ankita ಮೋದವಿಠಲ
ರಾಗ: [ಹಂಸಾನಂದಿ] ತಾಳ: [ಆದಿ]
ಮಂತ್ರಾಲಯದೊಳು ನಿಂತಿಹ ಯತಿವರ-
ರೆಂತು ಬಣ್ಣಿಸಲಿ ಎನ್ನಳವೆ ಪ
ಯಂತ್ರೋದ್ಧಾರಕ ಪ್ರಾಣಪತಿಯೆ ತಾ
ನಿಂತು ನುಡಿಸುವನು ಕೇಳ್ಮನವೆ ಅ.ಪ
ಮೂಲರಾಮನಾರಾಧಕ ಗುರು ಶ್ರೀ-
ಲೋಲನ ಸನ್ನಿಧಿವುಳ್ಳವರು
ಕಾಲಮೀರದಲೆ ಜಪಗಳಮಾಳ್ಪರು
ಸ್ಥೂಲರಕಣ್ಣಿಗೆ ಕಾಣಿಸರು 1
ಮಧ್ವಮತಾಬ್ಧಿಗೆ ಚಂದ್ರಮರಿವರು
ಅದ್ವೈತರಿಗೆದೆಕಿಚ್ಚಹರು
ಶುದ್ಧಪದ್ಧತಿಯು ತಪ್ಪಲಿಗೊಡದೆ
ಈಧರೆ ಸುಜನರ ಸಲಹುವರು 2
ಪರಿಮಳಗ್ರಂಥದಿ ಪಾರಂಗತರಿವ-
ರರವಿದೂರನಿಗೆ ಅತಿಪ್ರಿಯರು
ಸರುವದ ಶ್ರೀಶನಅರ್ಚಿಸಿ ಮೆಚ್ಚಿಪ
ಗರುವಿಕೆಯಲಿ ತಾವಿರುತಿಹರು 3
ಕೃತಯುಗದಲಿ ತಾ ಹುತವಹಗುಣಿಸಿದ
ಸುತಪದ ಸ್ಥಳವೆಂದ್ಹರುಷದಲಿ
ಸಥಿಯಿಂದ ಈ ಮತಿವಂತರು ಶಾ-
ಶ್ವತವಾಗಿರುವರೀ ಕ್ಷೇತ್ರದಲಿ 4
ಪ್ರತಿಪ್ರತಿವತ್ಸರ ಶ್ರಾವಣಮಾಸದಿ
ದ್ವಿತೀಯ ಕೃಷ್ಣಸುಪಕ್ಷದಲಿ
ಮಿತಿಯಿಲ್ಲದೆ ಜನ ಬಂದು ಪೂಜಿಪಾ-
ದ್ಭುತ ಮಹಿಮೆಂತೆಂತೋರ್ಣಿಸಲಿ 5
ಸಂತರು ಬಹುಜನ ನಿಂತರ್ಚಿಸುತ
ಅಂತರಂಗದಲಿ ಶ್ರೀಹರಿಯ
ತಂತುನಾವರಿಯೆವು ಎಂತೊಲಿದಿಹ ನಿವ-
ರಂತು ಬಲ್ಲವರು ಆರಯ್ಯಾ 6
ಸರ್ವತೀರ್ಥಗಳು ಸರ್ವಕ್ಷೇತ್ರಗಳು
ಸರ್ವದೇವತೆಗಳು ಸನ್ನಿಧರು
ಸರ್ವಜ್ಞರು ತಾವು ಪೂರ್ಣವಮಾಡಿಸಿ
ಶರ್ವವಂದ್ಯನ ಕೂಡಿರುತಿಹರು 7
ಆದಕಾರಣ ಈ ಯಾತ್ರೆಯೆ ಮುಖ್ಯವು
ಸದಮಲರಾಗಿ ಪೋಗುವರಾ
ಬದಿಯಲಿದ್ದು ಹರಿಸದನದ ಸುಖವನು
ಒದಗಿಸಿ ಬೇಗನೆಕೊಡುತಿಹರು 8
ಇಂತೀಪರಿಯಲಿ ಗುರುಗಳ ಮಹಿಮೆಯ
ಸಂತತಕೊಂಡಾಡುವ ಜನರ
ಕಂತುಪಿತ ಶ್ರೀಮೋದವಿಠಲನು
ಅಂತವಿಲ್ಲದೆ ರಕ್ಷಿಪನವರ 9
***
No comments:
Post a Comment