ಶ್ರೀವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ
(ಹರಿದಾಸ್ಯ ಮುಖ್ಯಲಕ್ಷಣ - ತಾರತಮ್ಯ ಪಂಚಭೇದಜ್ಞಾನ , ಸಕಲವಸ್ತುಗಳಲ್ಲಿ ಚತುರ್ವಿಂಶತಿ ತತ್ವ , ತದಭಿಮಾನಿ ದೇವತೆಗಳು , ಶ್ರೀಹರಿಕರ್ತೃತ್ವ)
ರಾಗ ಕಾಂಬೋಧಿ
ಧ್ರುವತಾಳ
ಸಾಧನವೆಂಬೊದಿದೆ ಸಕಲ ಕಾಲದಲ್ಲಿ
ಆದರದಿಂದಲೆ ಕೇಳೊ ಎಲೊ ಜೀವವೆ
ಭೂದೇವ ದೇಹವಿನ್ನು ಬಾಹೋದೆ ದುರ್ಲಭ
ಮೇದಿನಿಯಲ್ಲಿ ಪುಟ್ಟಿ ಬಂದು ಪೂರ್ಣ -
ಬೋಧರ ಮತದಲ್ಲಿ ಪೊಂದುವದೆ ನಿರ್ಜ -
ರಾದಿಗಳಿಗೆ ಬಲು ದೂರ ಕಾಣೊ
ವೇದ ಭಾಗವತ ರಾಮಾಯಣ ಭಾರತ
ಓದುವ ಪುರಾಣ ಮಿಕ್ಕಾದದಲ್ಲಿ ಪಂಚ -
ಭೇದ ಮಾರ್ಗವೆ ತಿಳಿದು ಕಂಡ ಮತಿಗೊಡದೆ
ಸಾಧಿಸು ಹರಿಯ ಪಾದ ದೃಢತರದಲ್ಲಿ
ಸಾಧನ ನೋಡಿದರು ಸುಲಭದೊಳುಂಟು ಅ -
ಗಾಧವಿಲ್ಲವೊ ಕಾಣೊ ತಿಳಿದ ಮೇಲೆ
ಪೋದ ದಿನಗಳಲ್ಲಿ ಮಾಡಿದ ಕರ್ಮ ಪುಣ್ಯ -
ವಾದದ್ದು ಎನ್ನು ನಿಶ್ಚಲ ಗುಣದಲ್ಲಿ
ಖೇದವ ಬಡದಿರು ವೈಕುಂಠ ನಗರಿಗೆ
ಹಾದಿಯಾಗುವದೊ ಇಲ್ಲೆಂದು ನೀನು
ಆದಿಯಲ್ಲಿ ಹರಿ ಮಾಡಿದ ಕ್ಲಪ್ತಿಗೆ
ಬಾಧೆ ಬಾರದೆಂದು ಕಾಣೊ ಏನಾದರು
ನೀ ಧೈರ್ಯದಲ್ಲಿರು ಮಧ್ವದಾಸರು ನಿತ್ಯ -
ವಾದ ತಮಸ್ಸಿನಲ್ಲಿಗೆ ದೂರರೆಂದೂ
ಕ್ರೋಧರಹಿತ ನಮ್ಮ ವಿಜಯವಿಟ್ಠಲರೇಯನ
ಪಾದವೇ ಕೇವಲ ನಂಬು ನಂಬು ಬಿಡದೆ ॥ 1 ॥
ಮಟ್ಟತಾಳ
ಭಗವನ್ನಿಷ್ಠೆಯಲ್ಲಿ ಭಾಗ್ಯವಂತನಾಗು
ಸಿಗದಲೆ ಸಂಚರಿಸು ಕಾಮಾದಿ ಬಲಿಯಲ್ಲಿ
ಅಗಲದಿರು ನೀನು ಉತ್ತಮ ಗುಣದಿಂದ
ಹಗಲಿರುಳು ಹರಿಯ ವ್ಯಾಪ್ತಿ ಬಗೆಯ ನೆನಸು
ಮಿಗಿಲಾಗಿ ವರ್ಣೋಚಿತ ಕರ್ಮವ ಚಿಂತಿಸು
ಚಿಗದಾಡಿದರೇನು ಕುಣಿದಾಡಿದರೇನು
ತ್ರಿಗುಣವ ಮನೆ ಮಾಡಿ ಅಂತರ್ಯಾಮಿಯಲ್ಲಿ
ನಗೆಮೊಗ ಉಳ್ಳ ಶ್ರೀಹರಿ ಮೂರ್ತಿ ಜೀ -
ವಿಗಳ ಚೇಷ್ಟೆಗಳೆಲ್ಲ ನಡಿಸುವದಹುದೆಂದು
