..
kruti by Nidaguruki Jeevubai
ಸುಂದರ ಮೂರುತಿ ಹರಿಯೆ ಬಾ-
ರೆಂದು ಕಶ್ಯಪ ಋಷಿ ಅದಿತಿಯರು
ಮಂದಹಾಸದಿ ನಮ್ಮ ಮಂದಿರಕೀಗ ಗೋ-
ವಿಂದ ಬಾ ಶ್ರೀಮುಕುಂದ ಬಾ ಯಾದವ
ವೃಂದ ಬಾ ಬಲುಮುದದಿಂದ ಬಾ ಬಾ-
ರೆಂದು ಕರದಾರು ಶೋಭಾನೆ 1
ಅಚ್ಚುತಾನಂತ ಶ್ರೀಹರಿ ನೀನು
ಸಚ್ಚಿದಾನಂತಾತ್ಮನೆ ನೀನು
ಮಿತ್ರೆ ಲಕುಮಿ ಒಡಗೂಡುತ ಬಾರೆಂದು
ಅತ್ರಿಯರು ಸ್ತುತಿಪರು ಮಿತ್ರೆಯರು ಪಾಡ್ವರು
ಕೀರ್ತಿಪರು ಅನಸೂಯಾತ್ರಿಯರು
ಬಾರೆಂದು ಕರೆದಾರು ಶೋಭಾನೆ 2
ಭಾಗವತರ ಪ್ರಿಯ ಬಾರೆಂದು
ಭಾರದ್ವಾಜರು ಭಕ್ತಿಯಲಿ
ಬಾರಿಬಾರಿಗೆ ಸ್ತುತಿಗೈವರು ಸತಿ ಸುಶೀಲೆ-
ಯರು ಸುಂದರ ನಾರಿಯರು
ಕರೆವರು ಕಂಸಾರಿ
ಬಾರೆಂದು ಕರದಾರು ಶೋಭಾನೆ 3
ಹಸ್ತಿವರದ ಹರಿ ಬಾರೆಂದು
ವಿಶ್ವಾಮಿತ್ರರು ಹರುಷದಲಿ
ಪತ್ನಿ ಕುಮುದ್ವತಿ ಸತಿ ಸಹಿತದಿ ಕರೆವರು
ಭಕ್ತಿಯಲಿ ಪರಮಾಸಕ್ತಿಯಲಿ
ಹರಿಯನು ಸ್ತೋತ್ರದಲಿ
ಭೂ ರಮಾ ಪಾರ್ಥಸಾರಥಿಯ ಕರದಾರು ಶೋಭಾನೆ 4
ಕೌಶಿಕ ಯಜ್ಞಪಾಲನೆ ಬಾ
ಕಂಸನ ಸಭೆಯಲಿ ಸೆಳೆದನೆ ಬಾ
ಹಂಸವಾಹನಪಿತ ಬಾರೆಂದು ಕರೆವರು
ಗೌತಮರು ಪತ್ನಿ ಅಹಲ್ಯೆಯರು
ಪಾಡುತ ಪ್ರಾರ್ಥಿಪರು ಮುರಹರಿ ಗೋಪಾಲ
ಬಾರೆಂದು ಕರದಾರು ಶೋಭಾನೆ 5
ಜಗದುದರನೆ ಶ್ರೀ ಹರಿಯೆ ಬಾ
ನಿಗಮತಂದು ಸುತಗಿತ್ತನೆ ಬಾ
ಝಗಿಝಗಿಸುವ ಆಭರಣಗಳ್ಹೊಳೆಯುತ
ಬಾರೆಂದು ಜಯ ಜಯವೆನ್ನುವರು
ಋಷಿ ಜಗದಗ್ನಿಯರು ರೇಣುಕ ಸಹಿತ
ಶ್ರೀಶನ ಕರದಾರು ಶೋಭಾನೆ 6
ಮಂಗಳ ಮದನ ಗೋಪಾಲನಿಗೆ
ಮಂಗಳ ಯದುಕುಲ ತಿಲಕನಿಗೆ
ಮಂಗಳ ಕಮಲಾನಾಭ ವಿಠ್ಠಲನಿಗೆ
ಮಂಗಳವು ವಶಿಷ್ಠರು ಪಾಡುವರು ಸತಿ ಅ-
ರುಂಧತಿಯರು ಜಯ ಜಯ
ಮಂಗಳವೆಂದು ಕರದಾರು ಶೋಭಾನೆ7
ಶೋಭನವೆನ್ನಿರೆ ಶ್ರೀಹರಿಗೆ
ಶೋಭನವೆನ್ನಿರೆ ಮಾಧವಗೆ
ಶೋಭನವೆನ್ನಿರಿ ಸೊಬಗುಳ್ಳ ದೇವಗೆ ಶೋಭಾನೆ
ಸಿರಿಯರಸಗೆ ದಿವ್ಯ ಶೋಭಾನೆ
ಪರಮಪುರುಷನಿಗೆ ಶೋಭಾನೆ
ಶೋಭನ ಗರುಡಗಮನಗÉಶೋಭನವೆನ್ನಿರೆ ಶೋಭಾನೆ 8
***
No comments:
Post a Comment