Monday 11 November 2019

ಕೇಳೆ ಯಶೋದೆ ನಿನ್ನ ಬಾಲಕನಾಟಗಳೂ ankita pranesha vittala

by ಪ್ರಾಣೇಶದಾಸರು
ಕೇಳೆ ಯಶೋದೆ ನಿನ್ನ ಬಾಲಕನಾಟಗಳೂ |ಹೇಳಿಕೊಂಡರೆ ಸುಳ್ಳೇ ಕಾಣಿಸಿತಮ್ಮ ಪ

ನೀರೊಳಾಡುವನಲ್ಲೆ, ಪೋರರ ಕೂಡಿಕೊಂಡು |ಮಾರಿಯೆಂಬೊದೇನು ಸಾರಿ ಬಾಹೊದೆ 1

ಎಲ್ಲರಂತುಂಡು ಮನೆಯಲ್ಲಾಡಬಾರದೆ |ಕಲ್ಲೆತ್ತುವನೆ ಯಂಥ ಬಲ್ಲಿದನಂತೆ 2

ನಿಮ್ಮ ಹಿತಾರ್ಥನಾಗಿ ಸಮ್ಮೀಸಿ ಪೇಳಿದರೆ |ಬೊಮ್ಮನ ಮಗನಂತೆ ನಮ್ಮನ್ನೇ ಬೈವ 3

ಮೂರು ಕಣ್ಣವಪರನಾರೇರ ಮುಟ್ಟಲಾರ |ಊರೊಳಗಿವ ಬಲು ಮೀರಿದನಮ್ಮ 4

ಸಣ್ಣವನೆನಬೇಡ ನಿನ್ನ ಮಗನಗೋಪಿ|ಅನ್ನಿಥವಾಡೆವೆಮ್ಮ ಚಿನ್ನಗಳಾಣೆ 5

ಬೆಂಕಿಗಂಜದೆ ನಿರಾತಂಕದರೊಳಗಿಹ |ಮಂಕುತನವ ನೋಡೆ ಪಂಕಜನೇತ್ರೆ6

ಇನ್ನೊಂದು ಮಾತು ಕೇಳೆ ಮೊನ್ನೆ ಮೊನ್ನೆ ಒಬ್ಬ |ಹೆಣ್ಣಿನ ಕೊಂದನಲ್ಲೆ ಅನ್ಯಾಯ ನೋಡೆ 7

ಕಿತ್ತಿದನೊಂದು ಮರ ಮತ್ತೆರಡು ಮೂರೀದ |ಮತ್ತಗಜವ ಕೊಂದುನ್ಮತ್ತನ ನೋಡೆ 8

ಸದ್ಯ ಹೋಗಲೀನಿತು ಇದ್ದೊಬ್ಬವನು | ಅಪ್ರ-ಬುದ್ಧನಾಗಬಾರದು ಬುದ್ಧಿಯ ಹೇಳೇ 9

ಅಧಮರೊಡನೆನಿತ್ಯಕದನಮಾಡುವದೇಕೆ |ಮಧುಸೂದನನ್ನು ಒಳ್ಳೆ ಹದನದಲ್ಲೀಡೆ 10

ಕಾಣ ಬಂದದ್ದಾಡಲು ಪ್ರಾಣೇಶ ವಿಠಲಗೆ |ಹೀನ ತೋರುವದಮ್ಮಾ ಏನನ್ನಬೇಕೆ 11
*******

No comments:

Post a Comment