ಕನಕದಾಸಾರ್ಯರ ಸಾಧನಾ ಮಾರ್ಗವನ್ನು ತಿಳಿಸುವ ಮುಂಡಿಗೆ
ಬಿತ್ತಾಕ ಹೋದಲ್ಲಿ ಬಿಡದೆ ಮಳೆ ಹೊಡೆದು
ಜತ್ತಿಗೆ ತೊಯ್ದು ಮಿಣಿ ತೊಯ್ದು
ಜತ್ತಿಗೆ ತೊಯ್ದು ಮಿಣಿ ತೊಯ್ದು - ಉಡಿಯಾಗಿನ
ಬಿತ್ತಬೀಜ ತೊಯ್ದು ಮೊಳಕೆ ಹೊಡೆದೊ....
ಬಿತ್ತಲಿಲ್ಲ ಬೆಳೆಯಲಿಲ್ಲ ಮೊಳದುದ್ದ ತೆನೆ ಹಾಯ್ದೊ
ಮೆತ್ತಗೆ ಮೇಯಾಕ ಬಂದ ಗಿಣಿರಾಮ ನಿಬ್ಬೆರಗಾಗಿ ನಿಂತ ...
ಕಾಗಿನೆಲೆ ಕನಕದಾಸ ಹಾಕಿದ ಮುಂಡಿಗೆಯ
ತೂಗಿ ಒಡಚದಿದ್ದರೆ ಗೆಣೆಯ ಆದಿಕೇಶವನಾಣೆ 🙏🏽
***
ಅರ್ಥ ವಿವರಣೆ ಹರಿವಾಯುಗುರುಗಳ ಅನುಗ್ರಹದಂತೆ...👇🏽👇🏽👇🏽
ಬಿತ್ತಾಕ ಹೋದಲ್ಲಿ ಬಿಡದೆ ಮಳೆ ಹೊಡೆದು
ದುರ್ಲಭಂ ಮಾನುಷಂ ಜನ್ಮ ಎನ್ನುವ ಉಕ್ತಿಯಂತೆ ಪರಮಾತ್ಮ ಈ ಮಾನವ ಜನ್ಮವನ್ನು ಸಾಧನೆಯ ಬೀಜವನ್ನು ಬಿತ್ತಲೆಂದೇ ಕಲ್ಪಿಸಿಕೊಟ್ಟಿದ್ದಾನೆ . ಆದರೇ ಈ ಮಾನವನು ತನ್ನ ಲೌಕಿಕ ಆಶೆ ಆಕಾಂಕ್ಷೆಗಳಲ್ಲಿ ಸಾಧನೆಯನ್ನೇ ಮರೆತುಬಿಡುತ್ತಾನೆ, ಲೌಕಿಕ ಆಶೆ ಆಕಾಂಕ್ಷೆಗಳು ಎನ್ನುವ ಮಳೆ ಧಾರಾಕಾರವಾಗಿ ಸುರಿದುಬಿಡುತ್ತೆ ಇದನ್ನೇ ಶ್ರೀಮದ್ಭಾಗವತದಲ್ಲಿ ಹೇಳ್ತಾರೆ .....
ಕೋನ್ವರ್ಥ ತೃಷ್ಣಾಂ ವಿಸೃಜೇತ್ ಪ್ರಾಣೇಭ್ಯೋಪಿ ಯ ಈಪ್ಸಿತಃ /
ಕಥಂ ಪ್ರಿಯಯಾ ಅನುಕಂಪಿತಾಯಾಃ ಸಂಗಂ ರಹಸ್ಯಂ ರುಚಿರಾಂಶ್ಚ ಮಂತ್ರಾನ್ /
ಸುಹೃತ್ಸು ಚ ಸ್ನೇಹಸಿತಃ ಶಿಶೂನಾಂ ಕಲಾಕ್ಷರಾಣಾಮನುರಕ್ತಚಿತ್ತಃ //
ಪುತ್ರಾನ್ ಸ್ಮರಂಸ್ತಾನ್ ದುಹಿತರ್ ಹೃದಯ್ಯಾ ಭಾತೃನ್ ಸ್ವಸೃನ್ ವಾ ಪಿತರೌಚ ದೀನೌ //
ಗೃಹಾನ್ ಮನೋಜ್ಞೋರುಪರಿಚ್ಛದಾಂಶ್ಚ ವೃತ್ತೀಶ್ಚ ಕುಲ್ಯಾಃ ಪಶುಭೃತ್ಯವರ್ಗಾನ್ // ...
