ ಪಠಿಸುವ ಭಕ್ತರಿಗೆ ಅಪಮೃತ್ಯು ಭಯವಿರುವುದಿಲ್ಲ, ಸಕಲ ವಿಘ್ನಗಳು ದೂರವಾಗುತ್ತವೆ. ಕುರುಡನಿಗೆ ಕಣ್ಣು ಬರುತ್ತದೆ, ಮೂಗನಿಗೆ ಮಾತು ಬರುತ್ತದೆ, ಬರಡು ಹಸು ಹೈನು ನೀಡುತ್ತದೆ ಮತ್ತು ಒಣ ಕೊರಡು ಕೂಡ ಚಿಗುರುತ್ತದೆ ಎಂದು ದಾಸರು ಇದರ ಲೌಕಿಕ ಮಹಿಮೆಯನ್ನು ಕೊಂಡಾಡಿದ್ದಾರೆ. ಕೊನೆಯಲ್ಲಿ, ಎಷ್ಟೇ ದೋಷಗಳಿದ್ದರೂ ನಿಷ್ಠೆಯಿಂದ ಈ ಗ್ರಂಥವನ್ನು ಪಠಿಸುವವರನ್ನು ಸಾಕ್ಷಾತ್ ಶ್ರೀದವಿಠ್ಠಲ ವೇಣುಗೋಪಾಲ ಕೃಷ್ಣನು ಕೈಹಿಡಿದು ರಕ್ಷಿಸುತ್ತಾನೆ ಮತ್ತು ಸದ್ಗತಿಯನ್ನು ಕರುಣಿಸುತ್ತಾನೆ ಎಂದು ದಾಸರು ಭರವಸೆ ನೀಡಿದ್ದಾರೆ.


ಅರ್ಥ (Paragraph-wise Meaning)

ಪೀಠಿಕೆ ನುಡಿ


ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ |

ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು ||


ಅರ್ಥ: ನನ್ನ ಗುರುಗಳಾದ ಶ್ರೀ ಜಗನ್ನಾಥದಾಸರ ಕರುಣೆಯಿಂದ ನನಗೆ ತಿಳಿದ ಮಟ್ಟಿಗೆ ಈ ಹರಿಕಥಾಮೃತಸಾರದ ಫಲಶ್ರುತಿಯನ್ನು ಹೇಳುತ್ತೇನೆ. ಪರಮ ಭಗವದ್ಭಕ್ತರು ಇದನ್ನು ಅತ್ಯಂತ ಆದರದಿಂದ ಆಲಿಸಬೇಕು.


೧ನೇ ಪದ್ಯ (ಗುರುಗಳ ಕೃತಿಯ ಮಹತ್ವ)

ಹರಿಕಥಾಮೃತಸಾರ ಶ್ರೀಮದ್ಗುರುವರ... ತೋರಿ ಪೇಳುವದಲ್ಲ ಧರೆಯೊಳಗೆ || 1 ||


ಅರ್ಥ: ನಮ್ಮ ಶ್ರೇಷ್ಠ ಗುರುಗಳಾದ ಶ್ರೀ ಜಗನ್ನಾಥದಾಸರು ತಮ್ಮ ಜ್ಞಾನದ ಅಂಗೈ ನೆಲ್ಲಿಕನಿಯಂತೆ (ಕರತಲಾಮಲಕ) ಅತ್ಯಂತ ಸರಳವಾಗಿ ಈ ಹರಿಕಥಾಮೃತಸಾರದ ಸಕಲ ಸಂಧಿಗಳನ್ನು ಉಣಿಸಿದ್ದಾರೆ. ಪರಮ ಪಂಡಿತರೆನಿಸಿಕೊಂಡು ಅಹಂಕಾರ ಪಡುವವರಿಗೆ ಇದರ ಮೌಲ್ಯ ತಿಳಿಯದೆ ಹೊಟ್ಟೆಯುರಿ (ಎದೆಗಿಚ್ಚು) ಉಂಟಾಗಬಹುದು. ಆದರೆ ಭಗವದ್ಭಕ್ತರಾದ ರಸಿಕರಿಗೆ ಮಾತ್ರ ಇದರ ನಿಜವಾದ ಆನಂದ ತಿಳಿಯುತ್ತದೆ. ಇದನ್ನು ಅರ್ಹರಲ್ಲದವರಿಗೆ ಜಗತ್ತಿನಲ್ಲಿ ಹಂಚಬಾರದು.


೨ನೇ ಪದ್ಯ (ನಾಂದಿ ಪದ್ಯಗಳ ಪ್ರಭಾವ)

ಭಾಮಿನೀ ಷಟ್ಪದಿಯ ರೂಪದಲೀ... ಪ್ರೇಮದಿಂದಲಿ ಪೇಳ್ದ ಗುರು ಕಾರುಣ್ಯಕೇನೆಂಬೆ || 2 ||


ಅರ್ಥ: ಭಾಮಿನೀ ಷಟ್ಪದಿಯ ಛಂದಸ್ಸಿನಲ್ಲಿ ರಚಿತವಾಗಿರುವ ಈ ಮಹಾದ್ಭುತ ಕಾವ್ಯದ ಆರಂಭದಲ್ಲಿರುವ ತಾರತಮ್ಯ ಮತ್ತು ಮಂಗಲ ಸ್ವರೂಪದ ನಾಂದಿ ಪದ್ಯಗಳನ್ನು ಯಾರು ಪ್ರತಿ ಯೂಹದಲ್ಲೂ (ಯಾಮಯಾಮಕೆ - ನಿರಂತರವಾಗಿ) ಪಠಿಸುತ್ತಾರೋ, ಅವರನ್ನು ಭವಬಂಧನದಿಂದ ಮುಕ್ತಗೊಳಿಸಲು ನಮ್ಮ ಗುರುಗಳು ಅತ್ಯಂತ ಪ್ರೇಮದಿಂದ ಈ ಕೃತಿಯನ್ನು ರಚಿಸಿದ್ದಾರೆ. ಅಂತಹ ಗುರುಗಳ ಕಾರುಣ್ಯವನ್ನು ಎಷ್ಟು ಕೊಂಡಾಡಿದರೂ ಸಾಲದು.


೩ನೇ ಪದ್ಯ (ಸಂಸಾರ ನಾಶಕ ಶ್ರೀಹರಿ ಕಥೆ)

ಸಾರವೆಂದರೆ ಹರಿಕಥಾಮೃತ... ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೋ || 3 ||


ಅರ್ಥ: ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಾರವೆಂದರೆ ಅದು ಶ್ರೀಹರಿಯ ಕಥಾಮೃತವೇ ಆಗಿದೆ ಎಂದು ನಮ್ಮ ಗುರುವರರು ಸಾರಿದ್ದಾರೆ. ಮಹೇಂದ್ರನ ಮಗನಾದ ಅರ್ಜುನನಿಗೆ ಸಾರಥಿಯಾಗಿದ್ದ ಆ ಶ್ರೀಕೃಷ್ಣನ ಬಲವನ್ನು ನಂಬಿ, ದಾಸರು ಜಗತ್ತಿನ ಸಾರ ಮತ್ತು ಅಸಾರಗಳನ್ನು ನಿರ್ಣಯಿಸಿ ಈ ಕೃತಿಯಲ್ಲಿ ಹೇಳಿದ್ದಾರೆ. ಇಂತಹ ಸನ್ಮಾರ್ಗದಲ್ಲಿ ನಡೆಯುವ ಮಹಾತ್ಮರಿಗೆ ಸಂಸಾರದ ಬಂಧನ ಎಲ್ಲಿದೆ? ಅವರಿಗೆ ಮುಕ್ತಿ ಸಿದ್ಧ.


೪ನೇ ಪದ್ಯ (ಸಹಜ ಕಾವ್ಯದ ಲಕ್ಷಣ)

ದಾಸವರ್ಯರ ಮುಖದಿ ನಿಂದು... ಲೇಸುಲೇಸನೆ ಶ್ರಾವ್ಯ ಮಾಡುದೆ ಕುರುಹು ಕವಿಗಳಿಗೆ || 4 ||


ಅರ್ಥ: ಶ್ರೀ ಜಗನ್ನಾಥದಾಸರ ಮುಖದಲ್ಲಿ ಸಾಕ್ಷಾತ್ ರಮೇಶನಾದ ಶ್ರೀಹರಿಯು ನೆಲೆ ನಿಂತು, ತನ್ನನ್ನು ಕೀರ್ತಿಸುವ ದಿವ್ಯ ಅಭಿಲಾಷೆಯಿಂದ, ವರ್ಣಾಭಿಮಾನಿ ದೇವತೆಗಳನ್ನು ಪ್ರೇರೇಪಿಸಿ ಈ ಸುಲಕ್ಷಣ ಕಾವ್ಯವನ್ನು ಹೇಳಿಸಿದ್ದಾನೆ. ಈ ಕೃತಿಯಲ್ಲಿ ಯತಿ ಮತ್ತು ಪ್ರಾಸಗಳಿಗಾಗಿ ಯಾವುದೇ ಕೃತಕ ಪ್ರಯತ್ನ ಮಾಡಲಾಗಿಲ್ಲ; ಸಹಜವಾಗಿ ಮೂಡಿಬಂದಿದೆ. ಕೇಳಲು ಅತ್ಯಂತ ಮಧುರವಾದ (ಶ್ರಾವ್ಯ) ಈ ಕೃತಿಯೇ ಶ್ರೇಷ್ಠ ಕವಿಗಳ ಲಕ್ಷಣಕ್ಕೆ ದೊಡ್ಡ ಗುರುತಾಗಿದೆ.


೫ನೇ ಪದ್ಯ (ಕನ್ನಡ ಭಾಷೆಯ ನಿಂದನೆಗೆ ಉತ್ತರ)

ಪ್ರಾಕೃತೋಕ್ತಿಗಳೆಂದು ಬರಿದೆ... ಪ್ರಾಕೃತವೆ ಸಂಸ್ಕೃತದ ಸಡಗರವೇನು ಸುಜನರಿಗೆ || 5 ||


ಅರ್ಥ: ಇದು ಕೇವಲ ಕನ್ನಡ (ಪ್ರಾಕೃತ) ಭಾಷೆಯಲ್ಲಿದೆ ಎಂದು ಕೆಲವು ಮಹಾ ಕೃತಘ್ನರು ಇದನ್ನು ಜರಿಯಬಹುದು. ಆದರೆ ಸಜ್ಜನರಾದವರು ಭಾಷೆಯನ್ನು ನೋಡದೆ ಇದರೊಳಗಿನ ಜ್ಞಾನವನ್ನು ಸ್ವೀಕರಿಸದೇ ಇರುವರೇ? ಸಾಕ್ಷಾತ್ ಲಕ್ಷ್ಮೀಪತಿಯಾದ ಶ್ರೀಹರಿಯ ನಿರ್ಮಲವಾದ ಕಲ್ಯಾಣ ಗುಣಗಳು ಈ ಕೃತಿಯಲ್ಲಿ ತುಂಬಿರುವಾಗ, ಸಜ್ಜನರಿಗೆ ಸಂಸ್ಕೃತದ ಸಡಗರವೇಕೆ? ಹರಿಯ ಗುಣಗಳಿರುವ ಈ ಪ್ರಾಕೃತವೇ ಸಂಸ್ಕೃತಕ್ಕೆ ಸಮಾನ.