ಜಗದೊಳಗಾದ್ಯಂತ ಬಗೆಗಳ ಕೃಪೆ ತಿಳಿದು
ದುಗುಡ ಸಂತೋಷವನು ಹಚ್ಚಿಕೊಳ್ಳದಿರು
ಖಗವಾಹನ ನಮ್ಮ ವಿಜಯವಿಟ್ಠಲನ್ನ
ಅಗಣಿತ ಸೇವೆಯನು ತಿಳಿದು ಕೊಂಡಾಡುವದು ॥ 2 ॥
ತ್ರಿವಿಡಿತಾಳ
ಒಂದು ಪ್ರಾಕೃತವಾದ ವಸ್ತುವಿನಲ್ಲಿ ಸಂ -
ಬಂಧವಾಗಿಪ್ಪದು ಚತುರವಿಂಶತಿ ತತ್ವ
ಮಂದಿಗಳು ತಮ್ಮ ಸತಿಯರೊಡನೆ ಬಿಡದೆ
ಮುಂದೆ ಈರಾರು ದ್ವಾದಶ ಜಡಗಳು
ಕುಂದದಲಿಪ್ಪವು ಇದೆ ಸಿದ್ದವೆಂಬೋದು
ನಂದ ಮೂರುತಿ ಲಕುಮಿ ನಾರಾಯಣ
ಒಂದಾಗಿ ಇಪ್ಪರು ಏನೆಂಬೆ ಇದೆ ಗುಣಿಸು
ಎಂದಿಗೆ ನಿನಗೆ ಪಾತಕವಾಗದು
ಕುಂದಣಕ್ಕೆ ಪುಟವೆ ವಿಜಯವಿಟ್ಠಲರೇಯನ
ಹೊಂದಿದ ನರರಿಗೆ ಪ್ರಥಕು ಪೂಜೆಗಳುಂಟೇ ॥ 3 ॥
ಅಟ್ಟತಾಳ
ಅಡಿಗಳಿಡುವದು ಕರವ ಬೀಸುವದು
ನುಡಿವದು ನಾಲಿಗೆಯಿಂದಾಡೋದು ಓಡೋದು
ಎಡೆಯಲ್ಲಿ ಕುಳಿತು ತುತ್ತು ಎತ್ತಿ ಮೆಲುವೋದು
ಒಡಲ ತೃಪ್ತಿಯಾಗಿ ತೇಗೋದು ನಲಿವದು
ವಡನೆ ಕರ್ಣಗಳಿಂದ ಕೇಳುವ ಸಂಭ್ರಮ
ಕುಡಿವ ಉದಕ ಮಿಕ್ಕಾದ ಚೇಷ್ಟೆಗಳೆಲ್ಲಾ
ಪೊಡವೇಶ ರಂಗನ ಆರಾಧನೆ ಎನ್ನು
ಅಡಿಗಡಿಗೆ ಇದೆ ಮರಿಯದೆ ಯೋಚಿಸು
ಬಡವರಾಧಾರಕ ವಿಜಯವಿಟ್ಠಲರೇಯ
ಕೆಡಗೊಡ ಸುಕೃತ ತೋರುವನಧಿಕ ಮಾಡಿ ॥ 4 ॥
ಆದಿತಾಳ
ಕೊಡಿಸುವ ಬೇಡಿಸುವ ಕೊಡಿಸ ಬೇಡಿಸನು
ಕೊಡಿಸುವ ಬೇಡಿಸನು ಕೊಡಿಸ ಬೇಡಿಸುವಾ
ಬಡಿವಾರ ದೀನತನ ದೃಢ ಚಂಚಲ ವೃತ್ತಿ
ನಡುಗುವುದು ನಿರ್ಭಯ ತಡೆಯದೆ ಈ ಬಗೆ
ಕಡೆ ಮೊದಲಿಲ್ಲದೆ ಬಿಡದೆ ಧ್ಯಾನಿಸಿದರೆ
ಜಡಮತಿಗಾದರು ಕಡುಜ್ಞಾನ ಪುಟ್ಟುವುದು
ಒಡಿಯ ರಂಗನ ಮಾಯ ಅಡಿಗಡಿಗಿಪ್ಪದು
ನುಡಿಗೆ ಒಲಿವ ನಮ್ಮ ವಿಜಯವಿಟ್ಠಲರೇಯ
ಕೊಡನು ತಾಮಸ ಬುದ್ಧಿ ಪಡಕೊಂಡ ಜ್ಞಾನಿಗಳಿಗೆ ॥ 5 ॥
ಜತೆ
ವಿಧಿ ನಿಷೇಧಗಳೆರಡು ಕರ್ಮಕ್ಕೆ ಪ್ರೇರಕ
ವಿಧಿಪಿತ ವಿಜಯವಿಟ್ಠಲ ನೀನೆ ಸಾಧನಾ ॥
****
No comments:
Post a Comment