ದಾಸಾರ್ಯರು ಹೇಳಿದಂತೆ ಮನೆಯಿಂದ ಸಂತೋಷ, ಇನ್ನು ಕೆಲವರಿಗೆ ಧನದಿಂದ ಸಂತೋಷ, ಮತ್ತೆ ಕೆಲವರಿಗೆ ಮಡದಿಯಿಂದ ಸಂತೋಷ, ಮಕ್ಕಳಿಂದ,ಕೀರ್ತಿ ಪ್ರತಿಷ್ಠೆಗಳಿಂದ, ಊಟತಿಂಡಿಗಳಿಂದ.. ಭೋಗ ಭಾಗ್ಯಗಳಿಂದಲೇ ಸಂತೋಷಪಡುತ್ತಿರುವರೂ ಇರ್ತಾರೆ.. ಅದನ್ನೇ ಜೀವನದ ಧ್ಯೇಯ ಎಂದು ತಿಳಿದಿರುವಂತಹಾ ಮಂದಮತಿಗಳು. ಎಂದು ತಿಳಿಸಿದ್ದಾರೆ . ಇದನ್ನೇ...
ಶ್ರೀಸತ್ಯಧರ್ಮತೀರ್ಥರು -
ಗಗನಂ ಗಚ್ಛತಿ ತಾವಕರಾಗಃ ತತ ಆತನುಷೆ ಪ್ಯಹರಹ ರಾಗಃ /
ವ್ಯಾಪ್ಯತ ಏವಂ ಕಾಯಪರಾಗಃ ಕಿಂಕುರ್ಯಾತ್ತವ ಜರಸಿವಿರಾಗಃ /
ಮಮಭೂರ್ಮಮಗೌ ಮಮಕುಂಡೋಪ್ನಿ ಇತಿಮಾಬೀಭವ /
ಇದಮಧುನಾತೇಶ್ವಃ ಕಸ್ಯೇತೇ ಕೋ ಜಾನೀ ತೇ//
ಭಜ ಭಗವಂತಂ ಭಜ ಭಗವಂತಂ ಭ್ರಾಂತಮತೆ //
ಈ ಮಾನವನಿಗೆ ವ್ಯಾಮೋಹಗಳೇ ಬಹಳ, ಲೋಭ ಮೋಹಗಳು ಆಕಾಶ ಮುಟ್ಟುವವು, ಹಗಲಿರುಳೂ ರಾಗ ದ್ವೇಷಗಳು, ದೇಹದ ಮೇಲಿನ ಮಮತೆ ಪ್ರೀತಿಗಳು ಹೆಚ್ಚುವೆವು, ವಯಸ್ಸಾದರಂತೂ ಭಕ್ತಿ ಹುಟ್ಟುವದರ ಬದಲಾಗಿ ಆಶೆಗಳೇ ಬೆಳೆಯುತ್ತವೆ... ಧಾರಾಕಾರವಾಗಿ ಮಳೆಯಂತೆ ಸುರಿಯತ್ತವೆ. ನನ್ನ ಮನೆ, ನನ್ನ ಹೊಲ, ನನ್ನ ನೆಲ, ನನ್ನ ಎತ್ತು, ನನ್ನ ಆಕಳುಗಳು, ಎಲ್ಲವೂ ನನ್ನದೇ ಎನ್ನವು ಆಶೆ ಮಹದಾಶೆಗಳ ಮಳೆ ಧಾರಾಕಾರವಾಗಿ ಸುರಿದು ಸುರಿದು ಸಾಧನೆ ಎನ್ನವ ಬೀಜ ಬಿತ್ತುವದೇ ಇಲ್ಲ. ಎಂದು ಇಲ್ಲಿ ದಾಸಾರ್ಯರು ತಿಳಿಸಿದ್ದಾರೆ...
