ಶ್ರೀವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ
(ಶ್ರೀಹರಿಯ ಸ್ಮರಣೆಯೇ ಸಕಲ ಭಯ ನಿವಾರಣ)
ರಾಗ ಕೇದಾರಗೌಳ
ಧ್ರುವತಾಳ
ಭಯವ್ಯಾಕೊ ಮನವೆ ನಿನಗೆ ಭಕ್ತರಾಧೀನ ನಳಿನ -
ನಯನ ನಾರಾಯಣ ಬೆಂಬಿಡದಲೆ
ಪಯಣ ಗತಿಯಲ್ಲಿ ಪಾಲಿಸಿಕೊಳ್ಳುತ ಬರುವ
ದಯವಾರಿಧಿ ದಾನಿ ತನ್ನ ಬಿರಿದು ಬಿಡದೆ
ಬಯಲೇನು ಗಿಡವೇನು ಅದ್ರಿ ಕಾನನವೇನು
ತ್ರಯ ಲೋಕದೊಳಗೆ ಹರಿಯೆ ನಮ್ಮ ಸ್ವಾಮಿ
ಜಯವೆ ಕೊಡುತಲಿಪ್ಪ ತನ್ನ ಪಾದವಾ -
ಶ್ರಯ ಮಾಡಿದ ಮನುಜಂಗೆ ತಪ್ಪಗೊಡದೆ
ಹುಯಲಿಟ್ಟ ಕರಿರಾಜನ್ನ ಆಪತ್ತು ಬಿಡಿಸಿದ
ಬಯಸಿದಂತೆ ಬಂದು ಕಾವ ವನಧಿ -
ಶಯನ ಸರ್ವಾಂತರ್ಯಾಮಿ ದೈತ್ಯಮರ್ದನ ವಿ -
ಜಯ ಸಖ ಸುಖಪೂರ್ಣ ಮನುಜ ಲೀಲಾ
ಪ್ರಿಯವಂತನಾಗಿ ನಮ್ಮನು ಸಾಕುವನು ಹೃ -
ದಯದೊಳಗೆ ತನ್ನನು ತೋರಿಕೊಳುತಾ
ಭಯದೂರ ಭವ ಬಂಧನ ವಿಮೋಚನ
ವಿಯದ್ಗಂಗಾ ಪಿತ ನಮ್ಮ ವಿಜಯವಿಟ್ಠಲರೇಯ
ಸುಯತಿಯ ಮನೋಹರ ಪರಮ ವಿನೋದ ಮೂರ್ತಿ ॥ 1 ॥
ಅಟ್ಟತಾಳ
ಕುರು ಪಾಂಡವರ ಸಂಗರದೊಳು ಪಕ್ಕಿಯ
ಮರಿಯ ಕಾಯಿದ ನೋಡೈ ಧರಣಿಯೊಳಗೆ
ಹರಿಯ ಕರುಣಾಳು ತನಕೆ ಸರಿಯಿಲ್ಲ ಇಲ್ಲ
ಸುರರಿಗೆ ಸೋಜಿಗವೊ ಪರಮ ಪುರುಷ
ಹರಿ ವಿಜಯವಿಟ್ಠಲರೇಯ ಶರಣ ಜನರ
ಪೊರೆವ ಬಿರಿದು ಬಿಡನು ಕಾಣೊ ॥ 2 ॥
ತ್ರಿವಿಡಿತಾಳ
ತನ್ನ ಉನ್ನತ ಭಕ್ತ ಮಾರುತ ದೇವನ್ನ
ಇನ್ನೀ ಸಂಕಲ್ಪಕ್ಕೆ ಲೇಶ ಕೊರೆತೆ ಮಾಡಾ
ಮುನ್ನೆ ರುದ್ರಾದಿಗಳು ಮಾಡಿದ ಸಂಕಲ್ಪ
ಖಿನ್ನ ಮಾಡಿ ಬಿಡುವ ನಿಮಿಷದೊಳಗೆ
ಘನ್ನ ಪರಾಕ್ರಮ ಕಾವ ಕರುಣಿತನಕೆ
ಮನೊ ವಾಚ ಕಾಯ ಎಣಿಸೆ ಸಿಗದು