೬ನೇ ಪದ್ಯ (ಬ್ರಹ್ಮವಿದ್ಯೆಯ ಸಾರ)

ಶ್ರುತಿಗೆ ಶೋಭನಮಾಗದಡೆ... ರತರಿಗೀಪ್ಸಿತ ಹರಿಕಥಾಮೃತಸಾರವೆನಿಸುವುದು || 6 ||


ಅರ್ಥ: ಈ ಕೃತಿಯು ವೇದಗಳಿಗೆ (ಶ್ರುತಿಗೆ) ಶೋಭೆ ತರದೇ ಇದ್ದರೆ, ಮಂದಬುದ್ಧಿಯವರಿಗೆ ಮಂಗಳವನ್ನು ನೀಡದೇ ಇದ್ದರೆ, ವೇದ-ಸ್ಮೃತಿಗಳಿಗೆ ಸಮ್ಮತವಾಗದೇ ಇದ್ದರೆ ನಮ್ಮ ಗುರುರಾಯರು ಇದನ್ನು ರಚಿಸುತ್ತಿರಲಿಲ್ಲ. ಅವರು ಶ್ರೀ ಮಧ್ವಾಚಾರ್ಯರ ಸಿದ್ಧಾಂತವೆಂಬ ಕ್ಷೀರಸಮುದ್ರವನ್ನು ಮಥಿಸಿ, ಈ ಭೂಮಿಗೆ ಬ್ರಹ್ಮವಿದ್ಯೆಯನ್ನು ತಂದುಕೊಟ್ಟಿದ್ದಾರೆ. ಬ್ರಹ್ಮಜ್ಞಾನದಲ್ಲಿ ಆಸಕ್ತರಾದವರಿಗೆ ಇದು ಇಷ್ಟಾರ್ಥಗಳನ್ನು ನೀಡುವ 'ಹರಿಕಥಾಮೃತಸಾರ'ವಾಗಿದೆ.


೭ನೇ ಪದ್ಯ (ಪರಿಶುದ್ಧ ಕಾವ್ಯ ವೈಭವ)

ಭಕ್ತಿವಾದದಿ ಪೇಳ್ದನೆಂಬ... ಜೀವನ್ಮುಕ್ತ ಭೋಗ್ಯವಿದೆಂದು ಸಿರಿಮದನಂದ ಮೆಚ್ಚುವನೆ? || 7 ||


ಅರ್ಥ: ಕೇವಲ ಭಕ್ತಿಯ ಆವೇಶದಲ್ಲಿ ಈ ಕಾವ್ಯವನ್ನು ಬರೆಯಲಾಗಿದೆ ಎನ್ನಲಾಗದು. ಇದರಲ್ಲಿ ಅನಗತ್ಯ ಪುನರುಕ್ತಿಗಳಾಗಲಿ, ಒಣ ಶಬ್ದಗಳಾಗಲಿ, ಶಾಸ್ತ್ರ ವಿರುದ್ಧವಾದ ಪದಗಳಾಗಲಿ ಅಥವಾ ವ್ಯಾಕರಣ ದೋಷಗಳಾಗಲಿ (ವಿಭಕ್ತಿ ವಿಷಮ) ಇಲ್ಲ. ದೋಷಗಳಿದ್ದರೆ ಜ್ಞಾನಿಗಳು ಮತ್ತು ಸಾಕ್ಷಾತ್ ಲಕ್ಷ್ಮೀರಮಣನಾದ ಶ್ರೀಹರಿ ಇದನ್ನು ಮೆಚ್ಚುತ್ತಿದ್ದನೇ? ಇದು ಪರಿಶುದ್ಧವಾಗಿದ್ದರಿಂದಲೇ ಜೀವನ್ಮುಕ್ತರಿಗೆ ಯೋಗ್ಯವಾಗಿದೆ.


೮ನೇ ಪದ್ಯ (ಅರ್ಹರಿಗೆ ಮಾತ್ರ ಅರ್ಪಣೆ)

ಆಶುಕವಿಕುಲ ಕಲ್ಪತರು... ದ್ವೇಷಿಗಳಿಗೆರೆಯದಲೆ ಸಲಿಸುವದೆನ್ನ ಬಿನ್ನಪವ || 8 ||


ಅರ್ಥ: ಶೀಘ್ರವಾಗಿ ಕವಿತೆ ರಚಿಸುವ ಕಲ್ಪತರುವಿನಂತಿರುವ, ಸಕಲ ದಿಕ್ಕುಗಳಲ್ಲೂ ಪ್ರಸಿದ್ಧರಾದ ಶ್ರೀರಂಗನಾಥನ ಪ್ರೀತಿಯ ದಾಸಶ್ರೇಷ್ಠರಿಗೆ ನಾನು ತಲೆಬಾಗಿ ಬೇಡಿಕೊಳ್ಳುತ್ತೇನೆ. ಇಂತಹ ಸುಲಕ್ಷಣವಾದ ಹರಿಕಥಾಮೃತಸಾರವನ್ನು ಇದರ ಯೋಗ್ಯತೆ ಅರಿಯದ, ದೇವರನ್ನು ಸದಾ ದ್ವೇಷಿಸುವ ದ್ವೇಷಿಗಳಿಗೆ ಉಣಿಸಬೇಡಿ; ಯೋಗ್ಯರಾದ ಸಜ್ಜನರಿಗೆ ಮಾತ್ರ ಇದನ್ನು ತಲುಪಿಸಿ ಎನ್ನುವುದೇ ನನ್ನ ವಿಜ್ಞಾಪನೆ.


೯ನೇ ಪದ್ಯ (ದೂಷಕರಿಗೆ ಉತ್ತರ)

ಪ್ರಾಸಗಳ ಪೊಂದಿಸದೆ ಶಬ್ದ... ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ || 9 ||


ಅರ್ಥ: ಕಾವ್ಯದ ಪ್ರಾಸಗಳಾಗಲಿ, ಶಬ್ದ ಶ್ಲೇಷೆಗಳಾಗಲಿ, ದೀರ್ಘ-ಹ್ರಸ್ವಗಳ ನಿಯಮಗಳಾಗಲಿ ಅಥವಾ ಷಟ್ಪದಿಯ ಗತಿಯಾಗಲಿ ಇಲ್ಲಿ ಸರಿಯಾಗಿಲ್ಲ ಎಂದು ಮೂರ್ಖರು ದಿನದಿನವೂ ಮಾಡುವ ದೂಷಣೆಯೇ ಈ ಕೃತಿಯನ್ನು ಸಾಧಿಸಿದ ಸಜ್ಜನರಿಗೆ ಭೂಷಣವಾಗಿ ಕಾಣುತ್ತದೆ. ಏಕೆಂದರೆ ಇದು ಕೇವಲ ಲಕ್ಷಣಗಳ ಕಾವ್ಯವಲ್ಲ, ಭಗವಂತನ ಸಾಕ್ಷಾತ್ಕಾರದ ಸಾಧನವಾಗಿದೆ.


೧೦ನೇ ಪದ್ಯ (ಭಕ್ತಿ ಮತ್ತು ಆನಂದಾಶ್ರು)

ಅಶ್ರುತಾಗಮ ಇದರ ಭಾವ... ಪಃಶ್ರುತಿಗಳೈತಪ್ಪವೇ ನಿಜ ಭಕ್ತಿ ಉಳ್ಳವರಿಗೆ || 10 ||


ಅರ್ಥ: ಕೇಳರಿಯದ ಅಪೂರ್ವ ವೇದಾರ್ಥಗಳು ಇದರೊಳಗಿವೆ. ಇದರ ಭಾವವನ್ನು ಆಳವಾಗಿ ಬಲ್ಲವರಿಗೆ ಆನಂದದ ಕಣ್ಣೀರು (ಆನಂದಾಶ್ರು) ಮಳೆಯಂತೆ ಸುರಿಯುತ್ತದೆ. ಭಗವಂತನು ದುಷ್ಟರಿಗೆ (ಮಿಶ್ರರಿಗೆ) ಈ ತತ್ವವನ್ನು ಮರೆಮಾಡಿ, ದೇವತೆಗಳನ್ನು (ದಿವಿಜರ) ಸದಾ ಕಾಯುತ್ತಾನೆ. ನಿಜವಾದ ಭಕ್ತಿ ಉಳ್ಳವರಿಗೆ ಇದರ ಪಠಣದಿಂದ ಸಕಲ ಸಿದ್ಧಿಗಳು ತಾನಾಗಿಯೇ ಒಲಿಯುತ್ತವೆ.


೧೧ನೇ ಪದ್ಯ (ಶ್ರೀಹರಿಯ ಮೆಚ್ಚುಗೆ)

ನಿಚ್ಚ ನಿಜಜನ ನೆಚ್ಚ ನೆಲೆಗೊಂಡಚ್ಚ... ಉಚ್ಚರಿಸೆ ಸಿರಿವತ್ಸ ಲಾಂಛನ ಮೆಚ್ಚಲೇನರಿದು || 11 ||


ಅರ್ಥ: ಭಗವಂತನನ್ನು ನಿರಂತರವಾಗಿ ನಂಬಿದ ಸಜ್ಜನರಿಗೆ ಈ ಕೃತಿಯು ಅಚ್ಚ ಅಳಿಸಲಾಗದ ಭಾಗ್ಯವನ್ನು ಮತ್ತು ಕೀರ್ತಿಯನ್ನು ಹೆಚ್ಚಿಸುತ್ತದೆ. ನಮ್ಮ ಮನಸ್ಸಿನ ಮಲಗಳನ್ನು (ಪಾಪಗಳನ್ನು) ಮುಚ್ಚಿ ಪರಿಶುದ್ಧಗೊಳಿಸುತ್ತದೆ. ಇಂತಹ ಪವಿತ್ರವಾದ ಸಚ್ಚರಿತ್ರೆಯನ್ನು ಯಾರು ತಮ್ಮ ನಾಲಿಗೆಯಿಂದ ಉಚ್ಚರಿಸುತ್ತಾರೋ, ಅವರನ್ನು ಶ್ರೀವತ್ಸ ಲಾಂಛನನಾದ ಆ ಶ್ರೀಹರಿಯು ಮೆಚ್ಚಿ ಅನುಗ್ರಹಿಸುವುದು ದೊಡ್ಡ ಹಣೆಬರಹವೇನಲ್ಲ (ಅತ್ಯಂತ ಸುಲಭವಾಗಿ ಮೆಚ್ಚುತ್ತಾನೆ).


೧೨ನೇ ಪದ್ಯ (ಸಜ್ಜನರ ವಿಲಾಸ - ದುಷ್ಟರ ನಾಶ)

ಸಾಧು ಸಭೆಯೊಳು ಮೆರೆಯೆ ತತ್ವ... ಹಾದಿತೋರಿದ ಹಿರಿಯ ಬಹುಚಾತುರ್ಯ ಹೊಸಪರಿಯ || 12 ||


ಅರ್ಥ: ಈ ಕೃತಿಯು ಸಾಧುಗಳ ಸಭೆಯಲ್ಲಿ ತತ್ವಜ್ಞಾನದ ಮಳೆಯನ್ನು ಸುರಿಸುತ್ತದೆ. ಇದನ್ನು ಕೇಳಿದಾಗ ಮನುಷ್ಯನೊಳಗಿನ ಕಾಮ-ಕ್ರೋಧಗಳೆಂಬ ದುಷ್ಟ ಬೀಜಗಳು ಹುರಿದು ಹೋಗುತ್ತವೆ (ನಾಶವಾಗುತ್ತವೆ). ಖಳರ (ದುಷ್ಟರ) ಗರ್ವ ಅಡಗುತ್ತದೆ. ವಾದಿಗಳ ಗರ್ವ ಭಂಗವಾಗುತ್ತದೆ. ಪರಮ ಭಗವದ್ಭಕ್ತರು ಆನಂದದಿಂದ ಮೈಮರೆಯುವಂತೆ ಮಾಡಲು ನಮ್ಮ ಹಿರಿಯರು ಅತ್ಯಂತ ಚಾತುರ್ಯದಿಂದ ಈ ಹೊಸ ಮಾರ್ಗವನ್ನು ತೋರಿಸಿದ್ದಾರೆ.