ಜತ್ತಿಗೆ ತೊಯ್ದು ಮಿಣಿ ತೊಯ್ದು
ಜತ್ತಿಗೆ ಎಂದರೆ ಬೀಜ ಬೀಜ ಬಿತ್ತುವಾಗ ದನಗಳ ಕೊರಳಿಗೆ ನೊಗ (ತೆಲುಗಿನಲಿ ನಾಗಲಿ) ಹಾಕಿ ಕಟ್ಟುವ ಒಂದು ಪಟ್ಟಿ, ಆ ಪಟ್ಟಿ ತೊಯ್ದು ಬಿಟ್ಟರೆ ದನಗಳನ್ನು ನೊಗಕ್ಕೆ ಕಟ್ಟುವದಾದರೂ ಹೇಗೆ ಬಿತ್ತುವದಾದರೂ ಹೇಗೆ ? ಅಲ್ಲವೇ...? ಅದೇ ರೀತಿ ಪರಮಾತ್ಮ ನಮ್ಮ ಸಾಧನಕ್ಕೆ ಅನುಕೂಲವಾಗಲೀ ಅಂತಲೇ ಗೃಹಸ್ಥಾಶ್ರಮದ ಭಾಗ್ಯ ಕಲ್ಪಿಸಿದ್ದಾನೆ. ಆದರೇ ಮನುಷ್ಯ ಏನು ಮಾಡ್ತಿದ್ದನು ? ನಮ್ಮ ಜೊತೆಗೆ ಇದ್ದ ಹೆಂಡತಿಯ ಸಹಿತ ಧರ್ಮಸಾಧನೆ ಮಾಡಲಾರದೇ ಕೇವಲ ಆಶೆಗಳು ಎನ್ನುವ ಮಳೆಯಿಂದ ಅವಳನ್ನು ತೋಯಿಸಿಬಿಟ್ಟು ಅವಳೇ ನಮ್ಮ ವಿರುದ್ಧವಾಗುವಹಾಗೆ, ನಮ್ಮ ಧರ್ಮಸಾಧನೆಗೆ ಪ್ರತಿಕೂಲಳಾಗುವಹಾಗೆ ಮಾಡಿಬಿಟ್ಟಿರ್ತಾನೆ . ಧನ್ಯ ಧನ್ಯೋ ಗೃಹಸ್ತಾಶ್ರಮಃ ಎನ್ನುವ ಉಕ್ತಿಯಂತೆ ಗೃಹಸ್ತಾಶ್ರಮದಲ್ಲಿಯೇ ಹೆಚ್ಚು ಸಾಧನೆಗೆ ಅವಕಾಶಗಳು ಇರುತ್ತವೆ ಆದರೇ ನಾವು ನಮ್ಮ ಸ್ಹಧರ್ಮಿಣಿ ಎನ್ನುವ ಜತ್ತಿಗೆಯನ್ನು ಆಶೆಗಳೆಂಬ ಮಳೆಯಿಂದ ತೋಯಿಸಿಬಿಟ್ಟಿದ್ದರಿಂದ ಸಾಧನೆ ಎಂಬ ಬೀಜ ಬಿತ್ತಲು ಸಾಧ್ಯವಾಗುವದಿಲ್ಲ ....
