..
ಎಂಥಾ ಪಾವನ ಪಾದವೋ ಶ್ರೀರಾಮನ
ದೆಂಥಾ ಚೆಲುವ ಪಾದವೋ ಪ
ಸಂತತವು ಸಜ್ಜನರ ಪಾಲಿಸೆ
ನಿಂತು ಧನುವನು ಧರಿಸಿ ಮೆರೆವ ಅ.ಪ
ಮುನಿಪತಿ ನುಡಿ ಮನ್ನಿಸಿ ತಪೋವನಕ್ಕನುಜನೊಡನೆ ಗಮಿಸೀ
ಮುನಿಯಾಜ್ಞೆಯಿಂ ಘೋರ ತಾಟಕಿಯನೆ ವಧಿಸಿ
ವಿನಯದಿ ಯಜ್ಞರಕ್ಷಣೆ ಮಾಡಿ ಮುದವಿತ್ತ 1
ಮುನಿ ಗೌತಮನ ಪತ್ನಿಯ ಅಹಲ್ಯೆಯ
ಘನಶಾಪವನು ಕಳೆಯೆ
ಮುನಿಯಾಜ್ಞೆಯಿಂ ಘನಶಿಲೆಯ ಮೇಲಡಿಯಿಟ್ಟು
ಘನತರ ಮಾನಿನಿಯನು ನಿರ್ಮಿಸಿ ಮೆರೆದ 2
ಗುಹನು ಗಂಗೆಯ ತಟದಿ ದೋಣಿಯ ತಂದು ಗಹನ
ಶಂಕೆಯೊಳಂದು
ಸಹಜಭಕ್ತಿಯಲಿ ನಿರ್ಮಲಗಂಗೆಯುದಕದಿಂ
ದಹಹ ಪಾದರಜವನು ತೊಳೆಯಲೊಪ್ಪಿದ 3
ಹರಧನುವನು ಭಂಗಿಸಿ ಮಿಥಿಲೆಯಲಿ ವರ ವಿಕ್ರಮವ ಮೆರೆಸಿ
ತರುಣಿ ಜಾನಕಿಯಂದು ಶಿರದಿ ನಿನ್ನಡಿಗಳಿ
ಗೆರಗಲು ಘನ ಶಂಕೆಯಿಂ ಮಾಲೆಯರ್ಪಿಸಿದ 4
ದುರುಳ ದಾನವ ತಂಡವ ಸಂಹರಿಸುತ ವರ
ಸಾಧುಗಳ ಪೊರೆಯೆ
ಚರಣ ಪಾದುಕೆಗಳ ಶರಣ ಭರತಗಿತ್ತು
ಬರಿಗಾಲಲಿ ನಡೆದ ರಘುರಾಮವಿಠಲನ5
****
No comments:
Post a Comment