೧೩ನೇ ಪದ್ಯ (ಪುರಂದರ-ವಾದಿರಾಜರ ಅನುಗ್ರಹ)

ವ್ಯಾಸತೀರ್ಥರೊಲವೆಯೊ ವಿಠಲೋಪಾಸಕ... ಕೋಶಕೊಪ್ಪುವ ಹರಿಕಥಾಮೃತಸಾರ ಪೇಳಿದರು || 13 ||


ಅರ್ಥ: ಶ್ರೀ ವ್ಯಾಸತೀರ್ಥರ ಒಲವೋ, ವಿಠಲನ ಪರಮ ಉಪಾಸಕರಾದ ಶ್ರೀ ಪುರಂದರದಾಸರ ದಯೆಯೋ ತಿಳಿಯದು; ವಿಶೇಷವಾಗಿ ಓದಿ ಕೇಳದಿದ್ದರೂ ಶ್ರೀ ಜಗನ್ನಾಥದಾಸರು ಶ್ರೀಕೇಶವನ ಗುಣಗಳೆಂಬ ರತ್ನಗಳನ್ನು ಪ್ರಾಣೇಶನಿಗೆ ಅರ್ಪಿಸಿ, ಸಾಕ್ಷಾತ್ ಶ್ರೀ ವಾದಿರಾಜ ತೀರ್ಥರ ಜ್ಞಾನಭಂಡಾರಕ್ಕೆ (ಕೋಶಕ್ಕೆ) ಒಪ್ಪುವಂತೆ ಈ ಹರಿಕಥಾಮೃತಸಾರವನ್ನು ರಚಿಸಿದ್ದಾರೆ.


೧೪ನೇ ಪದ್ಯ (ನವರಸಭರಿತ ರತ್ನಾಕರ)

ಹರಿಕಥಾಮೃತಸಾರ ನವರಸಭರಿತ... ಪರಮೋದಾರ ಮಾಡಿದ ಮರೆಯದುಪಕಾರ || 14 ||


ಅರ್ಥ: ಹರಿಕಥಾಮೃತಸಾರವು ನವರಸಗಳಿಂದ ತುಂಬಿದ, ಅತ್ಯಂತ ಗಂಭೀರವಾದ ರತ್ನಗಳ ಸಮುದ್ರದಂತಿದೆ (ರತ್ನಾಕರ). ಇದು ಸುಂದರವಾದ ಶೃಂಗಾರ ಹಾಗೂ ಆಲಂಕಾರಗಳಿಂದ ವಿಸ್ತಾರವಾಗಿದೆ. ಸರಸನಾದ ನರಹರಿಯ (ನರ ಕಂಠೀರವ) ದಿವ್ಯ ನಾಮವನ್ನು ಹೊಂದಿರುವ ಈ ಕೃತಿಯು ಸಾತ್ವಿಕ ಭಕ್ತರಿಗೆ ಪರಮ ಉದಾರವಾಗಿ ಒಲಿದು ಬಂದಿದೆ. ನಮ್ಮ ಗುರುಗಳು ಜಗತ್ತಿಗೆ ಮಾಡಿದ ಈ ಉಪಕಾರವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.


೧೫ನೇ ಪದ್ಯ (ಅರ್ಹರಿಗೆ ಮಾತ್ರ ಜೀರ್ಣ)

ಅವನಿಯೊಳು ಜ್ಯೋತಿಷ್ಮತೀ ತೈಲವನು... ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು || 15 ||


ಅರ್ಥ: ಈ ಭೂಮಿಯಲ್ಲಿ ಜ್ಯೋತಿಷ್ಮತೀ ಎಂಬ ದಿವ್ಯ ತೈಲವನ್ನು ಕುಡಿದು ಅದನ್ನು ಜೀರ್ಣಿಸಿಕೊಳ್ಳುವವನೇ ನಿಜವಾದ ಪಂಡಿತನು; ಅವಿವೇಕಿಯಾದವನು ಕುಡಿದರೆ ವಾಂತಿ ಮಾಡಿಕೊಳ್ಳುತ್ತಾನೆ. ಹಾಗೆಯೇ, ಕಿವಿಗೆ ಮಂಗಳವನ್ನು ನೀಡುವ ಈ ಹರಿಕಥಾಮೃತಸಾರವನ್ನು ಸವಿದು, ಅದರ ನಿರ್ಗುಣ ತತ್ವದ ಸಾರವನ್ನು ಅರಗಿಸಿಕೊಳ್ಳುವವನೇ ಆಧ್ಯಾತ್ಮಿಕ ನಿಪುಣನು. ಇದು ಕೇವಲ ಯೋಗ್ಯರಾದ ಸಜ್ಜನರಿಗೆ ದಕ್ಕುತ್ತದೆಯೇ ಹೊರತು ಅಯೋಗ್ಯರಿಗೆ ದಕ್ಕಲಾರದು.


೧೬ನೇ ಪದ್ಯ (ಜೀವನ್ಮುಕ್ತರ ಆನಂದ)

ಅಕ್ಕರದೊಳೀ ಕಾವ್ಯದೊಳೊಂದಕ್ಕರವ... ಹರಿಕಥಾಮೃತಸಾರ ಸೊಗಸುವದೆ || 16 ||


ಅರ್ಥ: ಈ ಕಾವ್ಯದಲ್ಲಿರುವ ಒಂದೇ ಒಂದು ಅಕ್ಷರವನ್ನು ಬರೆದು ಅಥವಾ ಓದಿದವನು ದೇವತೆಗಳಿಗೂ ಪ್ರಿಯನಾಗುತ್ತಾನೆ. ಅವನು ಲೌಕಿಕದ ಧರ್ಮ, ಅರ್ಥ, ಕಾಮಗಳನ್ನು ಲೆಕ್ಕಿಸದೆ ಜಗದೊಡೆಯನಾದ ಶ್ರೀಹರಿಯ ಭಕ್ತಿ ಭಾಗ್ಯವನ್ನು ಪಡೆಯುತ್ತಾನೆ. ಇಂತಹ ಜೀವನ್ಮುಕ್ತರಿಗೆ ಮಾತ್ರ ಈ ಹರಿಕಥಾಮೃತಸಾರವು ಸೊಗಸುತ್ತದೆಯೇ ಹೊರತು ಲೌಕಿಕರಿಗೆ ಇದರ ಸವಿಯಿರುವುದಿಲ್ಲ.


೧೭ನೇ ಪದ್ಯ (ನಿತ್ಯ ಮಂಗಳದ ಮನೆ)

ವತ್ತಿಬಹ ವಿಘ್ನಗಳ ತಡೆದಪ... ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ || 17 ||


ಅರ್ಥ: ಈ ಹರಿಕಥಾಮೃತಸಾರವನ್ನು ಪ್ರತಿದಿನ ಪಠಿಸುವವರ ಮನೆಯಲ್ಲಿ ಸಾಕ್ಷಾತ್ ಪದ್ಮಾಕ್ಷನಾದ ಶ್ರೀಹರಿಯು ಆನಂದದಿಂದ ನೃತ್ಯ ಮಾಡುತ್ತಿರುತ್ತಾನೆ. ಇದು ಒದಗಿ ಬರುವ ಸಕಲ ವಿಘ್ನಗಳನ್ನು ತಡೆಯುತ್ತದೆ, ಅಪಮೃತ್ಯುವನ್ನು ದೂರ ಮಾಡುತ್ತದೆ, ಯಮನ ದೂತರಿಗೆ ಭಯವನ್ನು ಹುಟ್ಟಿಸುತ್ತದೆ ಮತ್ತು ಭಕ್ತರಿಗೆ ಸಕಲ ಸಿದ್ಧಿಗಳನ್ನು ಕರುಣಿಸುತ್ತದೆ. ಅಂತಹ ಮನೆಯಲ್ಲಿ ಸದಾ ನಿತ್ಯಮಂಗಳವಿರುತ್ತದೆ.


೧೮ನೇ ಪದ್ಯ (ಒಂದೇ ಅಧ್ಯಾಯದ ಫಲ)

ಆಯುರಾರೋಗ್ಯೈಶ್ವರ್ಯ ಮಾಹಾಯಶೋ... ಹರಿಕಥಾಮೃತಸಾರ ಸುಜನರಿಗೆ || 18 ||


ಅರ್ಥ: ಆಯಸ್ಸು, ಆರೋಗ್ಯ, ಐಶ್ವರ್ಯ, ಮಹಾ ಕೀರ್ತಿ (ಯಶೋ), ಧೈರ್ಯ, ಬಲ ಮತ್ತು ಉತ್ತಮ ಸಹಾಯ—ಹೀಗೆ ಹತ್ತು ಸಾವಿರ (ಆಯುತ) ಶುಭ ಗುಣಗಳು ಮನುಷ್ಯನಿಗೆ ಲಭಿಸಬೇಕಾದರೆ ಈ ಹರಿಕಥಾಮೃತಸಾರದ ಒಂದೇ ಒಂದು ಅಧ್ಯಾಯವನ್ನು (ಸಂಧಿಯನ್ನು) ಪಠಿಸಿದರೆ ಸಾಕು. ಇದು ಸಜ್ಜನರ ಕಿವಿಗಳಿಗೆ ಸದಾ ಶ್ರವಣೀಯವಾದುದು.


೧೯ನೇ ಪದ್ಯ (ಲೌಕಿಕ ಅದ್ಭುತಗಳು)

ಕುರುಡ ಕಂಗಳ ಪಡೆವ ಬಧಿರನಿಗೆರೆಡು... ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ || 19 ||


ಅರ್ಥ: ಈ ಕೃತಿಯನ್ನು ಕೇಳಿದ ಮಾತ್ರಕ್ಕೆ ಕುರುಡನಿಗೆ ದೃಷ್ಟಿ ಬರುತ್ತದೆ, ಕಿವುಡನಿಗೆ (ಬಧಿರ) ಕಿವಿ ಕೇಳಿಸುತ್ತದೆ, ಅಂಗವಿಕಲನಾದವನು ಮನ್ಮಥನಂತಹ (ಮದನಾಕೃತಿ) ಸುಂದರ ರೂಪವನ್ನು ಪಡೆಯುತ್ತಾನೆ. ಇದನ್ನು ಪಠಿಸಿದರೆ ಬರಡು ಹಸು ಕೂಡ ಹೈನು (ಹಾಲು) ನೀಡುತ್ತದೆ, ಒಣಗಿದ ಮರದ ಕೊರಡು ಕೂಡ ಚಿಗುರುತ್ತದೆ (ಪಲ್ಲೈಸುವದು). ಯಾವುದೇ ಸ್ಪರ್ಧೆ ಅಥವಾ ಹಠದಿಂದಲಾದರೂ (ಹುರುಡಿಲಾದರು) ಪ್ರತಿದಿನ ಹರಿಕಥಾಮೃತಸಾರವನ್ನು ಪಠಿಸಿದರೆ ಈ ಸಕಲ ಫಲಗಳು ಲಭಿಸುತ್ತವೆ.