ಮಿಣಿ ಎಂದರೆ ಬೀಜ ಬಿತ್ತುವ ಸಂದರ್ಭದಲ್ಲಿ ಎತ್ತುಗಳ ನೊಗದ ಮಧ್ಯದಲ್ಲಿ ಕಟ್ಟುವ ಒಂದು ತರಹದ ಹಗ್ಗದ ಚಿಕ್ಕುದಾದ ಜಾಳಿಗೆಯಂತಹಾ ಚೀಲ ಇದರ ಮುಖಾಂತರವೇ ಬೀಜಗಳನ್ನು ಬಿತ್ತಲಾಗುವದು ಅದು ತೊಯ್ದುಬಿಟ್ಟರೆ ಅದರ ಮುಖಾಂತರ ಬೀಜ ಕೆಳಗಡೆ ಬೀಳುವದೂಯಿಲ್ಲ .... ಬಿತ್ತುವದಂತೂ ದೂರ ಉಳಿತು. ಹಾಗೆಯೇ ಭಗವಂತನು ನಮಗೆ ಸಾಧನ ಮಾಡಲು ಮನಸ್ಸು ಎನ್ನುವ ಒಂದು ಸೂಕ್ಷ್ಮ ಇಂದ್ರಿಯವನ್ನು ಕರುಣಿಸಿದ್ದಾನೆ,
ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯಾಃ ಅಂತ ಅದಕ್ಕೆ ಹೇಳಿದ್ದಾರೆ. ಜೀವನದ ಉನ್ನತಿ, ಅವನತಿ ಎರಡಕ್ಕೂ ಮುಖ್ಯ ಕಾರಣ ಮನಸ್ಸೇನೇ...
ಮನವೇ ನೀ ದೃಢವಾದರೆ ಮನಸಿಜಯನಯ್ಯನ ಚರಣಕಾಂಬುವೆನು ನಾನು ಎಂದು ವಿಜಯದಾಸಾರ್ಯರ ಮಾತಿನಂತೆ ಮನಸು ದೃಢವಾಗಿದ್ದರೆ ಮಾತ್ರ ಪರಮಾತ್ಮನ ಚರಣ ಕಾಣುವುದು ಅಂತ. ಚರಣವೇ ಏಕೆ ಅಂದರೇ ಶ್ರೀಮದ್ಭಾಗವತ ಉಲ್ಲೇಖ ಮಾಡ್ತದೆ ಶರಣಮ್ ಮೋಕ್ಷವಿರುವ ಜಾಗಾ ಪರಮಾತ್ಮನ ಪಾದವು...ಅಂತ..
ಆದರೆ ನಾವು ಆ ಮನಸ್ಸನ್ನು ಸಾಧನೆಯ ಮಾರ್ಗದ ಕಡೆಗೆ ಬಳಸುವ ಬದಲು ಕೇವಲ ಲೌಕಿಕ ಹಂಬಲಗಳು ಎನ್ನುವ ಮಳೆಯಿಂದ ತೋಯಿಸಿಬಿಟ್ಟಿದ್ದೇವೇ.. ಹೀಗಾಗಿ ಇಂತಹಾ ಲೌಕಿಕ ಹಂಬಲಗಳು ಎನ್ನುವ ಮಳೆಯಿಂದ ತೋಯ್ದ ಈ ಮನಸ್ಸಿನಿಂದ ಸಾಧನ ಎಂಬುವ ಬೀಜ ಬಿತ್ತಲಾಗುತ್ತಿಲ್ಲಾ ಎನ್ನುತ್ತಿದ್ದಾರೆ ದಾಸರು......
ಮನಶುದ್ಧಿ ಇಲ್ಲದವಗೆ ಮಂತ್ರದಫಲವೇನು ಎಂಬಂತೆ ಎಷ್ಟೇ ಜ್ಞಾನವನ್ನ ಪಡೆದವರೂ ಸಹಾ ಅವರ ಮನಸು ಶುದ್ಧಿ ಇಲ್ಲವಾದರೆ ದೇವರು ಒಲಿಯನು.
