ರಾಗ: ಶುದ್ಧ ಸಾವೇರಿ ತಾಳ: ಆದಿ
ಗುರು ನಿನ್ನ ಪಾದಾಶ್ರಯವೊಂದೆ ಗತಿಯೋ
ಬೇರೆ ಗತಿಯನು ಕಾಣೆವೋ ರಾಘವೇಂದ್ರ ಪ
ಪರರಸೇವೆಯ ಮಾಡಿ ದಣಿದುಹೋದೆನೋ ಸ್ವಾಮಿ
ಪರರಸೊತ್ತಿಗೆ ಆಸೆಪಟ್ಟು ಕೆಟ್ಟೆನಯ್ಯ
ಕ್ರೂರತನದಿ ನಾನು ಧಾರುಣಿಯೊಳು ಮೆರೆದೆ
ಉರುತರದ ಅಜ್ಞಾನವಾವರಿಸಿಹುದೆನ್ನ 1
ಒಣಗಿದ ಮರದಂತೆ ಕ್ಷೀಣವಾಯಿತು ಕಾಯ
ಕಾಣೆನು ಕಾಯ್ವರ ನಿನ್ನ ಬಿಟ್ಟನ್ಯರ
ಗಣನೆಗತೀತನೆ ಗುಣಗಣಶಾಲಿಯೆ
ಕ್ಷಣಿಕ ಐಹಿಕಭೋಗದಾಸೆಯ ನೀಗಿಸೋ 2
ಮಡದಿ ಮಕ್ಕಳು ಎಲ್ಲ ಸಿರಿಯಿರುವ ತನಕ
ಕಡೆಗೆ ಹೋಗುವಾಗ ಬರುವರಾರಿಲ್ಲ
ಹಡೆದ ತಾಯ್ತಂದೆಗಳು ಕೂಡಿ ಬರುವುದಿಲ್ಲ
ಪುಡಿಮಣ್ಣೊಳು ದೇಹ ಬಿದ್ದು ಹೋಗುವದಲ್ಲಿ 3
ದುಡಿದು ಗಳಿಸಿದ ಧನವು ಹಿಂದೆ ಬರುವುದಿಲ್ಲ
ಬಿಡದೆ ನೆಚ್ಚಿದ ಭೃತ್ಯ ತಾ ಕಾಯ್ವುದಿಲ್ಲ
ದುಡಿದ ಪುಣ್ಯವು ಮಾತ್ರ ಬಿಡದೆ ಕಾಯುವುದಿಲ್ಲಿ
ಒಡೆಯ ಗುರುರಾಜರ ನಾಮವೆ ಗತಿಯಿಲ್ಲಿ 4
ಗೋವರ್ಧನೋದ್ಧಾರ ಸಿರಿಕೃಷ್ಣವಿಠಲನ
ಪಾವನಮೂರ್ತಿಯ ಬಿಡದೆ ಕೊಂಡಾಡುತ
ಭವಬಂಧ ಹರಿಸುತ ಭಕ್ತರ ಕಾಯುವ
ಗುರು ರಾಘವೇಂದ್ರರ ನಾಮವೆ ಗತಿಯಿಲ್ಲಿ 5
***
No comments:
Post a Comment