೨೦ನೇ ಪದ್ಯ (ಗಂಗೆಯ ಸ್ನಾನದ ಫಲ)

ನಿರ್ಜರ ತರಂಗಿಣಿಯೊಳನುದಿನ... ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ || 20 ||


ಅರ್ಥ: ದೇವನದಿಯಾದ ಗಂಗೆಯಲ್ಲಿ (ನಿರ್ಜರ ತರಂಗಿಣಿ) ಪ್ರತಿದಿನ ಸ್ನಾನ ಮಾಡಿ, ಆಶಾಪಾಶಗಳನ್ನು ತೊರೆದು ಮಾಡಿದ ಕರ್ಮಗಳಿಗಿಂತಲೂ ಹೆಚ್ಚಿನ ಫಲವು ಈ ಗ್ರಂಥದ ಪಠಣದಿಂದ ದೊರೆಯುತ್ತದೆ. ಹೆಜ್ಜೆಹೆಜ್ಜೆಗೆ ಇಂತಹ ಮಹಾಫಲಗಳು ಲಭಿಸುವುದನ್ನು ಕಂಡು ಸಜ್ಜನರು ಆನಂದದಿಂದ ತಲೆದೂಗುತ್ತಾರೆ. ಆದ್ದರಿಂದ ಭಕ್ತರು ಉತ್ಸಾಹದಿಂದ ಘರ್ಜಿಸುತ್ತಾ ಈ ಹರಿಕಥಾಮೃತಸಾರವನ್ನು ಪಠಿಸಬೇಕು.


೨೧ನೇ ಪದ್ಯ (ಕೌಟುಂಬಿಕ ಮಂಗಳ ಮತ್ತು ಸದ್ಗತಿ)

ಸತಿಯರಿಗೆ ಪತಿಭಕುತಿ ಪತ್ನೀವ್ರತ... ಪಡೆವರು ಹರಿಕಥಾಮೃತಸಾರವನು ಪಠಿಸೆ || 21 ||


ಅರ್ಥ: ಈ ಪವಿತ್ರ ಗ್ರಂಥವನ್ನು ಪಠಿಸುವುದರಿಂದ ಸ್ತ್ರೀಯರಲ್ಲಿ ಪತಿಭಕ್ತಿಯೂ, ಪುರುಷರಲ್ಲಿ ಪತ್ನೀವ್ರತ ನಿಯಮವೂ ನೆಲೆಗೊಂಡು ಸದಾ ಹಿತವುಂಟಾಗುತ್ತದೆ. ಅವರು ಅತ್ಯಂತ ಮನೋಹರರಾಗಿ ತಮ್ಮ ಗುರು-ಹಿರಿಯರ ಆಶೀರ್ವಾದದೊಂದಿಗೆ ಜಗತ್ತಿನಲ್ಲಿ ಬಾಳುತ್ತಾರೆ. ಸದಾ ಮಂಗಳವನ್ನು ನೀಡುವ ಉತ್ತಮ ಪುಣ್ಯವಂತರೆನಿಸಿಕೊಂಡು, ಅತ್ಯಂತ ಸುಲಭವಾಗಿ ಮುಕ್ತಿ ಮಾರ್ಗವನ್ನು (ಸದ್ಗತಿಯನ್ನು) ಪಡೆಯುತ್ತಾರೆ.


೨೨ನೇ ಪದ್ಯ (ಮಹಂತರ ದಿವ್ಯತೆ)

ಎಂತು ಬಣ್ಣಿಸಲೆನ್ನಳವೆ... ನರರೆಂದು ಬಗೆವರೆ ನಿರಯ ಭಾಗಿಗಳು || 22 ||


ಅರ್ಥ: ಭಗವಂತನ ನಿರ್ಮಲವಾದ ಕಲ್ಯಾಣ ಗುಣಗಳನ್ನು ವರ್ಣಿಸಲು ನನ್ನ ಅಳವೆಷ್ಟು? ಆಚಾರ್ಯ ಮಧ್ವರ (ಪೂರ್ಣಬೋಧರ) ಮತವನ್ನು ಆಳವಾಗಿ ನಂಬಿ, ಸಾಮಾನ್ಯರ ಬುದ್ಧಿಗೆ ನಿಲುಕುವಂತೆ ಅನೇಕ ದೃಷ್ಟಾಂತಗಳ (ಉದಾಹರಣೆಗಳ) ಮೂಲಕ ಈ ಪರಮ ಸತ್ಯವನ್ನು ಹೇಳಿದ ನಮ್ಮ ಜಗನ್ನಾಥದಾಸರಂತಹ ಮಹಂತರನ್ನು ಯಾರು ಕೇವಲ ಸಾಮಾನ್ಯ ಮನುಷ್ಯರು (ನರರು) ಎಂದು ತಿಳಿಯುತ್ತಾರೋ, ಅವರು ನರಕಕ್ಕೆ (ನಿರಯ ಭಾಗಿಗಳು) ಹೋಗುತ್ತಾರೆ. ಅವರು ಸಾಕ್ಷಾತ್ ದೇವಸ್ವರೂಪರು.


೨೩ನೇ ಪದ್ಯ (ಜ್ಞಾನದ ದಿವ್ಯ ಭೋಜನ)

ಮಣಿಖಚಿತ ಹರಿವಾಣದೊಳು ವಾರಣ... ನೋಡುವ ಹರಿಕಥಾಮೃತಸಾರ ವನುದಾರ || 23 ||


ಅರ್ಥ: ರತ್ನಖಚಿತವಾದ ಚಿನ್ನದ ತಟ್ಟೆಯಲ್ಲಿ (ಹರಿವಾಣ) ಶ್ರೇಷ್ಠವಾದ ಭೋಜನ ಪದಾರ್ಥಗಳನ್ನು ಇಟ್ಟು, "ಕೃಷ್ಣಾರ್ಪಣಮಸ್ತು" ಎಂದು ಹಸಿದವರಿಗೆ ಬಡಿಸುವಂತೆ, ನಮ್ಮ ಉದಾರಿಯಾದ ಗುರುಗಳು ಶರಣಾದ ಭಕ್ತರಿಗೆ ಬಂಗಾರದಂತಹ ಕನ್ನಡದ (ಪೊಂಗನಡ) ಶ್ರೇಷ್ಠ ಶಬ್ದಗಳೆಂಬ ದಿವ್ಯ ಮಣಿಗಳಿಂದ ಕೃತಿಯನ್ನು ವಿರಚಿಸಿ ಜ್ಞಾನದ ಭೋಜನವನ್ನು ಉಣಿಸಿದ್ದಾರೆ. ಈ ಹರಿಕಥಾಮೃತಸಾರವು ಅತ್ಯಂತ ಉದಾರವಾದುದು.


೨೪ನೇ ಪದ್ಯ (ಶ್ರೀದವಿಠ್ಠಲನ ಶರಣಾಗತಿ)

ದುಷ್ಟರೆನ್ನದೆ ದುರ್ವಿಷಯದಿಂ... ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ || 24 ||


ಅರ್ಥ: ನಾವು ಎಷ್ಟೇ ದುಷ್ಟರಾಗಿದ್ದರೂ, ಕೆಟ್ಟ ವಿಷಯಗಳಿಂದ ತುಂಬಿದ್ದರೂ ಅಥವಾ ಪವಿತ್ರ ಕರ್ಮಗಳಿಂದ ಭ್ರಷ್ಟರಾಗಿದ್ದರೂ ಚಿಂತೆಯಿಲ್ಲ; ಯಾರು ಅತ್ಯಂತ ನಿಷ್ಠೆಯಿಂದ ಈ ಹರಿಕಥಾಮೃತಸಾರವನ್ನು ಪಠಿಸುತ್ತಾರೋ, ಅವರನ್ನು ಆ ಸಾಕ್ಷಾತ್ ಶ್ರೀದವಿಠ್ಠಲ ವೇಣುಗೋಪಾಲ ಕೃಷ್ಣನು ಪ್ರೀತಿಯಿಂದ ಕೈಹಿಡಿದು ಮುನ್ನಡೆಸುತ್ತಾನೆ. ಅವರಿಗೆ ತನ್ನ ವಿಶಿಷ್ಟವಾದ ದಾಸ್ಯ ಭಕ್ತಿಯನ್ನು ಪಾಲಿಸಿ ಸದಾ ರಕ್ಷಿಸುತ್ತಾನೆ ಎಂಬುದು ಪರಮ ಸತ್ಯ.

***

Phalashruti Sandhi (Chapter 33) from the Sri Harikathamrutasara.


This specific concluding chapter was composed by Sri Karjagi Sreedavitthala Dasaru, a prominent disciple of Sri Jagannatha Dasaru. His signature architectural phrase (ankita nama) is Sreedavitthala Venugopala Krishna.


Summary

In this final, auspicious chapter, Sri Sreedavitthala Dasaru extols the supreme spiritual, mystical, and material rewards (Phalashruti) of studying and chanting the Sri Harikathamrutasara. He elevates this text from a mere poetic work to the absolute distillation of Acharya Madhwa’s Dvaita philosophy (Madhvagama).


The poet strongly defends the use of the vernacular Kannada language (Prakrit), stating that when a text contains the flawless, pure attributes of Sri Hari, it matches the sanctity of Sanskrit. Sreedavitthala Dasaru outlines breathtaking spiritual promises: daily recitation removes the fear of untimely death (Apamrutyu), terrifies the messengers of death, and forces obstacles to recede. On a material level, it holds miraculous healing powers—granting sight to the blind, hearing to the deaf, turning barren cows fertile, and making dried-up logs sprout leaves. Ultimately, the poet assures that even if a soul is fallen, corrupt, or spiritually bankrupt, sincere and disciplined chanting of this work will compel Lord Sreedavitthala Venugopala Krishna to hold their hand, grant them true discipleship, and bestow final liberation (Sadgati).


Stanza-wise Meaning in English

Invocatory Verse


Harikathamrutasara gurugala karunadindapanitu keluve |

Parama bhagavadbhaktaru idanadaradi keluvudu ||


Meaning: By the divine grace and compassion of my revered Guru (Sri Jagannatha Dasaru), I shall explain the fruits of this Harikathamrutasara to the best of my limited understanding. May the supreme devotees of the Lord listen to this with deep affection and reverence.


1. The Pride of Scholars vs. Joy of Devotees

Harikathamrutasara sreemadguruvara... tori peluvadalla dhareyolage || 1 ||


Meaning: Our great spiritual master, Sri Jagannatha Dasaru, has presented the entire essence of the Lord’s nectar-like stories clearly, like a gooseberry held in the palm of one's hand (karatalamalaka). Arrogant scholars who boast of their intellect might feel a burning envy (edegicchu) in their hearts because they cannot grasp its depth. However, true connoisseurs of spiritual emotion (rasikaru) will experience pure joy. This sacred knowledge must not be displayed or handed over to the undeserving on this earth.


2. The Compassion of the Guru and the Starting Verses

Bhaminee shatpadiya roopadalee... premadindali pelda guru karunyakeneambe || 2 ||


Meaning: Composed beautifully in the Bhamini Shatpadi meter (a six-line poetic stanza), this wondrous epic begins with a breathtaking hierarchy of deities and protective introductory verses (Naandi Padyas). For those who chant these introductory verses round-the-clock (yama-yamake), our Guru has lovingly crafted this text to hold them by the hand and rescue them from worldliness. What can one possibly say to adequately praise such boundless guru-compassion?


3. Driving Away the Bondage of Samsara

Saravendare harikathamruta... sara nadeva mahatmarige samsaravellihudo || 3 ||


Meaning: Our Guru has openly proclaimed that the ultimate, purest essence (saara) in this entire universe is nothing but the nectar of Sri Hari’s stories. Drawing strength from the divine grace of Sri Krishna—the chariot driver of Indra's son, Arjuna—the poet has carefully separated the essential from the non-essential (saara-asaara) in this work. For the noble souls who walk firmly on this path, where is the question of worldly bondage (Samsara)? It dissolves completely.


4. Effortless and Auspicious Poetic Mastery

Dasavaryara mukhadi nindu... lasulasane shravya madude kuruhu kavigalige || 4 ||


Meaning: Lord Rameshvara (Sri Hari) established Himself right upon the tongue of Sri Jagannatha Dasaru. Driven by the divine desire to have His own glories sung, He inspired the ruling deities of speech and letters (Varnabhimani devatigalu) to construct this work. In this flawlessly structured poem, rhymes (prasa) and pauses (yati) appear effortlessly without any forced poetic labor. Making a profound text so incredibly melodious and easy to listen to is the hallmark of a divinely gifted poet.