ಅದಕ್ಕೆ ಸದಾ ಈ ಪ್ರಾರ್ಥನೆ ಇರಬೇಕು
ಬೇಡುವ ಮನವೀಯೋ ನಿನ್ನನು
ಕಾಡುವ ಮನವೀಯೋ
ಗಾಢವಾದ ರಜೋತಮೋ ಗುಣಗಳ
ಓಡಿಸಿ ಶುದ್ಧಾತ್ಮನ ಮಾಡಿ ಪ್ರತಿದಿನ
ಬೇಡುವ ಮನವೀಯೋ... ಅಂತ
ಉಡಿಯಾಗಿನ ಬಿತ್ತಬೀಜ ತೋಯ್ದು ಮೊಳಕೆಹೊಡೆದೂ-
ನಾವು ಬಿತ್ತಬೇಕಾದ ಸಾಧನವೆಂಬ ಬೀಜ ನಮ್ಮ ಕಲ್ಪನೆ ಎನ್ನುವ ಉಡಿಯೊಳಗೇ ಮೊಳಕೆಹೊಡೆಯುತ್ತದೆ.
ಕೌಮಾರಾತ್ ಆಚರೇತ್ ಪ್ರಾಜ್ಞಃ ಎಂಬ ಉಕ್ತಿಯ ಮರ್ಮವನ್ನು ಅರಿಯಲಾರದೇ, ಈ ದೇಹ ದುರ್ಲಭ ಎನ್ನುವದನ್ನೂ ತಿಳಿಯದೇ, ಈಗ ಬಾಲ್ಯಾವಸ್ಥೆ ಇದೆ.. ಈಗ ಯಾಕೆ ಸಾಧನೆ ಮುಂದೆ ದೊಡ್ಡವರಾದ ಮೇಲೆ ಮಾಡಿದರಾಯಿತು ಅಂದುಕೋತಾರೆ.. ದೊಡ್ಡವರಾದ ಮೇಲಂತೂ ಸಂಸಾರದ ಜಂಜಾಟ, ಆ ಸಂಸಾರದ ಮೋಹದಲ್ಲಿ ಈಗ ಸಂಸಾರ ಇದೆ ಈಗ್ಯಾಕೆ ಮುಂದೆವಯಸ್ಸಾದಮೇಲೆ ಮಾಡಿದರಾಯಿತು ಅಂದುಕೊಳ್ಳೋದು, ಯಾವಾಗ ಸಂಸಾರದ ಮೋಹ, ಹುರುಪು ಮಾಯವಾಗಿ ಉರುಪು ಪ್ರಾರಂಭವಾಗುತ್ತದೋ ಆಗ ಮಕ್ಕಳಿಗೆ ಆಸ್ತಿ ಮಾಡುವ ಯೋಚನೆ, ಈಗ್ಯಾಕೆ ಮುಂದೆ ಮಾಡಿದರಾಯಿತು ಎನ್ನುವದು, ಮುಂದೆ ವಯಸ್ಸಾದ ಮೇಲೆ ತನ್ನ ಅವಯವಗಳೇ ತನ್ನ ಸ್ವಾಧೀನದಲ್ಲಿ ಇರುವದಿಲ್ಲ... ಆಗ ಯಾವ ಸಾಧನಯನ್ನೂ ಮಾಡದೇ ಕೇವಲ ಮುಪ್ಪು ರೋಗಾದಿಗಳಲ್ಲಿಯೇ ಈ ಜೀವ ವ್ಯರ್ಥವಾಗಿ ಹೋಗುವದು. ಹೀಗೆ ಸಾಧನೆ ಎಂಬ ಬೀಜ ಕೇವಲ ನಮ್ಮ ಹುಚ್ಚು ಕಲ್ಪನೆ ಎಂಬ ಉಡಿಯಲ್ಲೇ ಮೊಳಕೆ ಒಡೆದುಬಿಡುತ್ತದೆ . ಇದನ್ನೇ ಶ್ರೀಮದ್ಭಾಗವತದಲ್ಲಿ ....
