ankita ಮಂಗಳಾಂಗಹರಿವಿಠಲ
ರಾಗ: ಮಣಿರಂಗು ತಾಳ: ಆದಿ
ಎಂಥಾ ಪುಣ್ಯವೆನಂದು ಎಂಥಾನಂದವೆ ಇಂದು
ಇಂಥಾ ಸಂತರ ಕಂಡೆನೆ ಪ
ಉನ್ನಂತ ಬೃಂದಾವನದಲ್ಲಿ ಕುಳಿತ
ಅನಂತ ಮಹಿಮರ ಕಂಡೆನೆ ಅ.ಪ
ಮಂತ್ರಾಲಯದ ಮಣ್ಣನೆ ತುಳಿದು
ಮಂತ್ರಮುಗ್ದರಾಗಿ ನಿಂದು
ಮಂತ್ರ ಸ್ತೋತ್ರಗಳನುಚ್ಚರಿಸುತ್ತ ಬಂದು
ಮಂತ್ರಾಕ್ಷತೆ ಸ್ವೀಕರಿಪ ಭಕ್ತರ ಕಂಡೆನೆ 1
ತುಂಗಭದ್ರ ನದಿಯಲ್ಲಿ ಸ್ನಾನವ ಮಾಡಿ
ಮಂಗಳ ಮಹಿಮರ ಮನದಿ ಕೊಂಡಾಡಿ
ಮಂಗಳೋತ್ಸವವ ಮನದಣಿಯ ನೋಡಿ
ಕಂಗಳು ತುಂಬಿ ಬಂತಾನಂದದಲೋಲ್ಯಾಡಿ 2
ಮಂಚಾಲಮ್ಮನ ಕಂಡು ಮುದದಿ ಸಾಲಲಿ
ಬಂದು ಮುನಿಗೆದುರಾದ ಮಾರುತಿಯ ಕಂಡೆನೆ
ಮಂಗಳ ಅಭಿಷೇಕ ಅಲಂಕಾರವ ಕಂಡು
ಮಂಗಳಾಂಗ ಹರಿ ಕಿಂಕರನ ಕಂಡೆನೆ 3
ನೆತ್ತಿ ಮೇಲೆ ಲಕ್ಷ್ಮೀನರಸಿಂಹರ ಕಂಡೆ
ಮತ್ತೆ ಹೃದಯದಲ್ಲಿ ರಾಮರ ಕಂಡೆನೆ
ಚಿತ್ತವ ಸೆಳೆವ ರಜತ ಕವಚ ಕಂಡೆ
ಉತ್ತಮ ಕಾವಿಹೊದ್ದ ಯತಿವರರ ಕಂಡೆನೆ 4
ಬದಿಯಲಿ ಶ್ರೀಗಳ ಪೂಜಾ ವೈಖರಿ ಕಂಡೆ
ತುದಿಗಾಲಲಿ ನಿಂತ ಭಕ್ತವೃಂದವ ಕಂಡೆನೆ
ವಿಧಿಪೂರ್ವಕ ಹಾಡೋ ಹರಿದಾಸರ ಕಂಡೆ
ವಿಧಿಪಿತ ಮಂಗಳಾಂಗಹರಿವಿಠಲನ ಕಂಡೆನೆ 5
***
No comments:
Post a Comment