5. The Sanctity of the Vernacular (Kannada vs. Sanskrit)

Prakrutoktigalendu baride... prakrutave samskrutada sadagaravenu sujanarige || 5 ||


Meaning: Ungrateful cynics might dismiss this work simply because it is written in the vernacular language (Prakrit / Kannada). But will noble, pure-hearted souls (sujanaru) ever reject divine truth based on language? When the spotless, pristine attributes of the Husband of Goddess Lakshmi (Sri Hari) are overflowing within these pages, why should a devotee care about the vanity of Sanskrit? For the virtuous, this vernacular is fully equal to the highest classical tongue.


6. The Butter Churned from the Ocean of Vedic Knowledge

Shrutige shobhanamagadade... ratarigeepsita harikathamrutasaravenisuvudu || 6 ||


Meaning: If this work did not bring glory to the Vedas (Shruti), if it did not grant auspicious blessings to the simple-minded, or if it lacked the approval of the scriptures, our great Guru would never have brought it to life. He has effectively churned the vast ocean of Acharya Madhwa's philosophy (Madhvagama) and presented this supreme science of the soul (Brahma Vidya) to the world. For those deeply immersed in divine contemplation, it functions as the true Harikathamrutasara—the fulfiller of all spiritual desires.


7. Flawless Composition Approved by the Divine

Bhaktivadadi peldanemba... jeevanmukta bhogyavidendu sirimadananda mecchuvane? || 7 ||


Meaning: One cannot claim that this work was written out of blind, emotional fanaticism. It contains no redundant repetitions, hollow words, contradictions to scriptural logic, or grammatical flaws (vibhakti vishama). If it possessed such defects, would the highly enlightened souls or the bliss-filled Husband of Lakshmi (Sri Hari) ever appreciate it? It is because of its pristine purity that it remains a source of eternal enjoyment for liberated souls (jeevanmukta bhogya).


8. A Plea to Protect the Text from the Malicious

Ashukavikula kalpataru... dveshigaligereyadale salisuvadenna binnapava || 8 ||


Meaning: I bow down and pray to the lineage of great Haridasas, who are like wish-fulfilling trees (Kalpataru) in creating spontaneous poetry and are deeply loved across all directions by Lord Ranga. My humble petition to you is this: please do not pour this flawless, sacred nectar into the ears of malicious cynics who harbour deep-rooted hatred for the Divine. Reserve this only for the deserving, virtuous souls.


9. The Scorn of Critics Becomes an Ornament

Prasagala pondisade shabda... deshadamyavu harikathamrutasara sadhyarige || 9 ||


Meaning: Ignorant critics may complain day in and day out that this work lacks technical rhyme schemes, doesn't utilize advanced wordplay (shlesha), violates structural vowel lengths, or fails the rigid pace of a Shatpadi. However, to the practitioners who have actually realized the essence of Harikathamrutasara, this very criticism reads like an ornament. This is a text meant for spiritual realization, not mechanical academic analysis.


10. Tears of Bliss and Hidden Protection

Ashrutagama idara bhava... pashrutigalaitappave nija bhakti ullavarige || 10 ||


Meaning: Hidden within this text are rare scriptural insights never heard elsewhere. For those who truly understand its inner depth, it brings forth an immediate downpour of tears of absolute spiritual ecstasy (anandashru). The Lord hides this profound truth from worldly, mixed characters (mishraru), while constantly guarding the celestial beings (divijaru). For anyone possessing genuine devotion, all spiritual fruits and powers (siddhis) will naturally arrive through its chanting.


11. Winning the Affection of the Lord Easily

Niccha nijajana neccha nelegandaccha... uccharise sirivatsa lanchana mecchalenaridu || 11 ||


Meaning: For the righteous who build their entire lives upon trusting the Divine, this text steadily multiplies their true, unshakeable spiritual fortune and honor. It acts as a shield that covers and cleanses our inner impurities and sins. When a devotee utters this sacred history with a pure tongue, winning the approval and love of the Lord who bears the Srivatsa mark on His chest is not difficult at all—He is instantly pleased.


12. The Gathering of Saints and Destruction of Vices

Sadhu sabheyolu mereye tatva... haditohida heriya bahuchaturya hosapariya || 12 ||


Meaning: In a gathering of holy saints, this work pours down a brilliant rain of philosophical truth. The moment it is heard, the internal seeds of lust and anger (kama-krodha) are thoroughly roasted and destroyed. It shatters the arrogance of the wicked and silences hostile, argumentative debaters. Our great elders have brilliantly devised this innovative, unprecedented path (hosa pariya) to allow true devotees to lose themselves in spiritual bliss.


13. The Lineage of Divine Blessings

Vyasatirtharolaveyo vithalopasaka... koshakoppuva harikathamrutasara pelidaru || 13 ||


Meaning: Whether it is the personal affection of Sri Vyasatirtha or the divine grace of the supreme worshipper of Vitthala, Sri Purandara Dasaru, I do not know; but without any extensive formal schooling, Sri Jagannatha Dasaru successfully extracted the finest gems of Lord Keshava's attributes. He dedicated them all to his guru Pranesha, creating a masterpiece that perfectly fits into the glorious treasury of knowledge (kosha) guarded by Sri Vadiraja Teertha.


14. An Ocean of Nine Emotions and an Unforgettable Favor

Harikathamrutasara navarasabharita... paramodara madida mareyadupakara || 14 ||


Meaning: The Harikathamrutasara is like a profoundly deep ocean (ratnakara) brimming with the nine classical aesthetic emotions (navarasa). It is beautifully adorned with spiritual ornamentation, elegance, and vast dimensions. Bearing the auspicious name of the delight of the lions among men (Narahari), this work has been generously gifted to spiritually pure souls (sattvikarige). The master has done the world an unforgettable, eternal favor.


15. A Divine Oil Digestible Only by the Worthy

Avaniyolu jyotishmatee tailavanu... nipununai yogyagallade dakkalariyadidu || 15 ||


Meaning: If an ordinary, unrefined person swallows the highly potent Jyotishmati medicinal oil, they will instantly vomit it out due to sheer lack of capacity; only a highly capable physician can digest it safely. Similarly, only a true spiritual expert can taste and properly assimilate the unblemished, transcendental essence of this auditory nectar. This knowledge is inherently stable only within the worthy (yogya); it will never stick to the unworthy.


16. The Status of a Liberated Soul

Akkaradolhee kavyadolondakkarava... harikathamrutasara sogasuvadhe || 16 ||


Meaning: Anyone who writes or recites even a single letter of this monumental epic becomes highly dear to the celestial gods. Such a person completely looks beyond the material pursuits of mundane righteousness, wealth, or desires, and directly attains the ultimate fortune of pure devotion to the Lord of the Universe. This text appeals exclusively to such liberated souls (jeevanmuktaru); it holds no charm for the worldly-minded.


17. A Household of Eternal Auspiciousness

Vattibaha vighnagala tadedapa... nityamangala harikathamrutasara pathisuvara || 17 ||


Meaning: In the household where this Harikathamrutasara is systematically chanted every day, the lotus-eyed Lord Sri Hari Himself dances with joy. This recitation intercepts and stops approaching calamities, pushes away the threat of untimely death (apamrutyu), instills raw terror into the servants of Yama (the God of Death), and ensures the manifestation of all spiritual successes. Such a home becomes a permanent residence of eternal auspiciousness (nitya mangala).


18. The Astonishing Fruit of Reciting a Single Chapter

Ayurarogyaisvarya mahayasho... harikathamrutasara sujanarige || 18 ||


Meaning: Long life, robust health, spiritual opulence, massive renown, courage, physical stamina, timely assistance, valor, and profound magnanimity—thousands of such exceptional blessings (ayutagalu) manifest simply by chanting or listening to just one single chapter (sandhi) of this work. It remains the ultimate daily listening pleasure for virtuous souls.


19. Miraculous Material Visualizations and Healing

Kuruda kangala padeva badhiranigeredu... hurudiladaru harikathamrutasaramavu pathise || 19 ||


Meaning: By merely listening to this work, a blind person receives sight, a deaf person gains excellent hearing, and the physically deformed transform into bodies of exceptional grace, resembling Cupid (Madana) himself. If it is recited, even a completely barren cow begins to overflow with milk, and a dry, dead wooden log begins to sprout fresh green leaves (koradu pallaisuvadu). Even if one chants it out of mere habit, competition, or stubbornness (hurudiladaru), it still delivers these astounding rewards day after day.


20. Greater Than Bathing in the Holy River Ganges

Nirjara taranginiyolanudina... gharjicutalee harikathamrutasara pathisuvara || 20 ||


Meaning: The spiritual merit accumulated by chanting this text with a booming, joyful voice is infinitely greater than the fruit earned by daily bathing in the celestial river Ganges (Nirjara Tarangini) while attempting to perform rituals amidst worldly attachments. Witnessing the massive waves of spiritual merits that unfold at every single step, noble souls nod their heads in absolute wonder and approval.


21. Marital Harmony and Easy Liberation

Satiyarige patibhakuti patneevrata... padevaru harikathamrutasaravanu pathise || 21 ||


Meaning: Chanting this sacred text establishes deep devotion towards husbands among women, and unwavering marital fidelity (patneevrata) among men, bringing stable joy to the household. Family members live beautifully in the world, backed by the blessings of their spiritual elders and teachers. By generating continuous auspiciousness, they effortlessly attain the highest spiritual destination (sadgati).


22. The Sin of Viewing the Great Masters as Mere Mortals

Entu bannisalennalave... nararendu bagevare niraya bhagigalu || 22 ||


Meaning: Who am I to describe the flawless, infinite attributes of the Supreme Almighty? My capacity is next to nothing. Our great master, Sri Jagannatha Dasaru, fully absorbed the philosophy of Acharya Madhwa (Poornabodha) and mapped out these ultimate truths using simple, practical analogies so that even ordinary minds could contemplate them. Those who foolishly look at such a master and dismiss him as a mere mortal human being (nararu) are bound for spiritual downfall and dark regions (niraya bhagigalu).


23. A Feast of Golden Words Served in a Jeweled Platter

Manikhachita harivanadolu varana... noduva harikathamrutasara vanudara || 23 ||


Meaning: Imagine serving a grand, delicious feast on a brilliant platter studded with precious gems, dedicating it entirely to Lord Krishna, and offering it generously to the hungry. In that exact manner, our immensely magnanimous Guru has woven this text out of golden Kannada phrases (ponganada vara vanmanigalin) to serve a divine feast of knowledge to his dependent devotees. This text is incredibly generous in what it gives.


24. The Ultimate Assurance of Sreedavitthala

Dushtarennade durvishayadim... nishtheyandali harikathamrutasara pathisuvara || 24 ||


Meaning: It does not matter if we have been wicked in the past, heavily bloated with worldly desires, or entirely fallen from our spiritual duties. Sri Hari, in the form of Sreedavitthala Venugopala Krishna, will personally step forward and take hold of the hands of those who read, study, and chant this Harikathamrutasara with unyielding discipline and devotion. He will bless them with true, high-caliber discipleship and guard them for all eternity. This is the absolute truth.