ಪುಂಸೋ ವರ್ಷಶತಂ ಹ್ಯಾಯುಃ ತದರ್ಧಂ ಚ ಅಜಿತಾತ್ಮನಃ /
ನಿಷ್ಫಲಂ ಯದಸೌರಾತ್ರ್ಯಾಂ ಶತೇಂಧಂ ಪ್ರಾಪಿತಸ್ತಮಃ //
ಮುಗ್ಧಸ್ಯಬಾಲ್ಯಕೌಮಾರೇ ಕ್ರೀಡತೋಯಾತಿವಿಂಶತಿಃ //
ಜರಯಾಗ್ರಸ್ತದೇಹಸ್ಯ ಯಾತ್ಯಕಲ್ಪಸ್ಯವಿಂಶತಿಃ //
ದುರಾಪೂರೇಣಕಾಮೇನ ಮೋಹೇನ ಚ ಬಲೀಯಸಾ /
ಶೇಷಂ ಗೃಹೇಷು ಸಕ್ತಸ್ಯ ಪ್ರಮತ್ತಸ್ಯಾಪಯಾತಿ ಹಿ//
ಸ್ನೇಹಪಾಶೈಧಢೈರ್ಬದ್ಧಮುತ್ಸಹೇತ ವಿಮೋಚಿತಮ್ // ಎಂದು ಹೇಳಿದ ವಿಷಯವನ್ನೇ ಶ್ರೀ ಕನಕದಾಸಾರ್ಯರು ಇಲ್ಲಿ ಬಿತ್ತಬೀಜ ಮೊಳಕೆಹೊಡೆದೊ ಎಂದು ತುಂಬಾ ಸೂಕ್ಷ್ಮವಾಗಿ ತಿಳಿಸಿದ್ದಾರೆ ....
ಬಿತ್ತಲಿಲ್ಲ ಬೆಳೆಯಲಿಲ್ಲ ಮೊಳುದ್ದದ ತೆನೆ ಹಾಯ್ದೊ
ಈ ಸಾಧನಕ್ಕೆಂದೇ ಇರುವ ಶರೀರದಿಂದ ಒಂದು ಬೀಜವಾದರೂ ಅಂದರೇ ಒಂದು ಧರ್ಮವನ್ನಾದರೂ ಸಹಾ ಪರಮಾತ್ಮನಿಗೆ ಪ್ರೀತಿಕರವಾಗುವಂತೆ ಆಚರಸದೇ ಕೇವಲ ಸ್ವಾರ್ಥಕ್ಕಾಗಿ ಆಚರಿಸಿ ಸಾಧನೆಯನ್ನು ಮಾತ್ರ ಶೂನ್ಯವಾಗಿಸಿಕೊಂಡು ಕೇವಲ ಮನಸ್ಸಿನಲ್ಲೇ ಹಾಗೆ ಮಾಡ್ಬೇಕು ಹೀಗೆ ಮಾಡ್ಬೇಕು ಅಂತಹಾ ಸಾಧನೆ ಮಾಡ್ಬೇಕು ಇಂತಹಾ ಸಾಧನೆ ಮಾಡ್ಬೇಕು ಆಗ ಮಾಡ್ಬೇಕು, ಈಗ ಮಾಡ್ಬೇಕು, ಅಂತ ಬರೀ ಊಹಾಗಾನಗಳಲ್ಲೇ ವ್ಯರ್ಥವಾಗಿ ಕಾಲ ಕಳೆದು ಮನಸ್ಸಲ್ಲೇ ಬೆಳೆಸಿ ಅಲ್ಲೇ ತೆನೆ ಹಾಯುವಹಾಗೆ ಮಾಡಿಬಿಡುತ್ತೇವೆ .
