ಹರಿಯೆ ಸರ್ವೋತ್ತಮ ಪರದೈವವೆಂತೆಂಬ
ಮರುತ ಮತವ ಸಾರಿರೊ ಪ.
ಗರುವಿಕೆಯನೆ ಬಿಟ್ಟು ಪರಮತವನೆ ಸುಟ್ಟು
ಹರಿಯ ಸೇವಕರಾಗಿರೊ | ಈ ಜಗದೊಳು ಅ.ಪ.
ಪಂಚ ಭೇಧವ ತಿಳಿದು ಪಂಚೇಂದ್ರಿಯವ ಸೆಳೆದು
ಪಂಚ ಮೂರ್ತಿಯ ಭಜಿಸಿರೊ
ಪಂಚ ಸಂಸ್ಕಾರದಿ ಪಂಚಯಜ್ಞವ ರಚಿಸಿ
ಪಂಚ ಮಾರ್ಗವ ಸಾರಿರೊ | ವೈರಾಗ್ಯದಿ 1
ಎಂಟು ಮದಗಳನಳಿದು ಎಂಟು ಮೂರ್ತಿಯ ತಿಳಿದು
ಎಂಟು ದಳದಿ ಕಾಣಿರೊ
ಎಂಟು ಕರ್ತೃತ್ವವ ಎಂಟು ತತ್ವದಿ ಮಾಳ್ಪ
ಎಂಟಕ್ಷರನ ಪಾಡಿರೊ | ಕೊಂಡಾಡಿರೊ 2
ಮೂರು ಗುಣಗಳಿಂದ ಮೂರು ಮಾಳ್ಪ ಜಗವ
ಮೂರು ರೂಪವ ನೆನೆಯಿರೊ
ಮೂರು ಮೂರು ಭಕ್ತಿ ಮೂರು ಮಾರ್ಗದಿ ರಚಿಸಿ
ಮೂರು ಲೋಕವ ಸಾರಿರೊ | ಮೂರನೆ ಗೆದ್ದು 3
ಕಂಡ ದೈವಗಳಿಗೆ ಮಂಡೆಯ ಬಾಗಿಸುತ
ಬೆಂಡು ಆಗಲಿ ಬೇಡಿರೊ
ಹಿಂಡು ದೈವಗಳಿಗೆ ಗಂಡ ಹರಿಯ ಭಜಿಸಿ
ಗಂಡುಗಲಿಯಾಗಿರೊ | ಧೈರ್ಯವ ತಾಳಿ 4
ಗುರುಗಳಿಂದಲಿ ತತ್ವ ಸರ್ವಕಾಲದಿ ತಿಳಿದು
ಉರ್ವಿಯೊಳಗೆ ಬಾಳಿರೊ
ಸರ್ವಾಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ
ಸರ್ವಬಿಂಬನೆನ್ನಿರೊ | ಮೂಲರೂಪಿ 5
***
No comments:
Post a Comment