***



*****

kruti by Srida Vittala Dasaru  Karjagi Dasappa

ಹರಿಕಥಾಮೃತಸಾರ ಫಲಸ್ತುತಿ (33ನೆಯ ಸಂಧಿ)

ಹರಿಕಥಾಮೃತಸಾರ ಶ್ರೀಮ-

ದ್ಗುರುವರ ಜಗನ್ನಾಥದಾಸರ

ಕರತಳಾಮಲಕವೆನೆ ಪೇಳಿದ ಸಕಲ ಸಂಧಿಗಳ

ಪರಮಪಂಡಿತಾಭಿಮಾನಿಗಳು ಮ-

ತ್ಸರಿಸಲೆದೆಗಿಚ್ಚಾಗಿ ತೋರುವು-

ದರಸಿಕರಿಗಿದು ತೋರಿ ಪೇಳುವುದಲ್ಲ ಧರೆಯೊಳಗೆ 1

ಭಾಮಿನಿಯ ಷಟ್ಪದಿಯ ರೂಪದ-

ಲೀ ಮಹಾದ್ಭುತ ಕಾವ್ಯದಾದಿಯೊ-

ಳಾ ಮನೋಹರ ತರತಮಾತ್ಮಕ ನಾಂದಿಪದ್ಯಗಳ

ಯಾಮಯಾಮಕೆ ಪಠಿಸುವರ ಸು-

ಧಾಮಸಖ ಕೈಪಿಡಿಯಲೋಸುಗ

ಪ್ರೇಮದಿಂದಲಿ ಪೇಳ್ದ ಗುರುಕಾರುಣ್ಯಕೇನೆಂಬೆ 2

ಸಾರವೆಂದರೆ ಹರಿಕಥಾಮೃತ

ಸಾರವೆಂಬುವುದೆಮ್ಮ ಗುರುವರ

ಸಾರಿದಲ್ಲದೆ ತಿಳಿಯೆಂದೆನುತ ಮಹೇಂದ್ರನಂದನನ

ಸಾರಥಿಯ ಬಲಗೊಂಡು ಸಾರಾ-

ಸಾರಗಳ ನಿರ್ಣೈಸಿ ಪೇಳ್ದನು

ಸಾರ ನಡೆವ ಮಹಾತ್ಮರಿಗೆ ಸಂಸಾರವೆಲ್ಲಿಹುದೊ 3

ದಾಸವರ್ಯರ ಮುಖದಿ ನಿಂದು ರ-

ಮೇಶನನು ಕೀರ್ತಿಸುವ ಮನದಭಿ-

ಲಾಶೆಯಲಿ ವರ್ಣಾಭಿಮಾನಿಗಳೊಲಿದು ಪೇಳಿಸಿದ

ಈ ಸುಲಕ್ಷಣ ಕಾವ್ಯದೋಳ್ ಯತಿ

ಪ್ರಾಸಗಳಿಗೆ ಪ್ರಯತ್ನವಿಲ್ಲದೆ

ಲೇಸುಲೇಸೆನೆ ಶ್ರಾವ್ಯಮಾದುದೆ ಕುರುಹು ಕವಿಗಳಿಗೆ 4

ಪ್ರಾಕೃತೋಕ್ತಿಗಳೆಂದು ಬರಿದೆ ಮ-

ಹಾಕೃತಘ್ನರು ಜರಿವರಲ್ಲದೆ

ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು

ಶ್ರೀಕೃತೀಪತಿಯಮಲಗುಣಗಳು

ಈ ಕೃತಿಯೊಳುಂಟಾದ ಬಳಿಕ

ಪ್ರಾಕೃತವೆ ಸಂಸ್ಕøತದ ಸಡಗರವೇನು ಸುಗುಣರಿಗೆ 5

ಶ್ರುತಿಗೆ ಶೋಭನವಾಗದೊಡೆ ಜಡ

ಮತಿಗೆ ಮಂಗಳವೀಯದೊಡೆ ಶ್ರುತಿ

ಸ್ಮøತಿಗೆ ಸಮ್ಮತವಲದಿದ್ದೊಡೆ ನಮ್ಮ ಗುರುರಾಯ

ಮಥಿಸಿ ಮಧ್ವಾಗಮಪಯೋಬ್ಧಿಯ

ಕ್ಷಿತಿಗೆ ತೋರಿಸಿ ಬ್ರಹ್ಮವಿದ್ಯಾ

ರತರಿಗೀಪ್ಸಿತ ಹರಿಕಥಾಮೃತಸಾರ ಸೊಗಸುವುದು 6

ಭಕ್ತಿವಾದದಿ ಪೇಳ್ದನೆಂಬ ಪ್ರ-

ಸಕ್ತಿ ಸಲ್ಲದು ಕಾವ್ಯದೊಳು ಪುನ-

ರುಕ್ತಿ ಶುಷ್ಕ ಸಮಾಸ ಪದವ್ಯತ್ಯಾಸ ಮೊದಲಾದ

ಯುಕ್ತಿ ಶಾಸ್ತ್ರ ವಿರುದ್ಧ ಶಬ್ದ ವಿ-

ಭಕ್ತಿ ವಿಷಮಗಳಿರಲು ಜೀವ-

ನ್ಮುಕ್ತಿಯೋಗ್ಯವಿದೆಂದು ಸಿರಿಮದನಂತ ಮೆಚ್ಚುವನೆ 7

ಆಶುಕವಿಕುಲಕಲ್ಪತರು ದಿ-

ಗ್ದೇಶವರಿಯಲು ರಂಗನೊಲುಮೆಯ

ದಾಸಕೂಟಸ್ಥರಿಗೆರಗಿ ನಾ ಬೇಡಿಕೊಂಬುವೆನು

ಈ ಸುಲಕ್ಷಣ ಹರಿಕಥಾಮೃತ

ಮೀಸಲಳಿಯದೆ ಸಾರ ದೀರ್ಘ

ದ್ವೇಷಿಗಳಿಗೆರೆಯದಲೆ ಸಲಿಸುವುದೆನ್ನ ಬಿನ್ನಪವ 8

ಪ್ರಾಸಗಳ ಪೊಂದಿಸದೆ ಶಬ್ದ

ಶ್ಲೇಷಗಳ ಶೋಧಿಸದೆ ದೀರ್ಘ

ಹ್ರಸ್ವಗಳ ಸಲ್ಲಿಸದೆ ಷಟ್ಪದಿಗತಿಗೆ ನಿಲ್ಲಿಸದೆ

ದೂಷಕರು ದಿನದಿನದಿ ಮಾಡುವ

ದೂಷಣವೇ ಭೂಷಣವು ಎಂದುಪ-

ದೇಶಗಮ್ಯವು ಹರಿಕಥಾಮೃತಸಾರ ಸಾಧ್ಯರಿಗೆ 9

ಅಶ್ರುತಾಗಮಭಾವ ಇದರ ಪ-

ರಿಶ್ರಮವು ಬಲ್ಲವರಿಗಾನಂ-

ದಾಶ್ರುಗಳ ಮಳೆಗರಿಸಿ ಮೈಮರೆಸುವ ಚಮತ್ಕøತಿಯ

ಮಿಶ್ರರಿಗೆ ಮರೆಮಾಡಿ ದಿತಿಜರ

ಶಸ್ತ್ರದಲಿ ಕಾಯದಿಪ್ಪರಿದರೊಳು-

ಪಶ್ರುತಿಗಳು ತಪ್ಪುವುವೇ ನಿಜ ಭಕ್ತಿಯುಳ್ಳರಿಗೆ 10

ನಿಚ್ಚ ನಿಜಜನ ಮೆಚ್ಚ ಗೋಧನ

ಅಚ್ಚ ಭಾಗ್ಯವು ಪೆಚ್ಚೆ ಪೇರ್ಮೆಯು

ಕೆಚ್ಚ ಕೇಳ್ವನು ಮೆಚ್ಚ ಮಲಮನ ಮುಚ್ಚಲೆಂದೆನುತ

ಉಚ್ಚವಿಗಳಿಗೆ ಪೊಚ್ಚ ಪೊಸದೆನ-

ಲುಚ್ಚರಿಸಿದೀ ಸಚ್ಚರಿತ್ರೆಯ

ನುಚ್ಚರಿಸೆ ಸಿರಿವತ್ಸಲಾಂಛನ ಮೆಚ್ಚಲೇನರಿದು 11

ಸಾಧು ಸಭೆಯೊಳು ಮೆರೆಯೆ ತತ್ವಸು-

ಬೋಧವೃಷ್ಟಿಯ ಗರೆಯೆ ಕಾಮ

ಕ್ರೋಧ ಬೀಜವ ಹುರಿಯೆ ಖಳರೆದೆ ಬಿರಿಯೆ ಕರಕರಿಯ

ವಾದಿಗಳ ಪಲ್ಮುರಿಯೆ ಪರಮವಿ-

ನೋದಿಗಳ ಮೈ ಮರೆಯಲೋಸುಗ

ಹಾದಿ ತೋರಿದ ಹಿರಿಯ ಬಹು ಚಾತುರಿಯ ಹೊಸ ಪರಿಯ 12

ವ್ಯಾಸತೀರ್ಥರ ಒಲವೊ ವಿಠಲೋ-

ಪಾಸಕ ಪ್ರಭುವರ್ಯ ಪುರಂದರ

ದಾಸರಾಯರ ದಯವೊ ತಿಳಿಯದು ಓದಿ ಕೇಳದಲೆ

ಕೇಶವನ ಗುಣಮಣಿಗಳನು ಪ್ರಾ-

ಣೇಶಗರ್ಪಿಸಿ ವಾದಿರಾಜರ

ಕೋಶಕೊಪ್ಪುವ ಹರಿಕಥಾಮೃತಸಾರ ಕೇಳಿದರು 13

ಹರಿಕಥಾಮೃತಸಾರ ನವರಸ

ಭರಿತ ಬಹುಗಂಭೀರ ರತ್ನಾ-

ಕರ ರುಚಿರ ಶೃಂಗಾರ ಸಾಲಂಕಾರ ವಿಸ್ತಾರ

ಸರಸ ನರಕಂಠೀರವಾಚಾ-

ರ್ಯರ ಜನಿತ ಸುಕುಮಾರ ಸಾತ್ವೀ-

ಕರಿಗೆ ಪರಮೋದಾರ ಮಾಡಿದ ಮರೆಯದುಪಕಾರ 14

ಅವನಿಯೊಳು ಜ್ಯೋತಿಷ್ಮತಿಯ ತೈ-

ಲವನು ಪಾಮರನುಂಡು ಜೀರ್ಣಿಸ-

ಲವನೆ ಪಂಡಿತನೋಕರಿಪವಿವೇಕಿಯಪ್ಪಂತೆ

ಶ್ರವಣಮಂಗಳ ಹರಿಕಥಾಮೃತ

ಸವಿದು ನಿರ್ಗುಣಸಾರಮಕ್ಕಿಸ-

ಲವ ನಿಪುಣನೈ ಯೋಗ್ಯಗಲ್ಲದೆ ದಕ್ಕಲರಿಯದಿದು 15

ಅಕ್ಕರದೊಳೀ ಕಾವ್ಯದೊಳು ಒಂ-

ದಕ್ಕರವ ಬರೆದೋದಿದವ ದೇ-

ವರ್ಕಳಿಂ ದುಸ್ತ್ಯಜ್ಯನೆನಿಸಿ ಧರ್ಮಾರ್ಥಕಾಮಗಳ

ಲೆಕ್ಕಿಸದೆ ಲೋಕೈಕನಾಥನ

ಭಕ್ತಿಭಾಗ್ಯವ ಪಡೆದ ಜೀವ

ನ್ಮುಕ್ತಗಲ್ಲದೆ ಹರಿಕತಾಮೃತಸಾರ ಸೊಗಸುವದೆ16