ತನ್ನ ಇಚ್ಛೆ ಬಂದ ತೆರೆದಂತೆ ಮಾಡಿಸುವ
ಅನ್ಯರನು ಲೆಕ್ಕಿಸ ಕ್ಷಣವಾದರು
ಪನ್ನಗಧರ ಮಿಕ್ಕ ಸುರರೆಲ್ಲ ಅವರಗಳ
ಚನ್ನಾಗಿ ಕೊಡುವಾಗ ಹರಿ ಪ್ರೇರಣೆ
ಎನ್ನಿಂದ ಕೊಡಿಸಿದನೆಂದು ತಿಳಿದರೆ ಅವರ
ಮನ್ನಿಸಿ ಪಾಲಿಸುವ ವಿನಯದಿಂದ
ಗಣ್ಯ ಇಲ್ಲದೆ ತಮ್ಮ ಸ್ವಾತಂತ್ರದಲಿ ಅವರ
ಉನ್ನತೋನ್ನತ ಕೊಡಲು ಕೆಡಿಸಿ ಬಿಡುವ
ಅನಂತ ಕಲ್ಪಕ್ಕೆ ತನ್ನದೇ ಧೊರೆತನ ಹಿ -
ರಣ್ಯ ಕೇಶಾದಿಗಳ ವತ್ತಿ ಆಳ್ವಾ
ಬಣ್ಣಿಸಲಳವಲ್ಲ ಲಕುಮೀಕಾಂತನ ಮಹಿಮೆ
ಅನ್ಯಾಯದವನಲ್ಲ ನಿರ್ದೋಷನೋ
ನಿನ್ನೊಳಗೆ ನೀನು ತಿಳಿದು ಭೀತಿಯನು ಬಿಡು
ಬಿನ್ನಾಹವನೆ ಮಾಡು ಮನೋಧರ್ಮವ
ಆಣೋರಣಿ ಮೂರ್ತಿ ವಿಜಯವಿಟ್ಠಲ ಪ್ರ -
ಸನ್ನವದನ ತನ್ನ ನಂಬಿದವರ ಬಿಡನೋ ॥ 3 ॥
ಅಟ್ಟತಾಳ
ನಂಬು ನಂಬು ಶ್ರೀಹರಿ ಪಾದಾಂಬುಜ
ನಂಬಿದ ಜನರಿಗೆ ಆವಾವ ಕಾಲಕ್ಕೆ
ಇಂಬಾಗಿ ಕ್ಷೀರಾಂಬುಧಿ ತಟಾಕದಲಿ
ತಂಬಾಲತನದಿಂದ ಇದ್ದಂತೆ ಕಾಣಿರೋ
ಹಂಬಲಿಸು ಹಗಲಿರಳು ನಿನ್ನೊಳಗೆ ಕು -
ಟುಂಬಿ ಪಾಲಕ ನಾನಾ ವಿಚಿತ್ರ ಮಹಿಮನ್ನ
ಬೆಂಬಿಡದೆ ನಂಬು ನಂಬು ಭಯ -
ವೆಂಬೋದೆ ನಿನಗಿಲ್ಲ ಲೇಶ ಮಾತುರ ಕೇಳು
ಕುಂಭಿಣಿ ಪತಿ ನಮ್ಮ ವಿಜಯವಿಟ್ಠಲರೇಯ
ಡಿಂಬನೊಳಗೆ ನಿಂದು ಪಾಲಿಸುವನು ನಿತ್ಯ ॥ 4 ॥
ಆದಿತಾಳ
ಧರಣಿರಮಣ ದಾಮೋದರ ವರಪ್ರದ ವಾರಿದವರ್ನ
ಸರಸಿಜನಾಭ ಸರ್ವೋತ್ತಮ ಶರಧಿಶಯನ ಶರಣವತ್ಸಲ
ಪರಮಪುರುಷ ಪಾವನ ಹರಿ ನಾರಾಯಣ ಹಯಗ್ರೀವ
ಸುರಾರ್ಚಿತ ಸುಖಚರಣ ಗರುಡವಾಹನ ಗಂಗಾಜನಕ
ಅರವಿದೂರ ಅನಂತರೂಪ ಸಿರಿಧರ ವಿಜಯವಿಟ್ಠಲರೇಯನ
ಸ್ಮರಣೆ ಮಾಡೆಲೊ ಈಪರಿ ನಿನಗೆ ಕರಣಶುದ್ಧಿ ಭಯಗಳಿಲ್ಲವೊ ॥ 5 ॥
