..
kruti by ಬೇಲೂರು ವೈಕುಂಠ ದಾಸರು belur vaikunta dasaru
ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ
ಕೂಗಿಡುವ ಧ್ವನಿಯು ಕೇಳುವುದಿಲ್ಲವೇ ನಿನಗೆ ಪ
ಪರಮಪದದೊಳಗೆ ವಿಷಧರನ ತಲ್ಪದೊಳು ಇಂ
ದಿರೆಯರಸಿ ಹರುಷವಾರಿಧಿಯೊಳಿರಲೂ
ಕರಿ ಗುಪ್ತಕಂಠಧ್ವನಿಯಿಂದಾದಿಮೂಲವೆಂದೊದರೆ ಆಕ್ಷಣ
ಕರಿಯ ಕಾಯ್ದೆ ಜಗವರಿಯೆ 1
ಕಡುಮುನಿಸಿನಿಂ ಖಳನು ಖಡ್ಗವನು ಪಿಡಿದು ನಿ
ನ್ನೊಡೆಯರಾರೆಂದು ತೋರೆನುತ ಬಡಿಯೆ
ದೃಢಭಕುತ ಶಿಶುವು ಕಂಗೆಡದೆ ನಿನ್ನನು ಕರೆಯೆ
ಘುಡಿಘುಡಿಸಿಕಂಬದಿಂದೊಡೆದು ಮೂಡಿದೆ ಹರಿಯೆ 2
ಯಮಸುತನರಾಣಿಗಕ್ಷಯ ವಸ್ತ್ರವನಿತ್ತು
ಕ್ರಮದಿಂದ ಅಜಮಿಳನ ಪೊರದೆ ಅಂದೂ
ಸಮಯಾಸಮಯ ಉಂಟೆ ಭಕುತವತ್ಸಲ ನಿನಗೆ
ಕಮಲಾಕ್ಷ ವೈಕುಂಠಚನ್ನಕೇಶವ ಬೇಗ 3
***
No comments:
Post a Comment