ಒತ್ತಿ ಬಹ ವಿಘ್ನಗಳ ತಡೆದಪ

ಮೃತ್ಯುವಿಗೆ ಮರೆಮಾಡಿ ಕಾಲನ

ಭೃತ್ಯರಿಗೆ ಭೀಕರವ ಪುಟ್ಟಿಸಿ ಸಕಲಸಿದ್ಧಿಗಳ

ಒತ್ತಿಗೊಳಿಸಿ ವನರುಹೇಕ್ಷಣ

ನೃತ್ಯಮಾಡುವನವನ ಮನೆಯೊಳು

ನಿತ್ಯಮಂಗಳ ಹರಿಕಥಾಮೃತಸಾರ ಪಠಿಸುವರ 17

ಆಯುರಾರೋಗ್ಯೈಶ್ವರ್ಯ ಯಶ

ಧೈರ್ಯ ಬಲ ಸಮಸಹಾಯ ಶೌರ್ಯೋ

ದಾರ್ಯ ಗುಣಗಾಂಭೀರ್ಯ ಮೊದಲಾದ

ಆಯತಗಳುಂಟಾಗಲೊಂದ-

ಧ್ಯಾಯ ಪಠಿಸಿದ ಮಾತ್ರದಿಂ ಶ್ರವ-

ಣೀಯವಲ್ಲದೆ ಹರಿಕಥಾಮೃತಸಾರ ಸುಜನರಿಗೆ 18

ಕುರುಡ ಕಂಗಳ ಪಡೆವ ಬಧಿರನಿ-

ಗೆರಡುಕಿವಿ ಕೇಳ್ವಹವು ಬೆಳೆಯದ

ಮುರುಡ ಮದನಾಕೃತಿಯ ತಾಳ್ವನು ಕೇಳ್ದಮಾತ್ರದಲಿ

ಬರಡು ಹೈನಾಗುವುದು ಕೇಳ್ದರೆ

ಕೊರಡು ಪಲ್ಲವಿಸುವುದು ಪ್ರತಿದಿನ

ಹುರುಡಿಲಾದರು ಹರಿಕಥಾಮೃತಸಾರವನು ಪಠಿಸೆ 19

ನಿರ್ಜರತರಂಗಿಣಿಯೊಳನುದಿನ

ಮಜ್ಜನಾದಿ ಸಮಸ್ತ ಕರ್ಮವಿ-

ವರ್ಜಿತಾಶಾಪಾಶದಿಂದಲಿ ಮಾಡಿದಧಿಕಫಲ

ಹೆಜ್ಜೆಹೆಜ್ಜೆಗೆ ದೊರೆಯದಿಪ್ಪವೆ

ಸಜ್ಜನರು ಶಿರತೂಗುವಂದದಿ

ಘರ್ಜಿಸುತಲೀ ಹರಿಕಥಾಮೃತಸಾರ ಪಠಿಸುವರ 20

ಸತಿಯರಿಗೆ ಪತಿಭಕುತಿ ಪತ್ನಿ

ವ್ರತ ಪುರುಷರಿಗೆ ಹರಿಷ ನೆಲೆಗೊಂ-

ಡತಿಮನೋಹರರಾಗಿ ಗುರುಹಿರಿಯರಿಗೆ ಜಗದೊಳಗೆ

ಸತತ ಮಂಗಳವೀವ ಬಹು ಸು-

ಕೃತಿಗಳೆನಿಸುತ ಸುಲಭದಿಂ ಸ

ದ್ಗತಿಯು ಪಡೆವರು ಹರಿಕಥಾಶಮೃತಸಾರವನು ಪಠಿಸೆ 21

ಎಂತು ವರ್ಣಿಸಲೆನ್ನಳವೆ ಭಗ-

ವಂತನಮಲ ಗುಣಾನುವಾದಗ-

ಳೆಂತು ಪರಿಯಲಿ ಪೂರ್ಣಭೋಧರ ಮತವ ಹೊಂದಿದರ

ಚಿಂತನೆಗೆ ಬಪ್ಪಂತೆ ಬಹು ದೃ-

ಷ್ಟಾಂತಪೂರ್ವಕವಾಗಿ ಪೇಳ್ದ ಮ-

ಹಂತರಿಗೆ ನರರೆಂದು ಬಗೆವರೆ ನಿರಯಭಾಗಿಗಳು 22

ಮಣಿಖಚಿತ ಹರಿವಾಣದಲಿ ವಾ

ರಣಸುಭೋಜ್ಯ ಪದಾರ್ಥ ಕೃಷ್ಣಾ

ರ್ಪಣವೆನುತರ್ಪಿಸಿದವರಿಗೋಸುಗ ನೀಡುವಂದದಲಿ

ಪ್ರಣತರಿಗೆ ಪೊಂಗನಡ ವರವಾ

ಙ್ಮಣಿಗಳಿಂ ವಿರಚಿಸಿದ ಶ್ರುತಿಯೊ

ಳುಣಿಸಿ ನೋಡುವ ಹರಿಕಥಾಮೃತಸಾರವನುದಾರ 23

ದುಷ್ಟರೆನ್ನದೆ ದುರ್ವಿಷಯದಿಂ

ಪುಷ್ಟರೆನ್ನದೆ ಪೂತಕರ್ಮ

ಭ್ರಷ್ಟರೆನ್ನದೆ ಶ್ರೀದವಿಠ್ಠಲ ವೇಣುಗೋಪಾಲ

ಕೃಷ್ಣ ಕೈಪಿಡಿಯುವನು ಸತ್ಯ ವಿ-

ಶಿಷ್ಟ ದಾಸತ್ವವನು ಪಾಲಿಸಿ

ನಿಷ್ಠೆಯಿಂದಲಿ ಹರಿಕಥಾಮೃತಸಾರ ಪಠಿಸುವರ 24

****


ಹರೇ ಶ್ರೀನಿವಾಸ 

ಕುರ್ಯಾತ್ ಸದಾ ಮಂಗಳಂ

ಮಂಗಳ.. ಪ್ರಶಸ್ತಾಚರಣಂ ನಿತ್ಯಂ ಅಪ್ರಶಸ್ತಸ್ಯ ವರ್ಜನಂ ಏತದ್ಧಿ ಮಂಗಳಂ ಪ್ರೋಕ್ತಂ.. 

ಪ್ರಶಸ್ತವಾದುದನ್ನು ಮಾಡಿಸಲಿ..

ಕರುಣಿಸೆಮಗೆ ಮಂಗಳವ


ಗಾಯತ್ರಿ ಮಂತ್ರದಲ್ಲಿ ಧಿಯೋ ಯೋ ನ: ಪ್ರಚೋದಯಾತ್ ಎಂಬಲ್ಲಿ ಕರುಣಿಸೆಮಗೆ ಮಂಗಳವ ಅಂತ ಅರ್ಥ.. ಎಂಥವನನ್ನು ಧ್ಯಾನಿಸುತ್ತೇವೆ ಎಂಬಲ್ಲಿ.. 

ನಮಿಪೆ ಕರುಣಿಪುದೆಮಗೆ ಮಂಗಳವ.. 

ಯಾರನ್ನು ಎಂದಾಗ ಶ್ರೀರಮಣಿಕಮಲಪೂಜಿತ ಅಂತ ಪ್ರಾರಂಭ

ಯಾರಿಂದ ಮಂಗಳ.. 

ಕರುಣಿಸೆಮಗೆ ಮಂಗಳವ

ಶ್ರೀಮತ್ ಟೀಕಾಕೃತ್ಪಾದರ ಶ್ರೀಮನ್ ನ್ಯಾಯಸುಧಾ ಗ್ರಂಥದ ಪ್ರಥಮ ಶ್ಲೋಕ. 

ಶ್ರಿಯ:ಪತ್ಯೆ ನಿತ್ಯಾಗಣಿತಗುಣಮಾಣಿಕ್ಯವಿಷದ ಪ್ರಭಾಜಾಲೋಲ್ಲಾಸೋಪಹತಸಕಲಾವದ್ಯತಮಸೇ ಜಗಜ್ಜನ್ಮಸ್ಥೇಮಪ್ರಲಯ ರಚನಾಶೀಲವಪುಷೇ ನಮ:ಅಶೇಷ ಆಮ್ನಾಯ ಸ್ಮೃತಿ ಹೃದಯ ದೀಪ್ತಾಯ ಹರಯೇ

ಶ್ರಿಯ:ಪತ್ಯೆ.. ಲಕ್ಷ್ಮೀಪತಿ ನಾರಾಯಣ.. 

ಶ್ರೀ ಜಗನ್ನಾಥದಾಸಾರ್ಯರ ಹರಿಕಥಾಮೃತಸಾರದ ಮಂಗಳಾಚರಣ ಸಂಧಿಯಲ್ಲಿ ಶ್ರೀಹರಿಯನ್ನು ಕರುಣಿಸೆಮಗೆ ಮಂಗಳವ ಅಂತ ಹೇಳುವಾಗ ಶ್ರೀರಮಣಿಕಮಲಪೂಜಿತ ಚಾರುಚರಣ ಸರೋಜ ಎಂಬಲ್ಲಿ ಲಕ್ಷ್ಮೀಪತಿ

 ನಾರಾಯಣ

ಬ್ರಹ್ಮಸಮೀರವಾಣಿ... ಮುಖವಿನುತ.. ಎಂಬಲ್ಲಿ ಅವರು ಆರಾಧಿಸುವ. 

ಗುಣಪೂರ್ಣ.. ಇತ್ಯಾದಿ ಪ್ರಮೇಯಗಳು.. ಶ್ರೀ ಟೀಕಾಕೃತ್ಪಾದರ.. ನಿತ್ಯಾಗಣಿತಗುಣ.. ಎಂಬಲ್ಲಿ ಅನ್ವಯ.. 

ನೀರಜಭವಾಂಡೋದಯ ಸ್ಥಿತಿ ಕಾರಣನೇ ಕೈವಲ್ಯ ದಾಯಕ ನಾರಸಿಂಹನೇ 

ಎಂಬಲ್ಲಿ ಉದಯ.. ಸೃಷ್ಟಿಗೆ ಪ್ರದ್ಯುಮ್ನ ರೂಪ ಬರತದ.. 

ಸ್ಥಿತಿಗೆ ಅನಿರುದ್ಧ ರೂಪ.. ಲಯ ಕ್ಕ ಸಂಕರ್ಷಣ ಅದರ ಕೂಡ ನರಸಿಂಹ ರೂಪ.. ಕೈವಲ್ಯದಾಯಕ ವಾಸುದೇವ ರೂಪ 

ಅಂದ್ರ.. ನಾರಾಯಣ ಪ್ರದ್ಯುಮ್ನ ಅನಿರುದ್ಧ ಸಂಕರ್ಷಣ ವಾಸುದೇವ ರೂಪ ಪಂಚರೂಪ.. ಪಂಚವ್ಯೂಹ.. ನಾರಾಯಣ ಮೂಲರೂಪ ತಗೊಂಡರೆ ಚತುರ್ವ್ಯೂಹ ದ ರೂಪಗಳು.. 

ಒಟ್ಟು 5 ರೂಪಗಳು.. 

ಶ್ರೀ ಟೀಕಾಕೃತ್ಪಾದರ ಶ್ರೀಮನ್ ನ್ಯಾಯಸುಧಾ ಗ್ರಂಥದ ಪ್ರಥಮ ಶ್ಲೋಕದಲ್ಲಿ ಕೂಡ.. 

ಜಗಜ್ಜನ್ಮಸ್ಥೇಮಪ್ರಲಯ ರಚನಾಶೀಲರಚನಾಶೀಲವಪುಷೇ.. ಎಂಬಲ್ಲಿ ಸೃಷ್ಟಿ ಸ್ಥಿತಿ ಲಯ ಎಂಬಲ್ಲಿ ಪ್ರದ್ಯುಮ್ನ ಅನಿರುದ್ಧ ಸಂಕರ್ಷಣ ಬಂತು.. ಕಡೆಗೇ ಹರಯೇ ಎಂಬಲ್ಲಿ.. ಭವ ಹರಿಸುವ ಲಿಂಗದೇಹ ಹರಿಸುವ ಎಂಬಲ್ಲಿ ಮೋಕ್ಷ ಪ್ರದ ವಾಸುದೇವ ತಗೋಬೇಕು..