ಜತೆ
ಜಯಶೀಲ ವಿಜಯವಿಟ್ಠಲನಂಘ್ರಿ ಬಿಡದಿರು
ಭಯವೆ ಕಾಣಿಸದಿದಕೊ ಎಲ್ಲಿದ್ದರಾದರೂ ॥
https://drive.google.com/file/d/1lf-jCNX3j3o-aFGLdbp9af3lTY1NI5e-/view?usp=drivesdk
***
ಶ್ರೀ ವಿದ್ಯಾಪ್ರಸನ್ನತೀರ್ಥರ ಕೃತಿ
॥ಹೆಣ್ಣನೊಪ್ಪಿಸುವ ಪದ॥
ರಾಗ : ಶಹನ ಆದಿತಾಳ
ಒಪ್ಪಿಸುವೆವು ಮಗಳ ಸಂತೋಷದಿ॥ಪ॥
ತಪ್ಪಿ ನಡೆವುದಿಲ್ಲ ಸ್ವಪ್ನದಲ್ಲೂ ನಿಮ್ಮ
ಅಪ್ಪಣೆ ಮೀರಳು ಸುಗುಣಶಾಲಿನಿಯು॥ಅ.ಪ॥
ಹರಿಗುರುಗಳ ಸೇವೆಯ ಬಲದಿಂದಲೆ
ಅರಗಿಣಿ ಜನಿಸಿದಳು ಉದರದಿಲಿ
ಕರಗತವಾಗಲು ದೊರೆಯಿತು ಭಾಗ್ಯವೆಂ-
ದರಿತೆವು ಕ್ಲೇಶವ ಮರೆತವು ಸುಲಭದಿ॥೧॥
ಓದು ಬರಹಗಳ ಕಲಿತಳು ಬಾಲ್ಯದಿ
ಮಾದರಿ ಮಗಳು ಎಂದೆನಿಸಿದಳು
ಸಾಧು ಸ್ವಭಾವವು ಸ್ವಾದು ನುಡಿಯು ಸದಾ
ಸೋದರಿ ಭವದಿ ನೋಡಿದರೆಲ್ಲರು॥೨॥
ಒಲೆಯ ಸಾರಿಸುವಳು ನೆಲವ ಗುಡಿಸುವಳು
ಕೆಲಸಗಳೆಲ್ಲವನರಿತಿಹಳು
ತಿಳಿಗನ್ನಡದಲಿ ದಾಸರಪದಗಳ
ಬಲುಮಧುರ ಧ್ವನಿಯಿಂದ ಪಾಡುವಳು॥೩॥
ರೀತಿ ನೀತಿಗಳನು ಅರಿತಿರುವಳು ಬಲು
ಕೂತು ಕಾಲ ಕಳೆಯುವಳಲ್ಲ
ಮಾತಿಗೆ ಮರುಳಾಗುವ ಹೆಣ್ಣಲ್ಲವು
ಖ್ಯಾತಿಯ ತರುವಳು ನಿಮ್ಮ ಸಂಸಾರಕೆ॥೪॥
ಒಡವೆ ವಸನಗಳ ಸಡಗರ ಬಯಸಳು
ಬಡಜನರನು ಕಂಡರೆ ಮರುಕ
ಒಡೆಯನ ಪ್ರೀತಿಯೆ ಒಡವೆ ವಸನಗಳೆಂ-
ದಡಿಗಡಿಗೆಮ್ಮಲಿ ನುಡಿಯುತಲಿದ್ದಳು॥೫॥
ಇಂಥದು ಬೇಕೆಂಬ ಚಿಂತೆಯನರಿಯಳು
ಸಂತತ ನಗುಮೊಗದ ಅರಗಿಣಿಯು
ಅಂತರಂಗ ಬಹಿರಂಗಗಳಲಿ ಬಲು
ಶಾಂತಿಯ ಜೀವನವ ಬಯಸುವಳು॥೬॥
ದಿಟದಲಿ ಪ್ರೇಮವು ಸಟೆಯಲಿ ದ್ವೇಷವು
