..
kruti by ಬೇಲೂರು ವೈಕುಂಠ ದಾಸರು belur vaikunta dasaru
ಬೆರಗಾದೆನಯ್ಯ ಎನ್ನೆರೆಯ ಕೇಶವನ
ಬಿಟ್ಟನ್ಯಭಜನೆಯ ಕಂಡು ಪ
ಹೊಚ್ಚಿ ಸುಳಿದಟ್ಟಿ ಸುಡುವ ಅಡವಿಗಿಚ್ಚಿನ ಭಯಕೆ
ಬೆಚ್ಚಿ ಅರಗಿನ ಮನೆಯ ಹೊಗುವವನಂತೆ
ಅಚ್ಚರಿಯೆನಿಸೆ ದಹಿಪ ತಾಪತ್ರಯಕ್ಕಳುಕಿ
ತುಚ್ಛ ದೈವಗಳ ಮರೆಯೊಗುವ ಮನುಜರಕಂಡು 1
ಉರಿಯ ಮಳೆಗರೆಯುತಿರೆ ತೃಣಗೇಹವನು ಹೊಕ್ಕು
ಹರಣವನುಳುಹಿಕೊಂಬೆನೆಂಬಂತೇ
ಉರುಬೆ ನಾನಾ ರೋಗಗಳುಳುಹಲು ಹಲವು ದೈವಗಳಿ
ಗೆರಗಿ ಜೀವನಕೆ ಕಳಕಳಿಪ ಮನುಜರ ಕಂಡೂ 2
ಮುಗಿಲಗಲ ಧರೆ ಜರಿಯುತಿರೆ ಹುಲ್ಲಿನಣಬೆಯೊಡ್ಡಿ
ಮಿಗೆ ಬಾಳ್ವೆನೆಂಬ ಮರುಳನಂದದೀ
ಉಗಿದಸಿಯ ಮೃತ್ಯುವಿನ ಭಯಕೆ ನಾನಾದೇವ
ತೆಗಳಮರೆಯೊಗುವ ಮನುಜರ ಕಂಡು 3
ಘುಡು ಘುಡಿಸಿ ಸಿಡಿಲೆರಗುತಿರೆ ತನ್ನ ಕೈ
ವಿಡಿದ ಕೊಡೆಯ ಮರೆಗೊಂಡುಳಿವೆನೆಂಬಂತೇ
ಮುಡಿವಿಡಿದೆಳೆವ ಕಾಲನ ಭಯಕೆ ನಾನಾದೈವ
ದಡಿವಿಡಿದೆರಗಿ ಹಲು ಬಿಡುವ ಮನುಜರ ಕಂಡು 4
ಯಾತಮುಳಿದರೆ ಜಗದಲುಳಿದವರಾರು ಮ
ತ್ತೀತನುಳುಹಿದನನು ಕೊಂದವನಾವ ಇ
ದೇತಕರಿಯರೋ ನರರು ಅಕಟಕಟ ವೈಕುಂಠ
ನಾಥ ಪರಿಪೂತನ ಪದಕಮಲವ ಭಜಿಸರೆಂದು 5
ನೀರಡಿಸಿ ಜಾಹ್ನವಿಯ ತೀರದಲಿ ಭಾವಿಯಾ
ನೀರ ಕುಡಿವ ಮಾನವನ ತೆರದೀ ಹರಿಯ ಚರಣವಿರಲು
ಭೂರಿದೈವಂಗಳಿನ್ನೇಕೆ ಭಜಿಸುವೆ ಮನುಜ ಹರಿ
ಕಾರುಣ್ಯನಿಧಿ ವೈಕುಂಠವಲ್ಲಭ ಬೇಲೂರ ಚೆನ್ನಿಗರಾಯ
ಕೃಪಾನಿಧಿಯಿರಲು 6
***
No comments:
Post a Comment