ಮಂಗಳವೀವನು ಸರ್ವೋತ್ತಮ ಶ್ರೀಮನ್ನಾರಾಯಣ ದೋಷದೂರ ಗುಣಪೂರ್ಣ ಅನಂತಕಲ್ಯಾಣಗುಣನಿಧಿ ಸ್ವತಂತ್ರ. ಕ್ಷರಾಕ್ಷರ ವಂದಿತ ಶ್ರೀಹರಿ.. 

ಅವನ ಸಾಕ್ಷಾತ್ ನಿತ್ಯ ತನ್ನ ಕರಕಮಲಗಳಿಂದ ಪೂಜಿಸುವ ಲಕ್ಷ್ಮೀದೇವಿಯು 

ಸಂತೈಸಲನುದಿನವು

ನಿರುಪಮಾನಂದಾತ್ಮಭವ... ವಂದಿಸುವೆ ಪಾಲಿಪುದು ಸನ್ಮತಿಯ

ಗುರು ಪವಮಾನ ಸಲಹೆಮ್ಮ

ಚತುರವದನನ ರಾಣಿ... ಸನ್ಮತಿಯ ಪಾಲಿಸಿ ನೆಲೆಸು ನೀಮದ್ವದನ ಸದನದಲಿ

ಮಾರುತನ ನಿಜಪತ್ನಿ.... ಶಾಸ್ತ್ರಗಳರುಪು ಕರುಣದಲಿ

ಹೀಗೆ ತಾರತಮ್ಯೋಕ್ತ ರಮಾಕಳತ್ರನ ದಾಸವರ್ಗಕೆ ನಮಿಸುತ್ತ ಮಂಗಳವಾಗಲಿ ಎಂದು ಅವರೆಲ್ಲರ ಅಂತರ್ಗತ ಶ್ರೀ ಹರಿಗೆ ಪ್ರಾರ್ಥಿಸಿದ್ದಾರೆ..

ಈ ಪಂಚರೂಪ ಪರಮಾತ್ಮನ ರೂಪಗಳ ವ್ಯಾಪಾರ ಬಹಳ.. ಶ್ರೀ ತರುಣಿವಲ್ಲಭನ ಪರಮ ವಿಭೂತಿ ರೂಪವ ಕಂಡಕಂಡಲ್ಲೀ ತೆರದಿ ಚಿಂತಿಸಿ ನೋಡು ಮನದಿ ಸಂಭ್ರಮದಿ ನೀತ ಸಾಧಾರಣ ವಿಶೇಷ ಸಜಾತಿ ನೈಜಾಹಿತವು ಸಹಜ ವಿಜಾತಿ ಖಂಡಾಖಂಡ ಬಗೆಗಳನರಿತು ಬುಧರಿಂದ. ಹಾಗಾದರೆ ಪರಮ ಭಾಗವತರು ಹರಿಯ ಭಕುತರ ಅನುಗ್ರಹವೂ ಬೇಕು.. ಜಗನ್ನಾಥ ವಿಠಲನ ಕರುಣ ಪಡೆವ ಮುಮುಕ್ಷು ಜೀವರು ಪರಮ ಭಾಗವತರನ್ನು ಕೊಂಡಾಡುವುದು ಪ್ರತಿದಿನವು..

ರಮಾಕಳತ್ರನ ದಾಸವರ್ಗಕೆ ನಮಿಪೆನನವರತ

ಬ್ರಹ್ಮಾದಿ ಸಕಲ ದೇವತೆಗಳು ಎರಡನೇ ಕಕ್ಷೆಯಿಂದ ಆರಂಭ ಮಾಡಿಕೊಂಡು ಸಕಲ ಕಕ್ಷೆಯಲ್ಲಿ ಬರುವ.. ದೇವತೆಗಳು..ತತ್ವಾಭಿಮಾನಿ ದೇವತೆಗಳು.. ಋಷಿಗಳು ಗಂಧರ್ವರು... 

ಬ್ರಹ್ಮಾದಿ ದೇವತೆಗಳು 

ವಿಶ್ವಾಮಿತ್ರಾದಿ ಋಷಿಗಳು 

ಮಾಂಧಾತಾ ಸೇರಿದಂತೆ ಭುವಿ ಭೂಭುಜರು.. 

ಮೇರು ಸೇರಿದಂತೆ ಸಕಲ ಅಚಲ ಪರ್ವತಗಳು. 

ಗಂಗಾದಿ ನದಿ ತೀರ್ಥಗಳು

ವೇದೋಪನಿತ್ ಪುರಾಣ ವೇದಾಂತ ತಂತ್ರ ಮಂತ್ರ ತರ್ಕ ಸ್ಮೃತಿ ಗಳು.. 

ಆದಿತ್ಯಾದಿ ನವಗ್ರಹಗಳು. ಮೇಷಾದಿ ರಾಶಿಗಳು ಅಶ್ವಿನಿ ಸೇರಿದಂತೆ ನಕ್ಷತ್ರಗಳು. 

ಯೋಗ ಕರಣಾದಿಗಳು

ಮಾಸ ಋತುಗಳು.. ಹಗಲು ರಾತ್ರಿ ಸಂಧ್ಯಾ ಕಾಲಗಳು. ಸಕಲ ಸ್ಥಾವರ ಜಂಗಮ.. ಇವುಗಳಿಗೆಲ್ಲ ಇರುವ ಅಭಿಮಾನಿ ದೇವತೆಗಳು ಇವರುಗಳಲ್ಲಿ ನೆಲೆನಿಂತ ಭಾರತೀರಮಣ ಮುಖ್ಯಪ್ರಾಣಾಂತರ್ಗತ ಸ್ವತಂತ್ರ ಮಂಗಳಪ್ರದ ಶ್ರೀ ಹರಿಯ ಅನುಗ್ರಹ ಸಂಪಾದನೆ ಅವಶ್ಯ

ಮಂಗಳಾಷ್ಟಕ ದಲ್ಲಿ ಬಂದಂತೆ.. 

ಅಭೀಷ್ಟಫಲದಾ.. ಸರ್ವಾಶುಭ ಧ್ವಂಸಕ

ಮಂಗಳಾಂಗನ ಮಂಗಳಪ್ರದನ ಮಂಗಳ ಚರಿತೆಯ ಶ್ರವಣ ಮನನಾದಿಗಳು ಮಂಗಳ ಪ್ರದಗಳು.. ಶ್ರೀ ಹರಿ.. 

ರಮಾ ಬ್ರಹ್ಮಾದಿಗಳು.. ಸಮಸ್ತ ದಾಸವರ್ಗದ ಅನುಗ್ರಹ ಸದಾ ಇರಲಿ.

end

 ‌(received in WhatsApp)

***


ಶ್ರೀ ಶ್ರೀದ ವಿಠಲರ ಫಲ ಶ್ರುತಿ ( 24 ಪದ್ಯಗಳು )

ಆದಿ :

ಹರಿಕಥಾಮೃತಸಾರ ಶ್ರೀಮ ।

ದ್ಗುರುವರ ಜಗನ್ನಾಥದಾಸರ ।

ಕರತಲಾಮಲಕವೆನೆ -

ಪೇಳಿದ ಸಕಲ ಸಂಧಿಗಳ ।।

ಪರಮ ಪಂಡಿತಾಭಿಮಾನಿಗಳು । ಮ ।

ತ್ಸರಿಸಲೆದೆಗಿಚ್ಚಾಗಿ ತೋರುವ ।

ದರಸಿಕರಿಗಿದು ಪೇಳಿ -

ಕೇಳುವದಲ್ಲ ಧರೆಯೊಳಗೆ ।। 1 ।।

ಶ್ರೀ ಸಹ್ಲಾದಾಂಶ ಜಗನ್ನಾಥದಾಸರ ಈ ಕೃತಿಯಲ್ಲಿ ಶಾಸ್ತ್ರ ಪ್ರಮೇಯಗಳನ್ನು ಅತ್ಯಂತ ಸ್ಫುಟವಾಗಿ  ನಿರೂಪಿಸಿರುವರು.

ತಾವೇ ಮಹಾ ಪಂಡಿತರು ಎಂದು ಅಹಂಕಾರ ಪಡುವವರಿಗೆ ಅಸೂಯೆ ಹುಟ್ಟಿಸುವಂಥಾ ಮಹೋನ್ನತ ಕೃತಿ.

ಭಗವನ್ಮಹಿಮೆ ತಿಳಿಸುವ ಅಭಿರುಚಿ ಇಲ್ಲದ ಜನಕ್ಕೆ ಹರಿಕಥಾಮೃತಸಾರವನ್ನು ತಿಳಿಸಕೂಡದು.

ಅಂತ್ಯ :

ದುಷ್ಟರೆನ್ನದೆ ದುರ್ವಿಷಯದಿಂ ।

ಪುಷ್ಟರೆನ್ನದೆ ಪೂತಕರ್ಮ ।

ಭ್ರಷ್ಟರೆನ್ನದೆ ಶ್ರೀದ -

ವಿಠ್ಠಲವೇಣುಗೋಪಾಲ ।।

ಕೃಷ್ಣ ಕೈವಿಡಿವನು ಸುಸತ್ಯ । ವಿ ।

ಶಿಷ್ಟ ದಾಸತ್ವವನು ಪಾಲಿಸಿ ।

ನಿಷ್ಠೆಯಿಂದಲಿ -

ಹರಿಕಥಾಮೃತಸಾರ ।। 24 ।।

ಕಾರಣಾಂತರದಿಂದ ದುಷ್ಟರಾಗಿದ್ದವರೂ, ದುರ್ವಿಷಯಗಳಲ್ಲಿ ಮುಳುಗಿದವರೂ, ಸತ್ಕರ್ಮಗಳನ್ನು ತೊರೆದು ಭಷ್ಟರಾದವರೂ ಸಹ ಪಶ್ಚಾತ್ತಾಪ ಪಟ್ಟು ಈ ಹರಿಕಥಾಮೃತಸಾರವನ್ನು ನಿಷ್ಠೆಯಿಂದ ಪಠಿಸ ತೊಡಗಿದರೆ ಶ್ರೀ ಕೃಷ್ಣ ಪರಮಾತ್ಮ ಅವರನ್ನು ನಿಶ್ಚಿತವಾಗಿಯೂ ಕೈ ಹಿಡಿಯುವನು ಮತ್ತು ತನ್ನ ಭಕ್ತ ವರ್ಗದಲ್ಲಿ ಸೇರಿಸಿಕೊಳ್ಳುವನು.

ಸ್ವಭಾವತಃ ಯೋಗ್ಯರಾದವರು ಕಾರಣಾಂತರದಿಂದ ಅಯೋಗ್ಯ ಕಾರ್ಯದಲ್ಲಿ ತೊಡಗಿದ್ದರೂ, ಈ ಶ್ರೀ ಹರಿಕಥಾಮೃತಸಾರ ಪಠನೆಯಿಂದ ಪರಿಶುದ್ಧರಾಗಿ ಶ್ರೀ ಹರಿ ಪರಮಾತ್ಮನ ಪರಮಾನುಗ್ರಹಕ್ಕೆ ಪಾತ್ರರಾಗುವರು ಎಂದು ತಾತ್ಪರ್ಯ!!

 ‌(received in WhatsApp)

***


ಹರಿಕಥಾಮೃತಸಾರ ಸಂಧಿ 1 ರಿಂದ 32  - ರಚನೆ ಜಗನ್ನಾಥ ದಾಸರು 

for saahitya click   ಹರಿಕಥಾಮೃತಸಾರ ಸಂಧಿ 1 to 32  

*********



 

No comments:

Post a Comment