ಹಟಮಾರಿಗಳನು ಗಮನಿಸಳು
ಕಟುವಚನಗಳನು ಆಡಳು ಎಂದಿಗು
ಎಟುಕದ ಕಾರ್ಯಕೆ ಯತ್ನವ ಮಾಡಳು॥೭॥
ಮಿತಭಾಷಿಣಿಯಾದರೂ ಕಾರ್ಯದಲತಿ
ಚತುರಳು ಗೃಹಿಣಿಯ ಧರ್ಮದಲಿ
ಮಿತಿಮೀರಳು ನಿಮ್ಮ ಹಿತ ಬಯಸುವಳತಿ
ಮತಿಮಂತಳು ಇದು ಸ್ತುತಿನುಡಿಯಲ್ಲವು॥೮॥
ಎಮ್ಮಯ ಮಗಳನು ನಿಮ್ಮನೆಗೊಪ್ಪಿಸಿ
ಸಮ್ಮತಿ ಕೊಡಿರೆಂದು ಬೇಡುವೆವು
ಬ್ರಾಹ್ಮಣ ಗೋಷ್ಠಿಯೆ ಸಾಕ್ಷಿ ಇದಕೆ ಇನ್ನು
ನಿಮ್ಮ ನಮ್ಮ ಕುಲ ಉದ್ಧಂತವಾಗಲಿ॥೯॥
ತಾಯಿ ಕರುವ ಕಾಣದೆ ಪರಿದಾಟವು
ತಾಯಿಯರೆಲ್ಲರ ಅನುಭವವು
ಬಾಯಿ ಬರದು ವರ್ಣಿಸಲೀ ಅನುಭವ
ನ್ಯಾಯವೊ ಮಾಯವೋ ಶ್ರೀಹರಿ ಬಲ್ಲನು॥೧೦॥
ಕೊಟ್ಟ ಹೆಣ್ಣು ಕುಲ ಸೇರಿತು ಎನ್ನುವ
ಶಿಷ್ಟ ವಚನಗಳ ಅರಿತೆಹೆವು
ಶ್ರೇಷ್ಠ ಪ್ರಸನ್ನನ ಮೋಹ ಜಾಲದಿಂದ
ಇಷ್ಟು ವಚನಗಳು ಕ್ಷಮಿಸುವುದೆಮ್ಮನು॥೧೧॥
https://drive.google.com/file/d/1lh5lEewDXsD8NZ_us-hg9Etlfe890sQc/view?usp=drivesdk
****
ಶ್ರೀವಿದ್ಯಾಪ್ರಸನ್ನತೀರ್ಥರ ಕೃತಿ
ರಾಗ : ಸಿಂಧುಭೈರವಿ ಖಂಡಛಾಪು
ಚೇಷ್ಟೆಯನು ಮಾಡದಿರೊ ಕೃಷ್ಣ ನೀ ಪರಿ ಬಹಳ
ನಿಷ್ಠುರದ ವಚನಗಳನಾಡುವರು ಜನರು॥ಪ॥
ಎಷ್ಟು ತಪವನೆ ಮಾಡಿ ಪಡೆದೆನೋ ನಾ ನಿನ್ನ
ಕಷ್ಟವಾಯಿತು ನಿಂದೆ ನುಡಿಯ ಕೇಳುವುದು॥ಅ.ಪ॥
ಕೊಂಡು ಪೋಗಲಿ ಬೆಣ್ಣೆ ಪಾಲು ಧದಿ ಭಾಂಡಗಳ
ದುಂಡು ನಗುಮೊಗ ಚೆಲುವ ನಿನ್ನ ಮಗನು
ಕಂಡರೆಮ್ಮನು ಮೋರೆ ತಿರುಗಲೇಕೆ ಇಂಥಾ
ಪುಂಡು ಹುಡುಗನೆ ನಿನ್ನ ಮಗನೆಂದು ದೂರುವರು॥೧॥
ಮುರಳಿ ನಾದವ ಕೇಳಿ ಮರೆತು ಮೇವನು ಎಮ್ಮ
ತುರುಕರುಗಳೆಲ್ಲ ಬಲು ಕೃಶವಾದವಮ್ಮ