ವಿಷ್ಣುಭಕ್ತಿ ವಿಧಾನಾರ್ಥಂ ಸರ್ವಶಾಸ್ತ್ರಂ ಪ್ರವರ್ತತೇ-(ಪೈಂಗೀಶ್ರುತಿ)
ಏಕಮೇವ ಅದ್ವಿತೀಯಂತೇ ವಿಷ್ಣುಭಕ್ತಿರ್ಹಿ ಸಾಧನೇ-(ಹರಿವಂಶ)
ಮೊದಲಾದ ಉಕ್ತಿಗಳನ್ನು ಕೇವಲ ಮನಸ್ಸಿನಲ್ಲೇ ಬೆಳಿಸಿ ಆಚರಣೆಯಲ್ಲಿ ತರುವದೇ ಇಲ್ಲ . ಎನ್ನುವದನ್ನು ಇಲ್ಲಿ ದಾಸಾರ್ಯರು ಬಿತ್ತಲಿಲ್ಲ ಬೆಳೆಯಲಿಲ್ಲ ಮೊಳುದ್ದದ ತೆನೆ ಹಾಯ್ದೊ ಅಂತಿದ್ದಾರೆ.....
ಮೆತ್ತಗೆ ಮೇಯಾಕ ಬಂದ ಗಿಣಿರಾಮ ನಿಬ್ಬೆರಗಾಗಿ ನಿಂತ
ಪರಮಾತ್ಮಕರುಣಿಸಿದಂತಹಾ ಈ ಸಾಧನ ಶರೀರದಿಂದ ನಾವು ಎಷ್ಟು ಸಾಧನೆ ಮಾಡಿದ್ದೇವೆ ಎನ್ನವುದನ್ನು ನೋಡಿ ಸೂಕ್ಷ್ಮವಾಗಿ ಯಾರಿಗೂ ಗೊತ್ತಾಗದಂತೆ ಗಿಣಿಮುಖವುಳ್ಳ ರುದ್ರಾಂಶ ಸಂಭೂತರಾದ, ಶ್ರೀವೇದವ್ಯಾಸರಿಂದ ಅನುಗ್ರಹಿತವಾದ ಭಾಗವತವನ್ನು ನಮಗೆ ಅನುಗ್ರಹಿಸಿದ ಶ್ರೀ ಶುಕಾಚಾರ್ರುಯರು , ಈ ಮನುಷ್ಯ ಎಷ್ಟು ಭಾಗವತ ಧರ್ಮಗಳನ್ನು ಸಾಧನೆ ಮಾಡಿದ್ದಾನೆ ಎನ್ನವದನ್ನು ಆಸ್ವಾದಿಸಲು ಬಂದರೆ ನಮ್ಮ ಮನಸ್ಸಿನಲ್ಲೇ ಬೆಳೆದ ಆಚರಣೆಯಲ್ಲಿರದ ಸಾಧನೆಯನ್ನು ನೋಡಿ ನಿಬ್ಬೆರಗಾಗಿ ಅಂದರೆ ಆಶ್ಚರ್ಯಚಕಿತರಾಗಿ ನಿಂತುಬಿಟ್ಟಿದ್ದಾರೆ . ಇಲ್ಲಿ ದಾಸಾರ್ಯರುು ಗಿಣಿರಾಮ ಎನ್ನುವ ಶಬ್ದದಿಂದ ಮನೋನಿಯಾಮಕರಾದ ರುದ್ರದೇವರನ್ನೂ ಹಾಗೂ ಅವರಿಗೆ ರಾಮ ಎಂದರೆ ಸ್ವಾಮಿಯಾದ ಶ್ರೀವೇದವ್ಯಾಸದೇವರನ್ನೂ ಸೂಚಿಸಿದ್ದಾರೆ... ಅಂತ ಸೂಕ್ಷ್ಮ...
