kruti by ಗುರುಗೋವಿಂದಠಲ (ಮೈಸೂರು)
ರಾಗ: ಮೋಹನ ತಾಳ: ಅಟ
ಗುರುವೆ ಪೊರೆಯೊ ಎನ್ನ ಆವಗುಣ
ಮರೆದು ರಾಘವೇಂದ್ರಾ ಪ
ನೆರೆನಂಬಿದರ ಸುರತರುವೇ ಹೇ
ಪುರಟ ಕಶಿಪುಜ ಗರುಡವಾಹನ ಪ್ರೀಯ ಅ.ಪ.
ಬಲುಕರ್ಮ ಜಾಲಗಳ ಮಾಡುತ ಬಳಲಿ
ಹೊಲಬು ತಪ್ಪಿದೆ ಬಹಳ
ಚಲುವ ಚನ್ನಿಗನಾದ ಬಲರಾಮನನುಜನ
ಸಲೆ ನಾಮ ಒಲಿಸದೆ ಮಲಿನನಾದವನ
ಕಳೆದು ಬಿಡುವರೆ ಸುಜನ ವತ್ಸಲ
ಗೆಲುವ ಕಾಣೆನೊ ಕರ್ಮನಿವಹದಿ
ಜಲಜನಾಭನ ಚರಣ ಪುಷ್ಪದ
ಸುಲಭ ಷಟ್ಟದನೆನಿಸೊ ಗುರುವರ 1
ಯತಿಕುಲ ಸಾರ್ವಭೌಮ ನಿಮ್ಮಯ ನಾಮಾ-
ಮೃತವನುಣಿಸಲು ನಿಸ್ಸೀಮಾ
ಪತಿತ ಪಾವನ ಹರಿಯ ಸತತದಿ ನುತಿಸುವ
ಮತಿಯಿತ್ತು ಪಾಲಿಸೊ ಶತಕ್ರತು ಪಿತ ಪಿತನೆ
ರತಿಪತಿಯ ಪಿತನೆನಿಸಿದಾತನ
ನತಿಸಿ ನುತಿಸುತ ಕರೆಯುತಲಿ
ಗತಿ ಪ್ರದಾಯಕ ಹರಿಯ ವ್ಯಾಪ್ತಿಯ
ಪಿತಗೆ ತೋರಿದ ಅತುಳ ಮಹಿಮಾ 2
ಮಂತ್ರ ನಿಕೇತನನೆ ಯತಿಕುಲರನ್ನ
ಮಂತ್ರಾರ್ಥ ರಚಿಸಿದನೇ
ಗ್ರಂಥೀಯ ಹರಿಸೂವ ತಂತ್ರವ ತೋರೋ ಅ-
ತಂತ್ರವಾಗಿದೆಯನ್ನ ಮಂತ್ರ ಸಾಧನವೂ
ಪ್ರಾಂತಗಾಣದೆ ಚಿಂತಿಸುವೆ ಸರ್ವಸ್ವ-
ತಂತ್ರ ಗುರುಗೋವಿಂದವಿಠಲನ
ಅಂತರಂಗದಿ ತೋರಿ ಸಲಹೋ
ಕ್ರಾಂತನಾಗುವೆ ನಿಮ್ಮ ಪದಕೇ 3
***
No comments:
Post a Comment