ಹರಿವ ಯಮುನಾಜಲದೊಳ್ ಆದ ಅವಿವೇಕವನು
ಅರುಹಲೆಮ್ಮಯ ಮನವು ಜರಿವುದೆಂದಾಡುವರು॥೨॥
ಸಂಸಾರ ಮೋಹವನು ತೊರೆದು ಎನ್ನಲಿ ಮನದ
ಸಂಶಯವ ಬಿಡಿ ಬಿಡಿ ಪ್ರಸನ್ನ ರಾಗಿರಿ ಎಂದ
ಧ್ವಂಸವಾಯಿತು ಎಮ್ಮ ಅಭಿಮಾನ ಇವ ಚಂದ್ರ-
ವಂಶಕೆಂತಹ ಕೀರ್ತಿ ತಂದನೆಂದಾಡುವರು॥೩॥
https://drive.google.com/file/d/1ltNzmKnXrhDmKo5_QmF3MQQ0qdGGhEu1/view?usp=drivesdk
****
ಶ್ರೀವಿಜಯದಾಸಾರ್ಯ ವಿರಚಿತ
ಶ್ರೀ ದತ್ತಾವತಾರ ಸ್ತೋತ್ರ ಸುಳಾದಿ
( ಯೋಗೀ ಯೋಗಶಕ್ತಿಪ್ರದನಾದ , ಪ್ರಣತರಿಗೆ ಪ್ರಣವ ಪ್ರತಿಪಾದ್ಯನಾದ , ಸಜ್ಜನರಿಗೆ ಸತ್ಕರ್ಮ ಪ್ರದತ್ತನಾದ , ದತ್ತನಾಮಕ ಪರಮಾತ್ಮನೇ ಜಯತು ಜಯತು.
ಭಕ್ತಾಭೀಷ್ಟದತ್ತಾ , ಸದಾ ನಿನ್ನ ಸ್ಮರಣೆಯನ್ನಿತ್ತು , ಸದ್ವಿದ್ಯೆಯನ್ನು ದಯಪಾಲಿಸಿ , ಈ ಭವಬಂಧನದಿಂದ ಬಿಡುಗಡೆ ಮಾಡು. )
ರಾಗ ಮಲಯಮಾರುತ
ಧ್ರುವತಾಳ
ದತ್ತಾ ಯೋಗೀಶ ಯೋಗಿ ಯೋಗಶಕ್ತಿಪ್ರದ
ದತ್ತಾ ಪ್ರಣತರಿಗೆ ಪ್ರಣವಪ್ರತಿಪಾದ್ಯ
ದತ್ತ ಸ್ವತಂತ್ರದಿಂದ ಜಗಕೆ ಸತ್ಕರ್ಮ ಪ್ರ -
ದತ್ತ ಮಾಡಿಕೊಡುವ ದೀಪ್ತಾ ಚೂಡಾ
ದತ್ತಾ ಚೀರಾಂಬರಗೇಯಾ ವಲ್ಕಲವಾಸ
ದತ್ತಾ ದುರ್ವಾಸ ಚಂದ್ರ ಸಹಭವ ಭವ್ಯಹಂಸಾ
ನಿತ್ಯ ಪ್ರಕೃತಿ ರಮಣಾ ಮೂಲಮೂರ್ತಿ
ಅತ್ರಿನಂದನ ಕೃಷ್ಣಾಂಜನ ಬ್ರಹ್ಮಸೂತ್ರ ಪ -
ವಿತ್ರ ಧಾರಣದೇವಾ ದೇವವಂದ್ಯಾ
ಸತ್ಯಕ್ರಿಯಾ ಸತತ ಸಾವಿರ ಹಸ್ತವರದ
ದೈತ್ಯ ಮೋಹಕ ರೂಪಾ ಘನ ಪ್ರತಾಪಾ
ಅತ್ಯಂತ ಜಗದ್ಭರಿತಾ ಜನನಾದಿ ಶೂನ್ಯ ಸ -
ರ್ವೋತ್ತಮ ಮಹಾ ಪ್ರಭುವೆ ಸ್ವಪ್ರಭಾವಾ