ಕಾಗಿನೆಲೆಯ ಆದಿಕೇಶವನ ಭಕ್ತ ಕನಕದಾಸರು ಹಾಕಿದ ಈ ಮುಂಡಿಗೆಯನ್ನು ತೂಗಿ ಎಂದರೇ ಇದರ ಒಳಗಿನ ಅರ್ಥಗಾಂಭೀರ್ಯವನ್ನು ತಿಳಿದಿಕೊಂಡು ಸಾಧನೆಯಲ್ಲಿ ತೊಡಗದಿದ್ದರೆ ಗೆಣೆಯ ಅಂದರೆ ಸಖ, ಪರಮಾತ್ಮನು ನಮ್ಮ ಅವಿಜ್ಞಾತ ಸಖ ಅಲ್ಲವೇ, ಅಲ್ಲದೇ ಆತನೇ ಜಗತ್ತಿನಲ್ಲಿರುವ ಸರ್ವಜೀವರಿಗೂ ನಿಜವಾದ ಸಖನಾಗಿರುವದರಿಂದ, ಅಂತಹಾ ಸಖನಾದ ಆದಿಕೇಶವನ ಮೇಲೆ ಆಣೆ ಹಾಕಿ ನಮ್ಮ ನಿಜವಾದ ಸಾಧನೆಯ ಬಗೆಯನ್ನು ಈ ಅದ್ಭುತವಾದ ಮುಂಡಿಗೆಯ ಮುಖಾಂತರ ತಿಳಿಸಿದ್ದಾರೆ... ಈಗಲಿಂದಾದಲೂ ಅವರು ಹೇಳಿದ ಹಾದಿಯಲ್ಲಿ ನಡೆಯಲು ಪ್ರಯತ್ನ ಮಾಡೋಣ...
ಮೊದಲಿಗೆ ಹರಿಯ ಸ್ಮರಣೆ ನಂತರ ಭಗವತ್ ಕಥಾ ಆಸಕ್ತಿ, ನಂತರದಲಿ ಸಜ್ಜನರ ಸಂಗ, ಶಾಸ್ತ್ರಾಧ್ಯಯನ ಇತ್ಯಾದಿಗಳ ಅನುಗ್ರಹವೇ ಭಗವತ್ಪ್ರಸನ್ನತೆಯನ್ನು ನಮ್ಮ ಮೇಲೆ ಮಾಡಿಸುವಂತಹಾ ಸಾಧನೆಗೆ ಹಂತಹಂತದಲ್ಲಿ ಬರುವ ಮೆಟ್ಟಿಲುಗಳು.. ಹೀಗಾಗಿ ಆ ಹಾದಿಯಲ್ಲಿ...
ಶ್ಲೋಕಗಳನ್ನು ದಯಪಾಲಿಸಿದ ಶ್ರೀ ಹಂಪಿಹೊಳಿ ಆಚಾರ್ಯರಿಗೆ ಕೃತಜ್ಞತೆಗಳು ಹೇಳುತ್ತಾ...
ಶ್ರೀ ನಾರದರು ಬಿತ್ತಿದ ನಾರಾಯಣ ಎನ್ನುವ ಬೀಜ ನಮ್ಮ ಮನಸಿನಲಿ ಮೊಳಕೆ ಹೊಡೆದು, ಆ ಪದ ಪದಗಳನ್ನು ಹಾಡುವ, ಹಾಡುಗಳ ಅರ್ಥೈಸಿಕೊಂಡು, ಅರಗಿಸಿಕೊಂಡು, ಸಾಧನೆಗೆ ಅಡ್ಡಿಯಾಗುವ ಎಲ್ಲಾ ವಿಷಯಾಸಕ್ತಿಗಳಿಂದ ದೂರವಾಗುವಂತಾಗಲೀ... ಪರಮಾತ್ಮನ ಪಾದಪದುಮಗಳ ಸೇವೆ ಸದಾ ಮಾಡುವಂತಾಗಲೀ ಎಂದು ಹಾರೈಸುತ್ತಾ.....
-Smt. Padma Sirish
ನಾದನಿರಾಜನದಿಂ ದಾಸಸುರಭಿ 🙏🏽
***
No comments:
Post a Comment