ಕೀರ್ತಿ ಪಾವನವಪುಷ ವೈಕುಂಠವಾಸ ತಪೋ -
ವಿತ್ತ ಸುಚಿತ್ತಾ ಸಚ್ಚಿದಾನಂದಾತ್ಮಾ ಉತ್ತುಂಗ -
ವ್ಯಾಪ್ತ ಗೋಪ್ತಾ ಪ್ರಾಪ್ತಾ ಸಂತೃಪ್ತಾ
ತಪ್ತಾಂಚನಗಾತ್ರಾ ನಿರ್ಜರಾಪ್ತಾ
ಚಿತ್ರ ವಿಚಿತ್ರ ಕರ್ಮ ವಿಜಯವಿಟ್ಠಲರೇಯಾ
ದತ್ತಾವತಾರ ಭಗದತ್ತಾಯುಧಧಾರಿ ॥ 1 ॥
ಮಟ್ಟತಾಳ
ದತ್ತ ಜ್ಞಾನದತ್ತಾ ದತ್ತ ಭಕುತಿದತ್ತಾ
ದತ್ತ ಶ್ರವಣದತ್ತಾ ದತ್ತ ಮನನದತ್ತಾ
ದತ್ತ ದಾನದತ್ತಾ ದತ್ತಾ ಸಾಧನದತ್ತಾ
ದತ್ತ ಚಿತ್ತದತ್ತಾ ದತ್ತವಿರಕ್ತಿ ದತ್ತಾ
ದತ್ತ ಮಾರ್ಗದತ್ತಾ ದತ್ತಾ ದತ್ತಾ ಇಷ್ಟದತ್ತಾ
ದತ್ತ ಸರ್ವದತ್ತಾ ದತ್ತ ಭೋಗದತ್ತಾ
ದತ್ತಾನಂದದತ್ತಾ ದತ್ತ ತನ್ನನೆದತ್ತಾ ದತ್ತಾತ್ರೇಯ
ದತ್ತ ಮೂರುತಿ ನಮ್ಮ ವಿಜಯವಿಟ್ಠಲರೇಯಾ
ದತ್ತನೆಂದವನಿಗೆ ದತ್ತ ಮಗನಾಹಾ ॥ 2 ॥
ತ್ರಿವಿಡಿತಾಳ
ಎಣಿಸಿ ಪೇಳುವನಾರು ನಿನ್ನ ಸ್ವಭಾವವಾ
ಅನುಸೂಯ ವರಸೂನು ಕರ್ದಮ ದೌಹಿತ್ರ
ಗುಣಸಿ ಕೊಂಡಾಡಿದ ಜನರಿಗೆ ಭೀತಿ ಕರ್ಮಾ
ಜನಿಸುವ ಬಗೆಯಿಲ್ಲ ಇಳಿಯೊಳಗೆ
ನೆನೆಸಿದವರ ಮಸ್ತಕದಲ್ಲಿ ಸುಳಿವ
ಮನಸಿಜ ಜನಕ ಜಗನ್ಮೋಹನಾ
ಕನಸಿನೊಳಾದರೂ ಕಳವಳಿಕಿಯಿಂದಾಡೆ
ಮನ ಸೂರೆಗೊಡುವಾನು ಮಂದಹಾಸಾ
ಅನುಸರಿಸಿ ತಿರುಗುವ ಭಕ್ತರೊಡನೆ ದತ್ತಾ
ಘನ ಶುದ್ಧಾತ್ಮನು ಕಾಣೊ ಗೌರವರ್ಣಾ
ಉಣಿಸುವ ತನ್ನಯ ನಾಮಾಮೃತವ ವ -
ಕ್ಕಣಿಸುವಂತೆ ನಿತ್ಯ ಪ್ರೇರಿಸುವಾ
ಜನ ಸುಮ್ಮನಿರದಲೆ ಜಪಿಸಿ ಈತನ ನಾಮಾ
ಮಣಿ ಸಾರಿಸಾರಿಗೆಲಿ ಎಣಿಕೆ ಗೈಯೊ
ಗುಣ ಸಾರಾತರ ನಮ್ಮ ವಿಜಯವಿಠ್ಠಲರೇಯಾ
ಮನಸಿನೊಳಗೆ ನಿಲುವಾ ನಂಬಿದವಗೆ ದತ್ತಾ ॥ 3 ॥
ಅಟ್ಟತಾಳ
ಯೋಗಾಸನಾ ಅಕ್ಷಮಾಲಾ ಜ್ಞಾನ ಮುದ್ರ
ಯೋಗಶಾಸ್ತ್ರ ಕರ್ತ ವರ್ತಮಾನಕಾಲ
ಭೂಗೋಲ ಚರಿಸುವ ಬ್ರಹ್ಮಚರ್ಯಧಾರ್ಯಾ
ಶ್ರೀಗುರು ಅಜಗುರು ಸರ್ವಜಗದ್ಗುರು
ಭಾಗೀರಥಿ ತೀರ ಬದರಿನಿವಾಸ ಅ -
ಯೋಗ ಕರ್ಮಹಾರಿ ದತ್ತ ದಾನವರಿಗೆ
ಭೋಗ ಶಾಯಿ ಮುಕ್ತಾಭೋಗ ಭಾಗಾಧೇಯಾ
ಭಾಗ ತ್ರಯಗುಣ ನಾಶ ಗುಣಾಂಬುಧಿ
ರಾಗವಿದೂರ ಸರಾಗ ಮಣಿ ನಖಾ
ಪೂಗರ್ಭನೆನಿಸುವ ಈ ತನ್ನ ತಾತನ್ನ
ಆಗಸದಲಿ ನೋಡಿ ತಾತನ್ನ ಐಶ್ವರ್ಯ
ಯಾಗಾ ತೀರ್ಥಯಾತ್ರಿ ನಾನಾ ಪುಣ್ಯ ಸಂ -
ಯೋಗದಿಂದಧಿಕ ದತ್ತನ ಸ್ಮರಣೆ ಒಮ್ಮೆ
ಜಾಗು ಮಾಡದೆ ಮಾಡೆ ಮುದದಿ ಬಂದೊದಗೋದು
ಜಾಗರತನದಿಂದ ಮಹಪುಣ್ಯ ಪ್ರತಿದಿನ
ಸಾಗರ ಮಂದಿರ ವಿಜಯವಿಟ್ಠಲ ಭವ -
ರೋಗದ ವೈದ್ಯ ವೈಲಕ್ಷಣ್ಯ ॥ 4 ॥
ಆದಿತಾಳ
ಜಯ ಜಯವೆಂದು ದತ್ತಮಂತ್ರವ
ನಯಮತಿಯಿಂದ ಜಪಿಸಲು
ತ್ರಯ ಪರಿಚ್ಛೇದಕ ಛೇದನಾ
ಭಯಪರ್ವತ ವಿಭೇದನಾ
ಅಯುತದುರಿತ ರೋದನಾ
ಕ್ಷಯರಹಿತ ಸನ್ಮೋದನಾ
ಜಯಜಯವೆಂದು ದತ್ತಾ ಮಂತ್ರಾ
ಪ್ರಿಯವಾಗಿಪ್ಪದು ಗತಿಲಬ್ಧಾ
ಲಯವಾಗುವದು ಪ್ರಾರಬ್ಧಾ
ಜಯಜಯವೆನ್ನನೊ ಬಲುಲಬ್ಧಾ
ತ್ರಯ ಜಗದೊಳವನೆ ತಬ್ಧಾ
ಸುಯತಿಗಳು ನುಡಿದ ಶಬ್ಧಾ
ಪಯಳಾಯಂತಿದೆ ನೋಡಬ್ಧಾ
ದಯಪೂರ್ಣ ನಮಗೆ ವಿಜಯವಿಠ್ಠಲ ದತ್ತ
ಬಯಕೆ ಕೊಡುವದು ಒಲಿದು ಬಿಡಬ್ಧ ಅಬ್ಧಾ ॥ 5 ॥
ಜತೆ
ದತ್ತ ಪ್ರಧಾನ ವಿದ್ಯಾ ಸಪ್ರದಾತಾ ಪಾರ -
ತಂತ್ರರಹಿತ ವಿಜಯವಿಟ್ಠಲ ಪ್ರಜ್ಞಾ ॥
https://drive.google.com/file/d/108GMUy5U-frSUn4z1_97Ft6Bi9Eq2t-U/view?usp=drivesdk
***
No comments:
Post a Comment